ಸುಪ್ರೀಂ ಕೋರ್ಟ್‌ ಆದೇಶದ ವಿವರ ಕೇಳಿದ ಹೈಕೋರ್ಟ್‌

7
ದತ್ತಪೀಠದ ಪೂಜಾ ವಿವಾದ

ಸುಪ್ರೀಂ ಕೋರ್ಟ್‌ ಆದೇಶದ ವಿವರ ಕೇಳಿದ ಹೈಕೋರ್ಟ್‌

Published:
Updated:
Deccan Herald

ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯ ದತ್ತಾತ್ರೇಯ ಪೀಠದ ಪೂಜಾ ವಿವಾದ ಕುರಿತ ನ್ಯಾಯಾಂಗ ನಿಂದನೆ ಅರ್ಜಿಯ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಪ್ರತಿಯನ್ನು ಸಲ್ಲಿಸಿ’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಸೈಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ ಅವರನ್ನು ಮುಜಾವರ್ ಆಗಿ ನೇಮಿಸಿದ್ದ ಕ್ರಮವನ್ನು ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಟ್ರಸ್ಟಿ ನಾಗರಾಜ್ ಅರಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ದಿನೇಶ್ ರಾವ್ ಅವರು, ‘ಸೈಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಸೋಮವಾರವಷ್ಟೇ (ಅ.8) ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನೋಟಿಸ್ ಜಾರಿಗೆ ಆದೇಶಿಸಿರುವ ಪ್ರತಿಯನ್ನು ಸಲ್ಲಿಸಿ’ ಎಂದು ಎಎಜಿಗೆ ಸೂಚಿಸಿ ಇದೇ 26ಕ್ಕೆ ವಿಚಾರಣೆ ಮುಂದೂಡಿತು.

ಇದೇ ವೇಳೆ ಮುಜಾವರ್ ನೇಮಿಸಿ 2018ರ ಮಾರ್ಚ್‌ 19ರಂದು ಹೊರಡಿಸಿರುವ ಆದೇಶವನ್ನು ಜಾರಿಗೊಳಿಸುವುದಿಲ್ಲ ಎಂದು ಈ ಹಿಂದೆ ಸರ್ಕಾರ ನೀಡಿರುವ ಮುಚ್ಚಳಿಕೆ ಆಧಾರದ ಮೇಲೆ ಮಾಡಿದ್ದ ಮಧ್ಯಂತರ ವ್ಯವಸ್ಥೆಯನ್ನು ನ್ಯಾಯಪೀಠ ಮುಂದುವರಿಸಿತು.

‘ಧಾರ್ಮಿಕ ಆಚರಣೆಗಳಲ್ಲಿನ ನಮ್ಮ ಪಾತ್ರವನ್ನು ಸೀಮಿತಗೊಳಿಸಲಾಗಿದೆ. ಆಡಳಿತ ನಿರ್ವಹಣೆ ಹೊಣೆಯನ್ನು ಕಿತ್ತುಕೊಳ್ಳಲಾಗಿದೆ’ ಎಂದು ಆಕ್ಷೇಪಿಸಿ ದರ್ಗಾದ ಸಜ್ಜಾದ ನಶೀನ್‌ (ಸೂಫಿ ಸಂತರ ಉತ್ತರಾಧಿಕಾರಿ) ಸೈಯ್ಯದ್‌ ಗೌಸ್‌ ಮೊಹಿಯುದ್ದೀನ್‌ ಷಾ ಖಾದ್ರಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !