ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ರದ್ದುಪಡಿಸಿ: ಜಾಗೃತ ವೇದಿಕೆ ಆಗ್ರಹ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹ
Last Updated 16 ಫೆಬ್ರುವರಿ 2022, 5:28 IST
ಅಕ್ಷರ ಗಾತ್ರ

ಬೆಂಗಳೂರು: ‘ನೇಮಕಾತಿಗಳಲ್ಲಿ ನಡೆದಿರುವ ಅಕ್ರಮ, ಅವ್ಯವಹಾರ ಹಾಗೂ ಭ್ರಷ್ಟಾಚಾರಗಳಿಗೆ ಕೆಪಿಎಸ್‌ಸಿಯೇ ಮೂಲ ಕಾರಣ. ಹೀಗಾಗಿ ಸರ್ಕಾರವು ಕೆ‍ಪಿಎಸ್‌ಸಿಯನ್ನೇ ರದ್ದುಗೊಳಿಸಿ ಯುಪಿಎಸ್‌ಸಿ ಮಾದರಿಯಲ್ಲಿ ನೇಮಕಾತಿಗೆ ಕ್ರಮ ಕೈಗೊಳ್ಳಲಿ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಆಗ್ರಹಿಸಿದೆ.

ಕೆಪಿಎಸ್‌ಸಿಯನ್ನು ಭ್ರಷ್ಟಮುಕ್ತಗೊಳಿಸಲು ಒತ್ತಾಯಿಸಿ ಮೈಸೂರಿನಿಂದ ಜಾಥದ ಮೂಲಕ ನಗರಕ್ಕೆ ಬಂದ ವೇದಿಕೆ ಸದಸ್ಯರು ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

‘1998, 1999 ಹಾಗೂ 2004ರ ಕೆಎಎಸ್‌ ನೇಮಕಾತಿಗಳನ್ನು ಸರಿಪಡಿಸಬೇಕು. ಈ ಸಂಬಂಧ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಪಾಲಿಸಬೇಕು. ಅವುಗಳ ಜಾರಿಗೆ ಮುಂದಾಗಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಸಿಐಡಿ ಹಾಗೂ ಸತ್ಯಶೋಧನ ಸಮಿತಿ ಗುರುತಿಸಿರುವ, ಗ್ರೂಪ್‌ ‘ಎ’ ಹಾಗೂ ‘ಬಿ’ ಹುದ್ದೆಗಳಿಗೆ ನೇಮಕಗೊಂಡು ಸೇವೆಯಲ್ಲಿರುವ ಅಧಿಕಾರಿಗಳನ್ನು ನ್ಯಾಯಾಲಯದ ಆದೇಶದಂತೆ ವಜಾಗೊಳಿಸಬೇಕು. ಐಎಎಸ್‌ ಹುದ್ದೆಗಳಿಗೆ ಪದೋನ್ನತಿ ಹೊಂದಲು ಅರ್ಹರಾಗಿರುವ ಪ್ರತಿಭಾವಂತ ಅಭ್ಯರ್ಥಿಗಳ ಹೆಸರನ್ನು ರಾಜ್ಯ ಸರ್ಕಾರ ಕೂಡಲೇ ಶಿಫಾರಸು ಮಾಡಬೇಕು’ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್‌.ಶಿವರಾಮು ಆಗ್ರಹಿಸಿದರು.

ಕಾಂಗ್ರೆಸ್‌ ಮುಖಂಡ ಪ್ರೊ.ಬಿ.ಕೆ.ಚಂದ್ರಶೇಖರ್‌, ಮುಖ್ಯಮಂತ್ರಿ ಚಂದ್ರು, ಮುಖಂಡರಾದ ಲೋಕೇಶ್‌ ಕುಮಾರ್‌, ಮಹೇಂದ್ರ ಕಾಗಿನೆಲೆ, ಡಿ.ಪಿ.ಪ್ರಕಾಶ್‌, ಆರ್‌.ಕೆ.ರವಿ, ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎನ್‌.ಆರ್‌.ನಾಗೇಶ್‌, ಮೈಸೂರು ಜಿಲ್ಲಾ ಉಪ್ಪಾರರ ಸಂಘದ ಅಧ್ಯಕ್ಷ ಯೋಗೇಶ್‌ ಉಪ್ಪಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT