ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್ಸಿ ಪ್ರಾಂಗಣದಲ್ಲಿ ‘ಬಾಗ್ಚಿ-–ಪಾರ್ಥಸಾರಥಿ ಆಸ್ಪತ್ರೆ’

800 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ₹ 450 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು
Last Updated 14 ಫೆಬ್ರುವರಿ 2022, 20:12 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಂಗಣದಲ್ಲಿ 800 ಹಾಸಿಗೆಗಳ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾಲಯ ನಿರ್ಮಾಣವಾಗಲಿದೆ.ಉದ್ಯಮಿ ಸುಬ್ರೋತೊ ಬಾಗ್ಚಿ ಮತ್ತು ಸುಷ್ಮಿತಾ ಹಾಗೂ ಎನ್.ಎಸ್. ಪಾರ್ಥಸಾರಥಿ ಮತ್ತುರಾಧಾ ಅವರು ಈ ಆಸ್ಪತ್ರೆ ನಿರ್ಮಾಣಕ್ಕಾಗಿ ₹ 450 ಕೋಟಿ ದೇಣಿಗೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಐಐಎಸ್ಸಿ ನಿರ್ದೇಶಕ ಪ್ರೊ. ಗೋವಿಂದನ್ ರಂಗರಾಜನ್, ‘ಶತಮಾನಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ನಮ್ಮ ಸಂಸ್ಥೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಶಿಕ್ಷಣ ಒದಗಿಸುತ್ತಿದೆ. ವಿಜ್ಞಾನ ಮತ್ತು ಎಂಜಿನಿಯರಿಂಗ್‌ ಜೊತೆ ವೈದ್ಯಕೀಯ ಕ್ಷೇತ್ರದ ಸಂಶೋಧನೆ ಮತ್ತು ಶಿಕ್ಷಣವನ್ನು ಬೆಸೆಯಲು ಪ್ರಾಂಗಣದಲ್ಲಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸುವ ಯೋಜನೆ ರೂಪಿಸಿದ್ದೇವೆ. ಈ ಸಲುವಾಗಿ ಪ್ರಾಂಗಣದಲ್ಲಿ ‘ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ’ಯನ್ನು ಸ್ಥಾಪಿಸಲು ಉದ್ಯಮಿಗಳಾದ ಸುಷ್ಮಿತಾ ಮತ್ತು ಸುಬ್ರೋತೊ ಬಾಗ್ಚಿ ಹಾಗೂ ರಾಧಾ ಮತ್ತು ಎನ್.ಎಸ್.ಪಾರ್ಥಸಾರಥಿ ಆರ್ಥಿಕ ನೆರವು ಒದಗಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

‘ಸಂಸ್ಥೆಯಲ್ಲಿ ಒಗ್ಗೂಡಿತ ಉಭಯ ಪದವಿ (ಎಂ.ಡಿ-ಪಿಎಚ್‌.ಡಿ) ಯೋಜನೆಯನ್ನು ಆರಂಭಿಸಲಾಗುತ್ತಿದೆ. ಹೊಸ ಮಾದರಿಯ ಶೈಕ್ಷಣಿಕ ಕಾರ್ಯಕ್ರಮವು ವೈದ್ಯ-ವಿಜ್ಞಾನಿಗಳನ್ನು ರೂಪಿಸುವ ಉದ್ದೇಶವನ್ನು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಮತ್ತುಸಂಸ್ಥೆಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಪ್ರಯೋಗಾಲಯಗಳಲ್ಲಿ ತರಬೇತಿ ಪಡೆಯಲಿದ್ದಾರೆ’ ಎಂದು ಅವರು ವಿವರಿಸಿದರು.

‘ಹೊಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲಾಭರಹಿತವಾಗಿ ನಿರ್ವಹಿಸಲಾಗುತ್ತದೆ. ಈ ಯೋಜನೆಗೆ ಬಾಗ್ಚಿ ಹಾಗೂ ಪಾರ್ಥಸಾರಥಿ ದಂಪತಿಗಳು ಒಟ್ಟು₹ 425 ಕೋಟಿ ನೆರವು ನೀಡಲಿದ್ದಾರೆ. ಆಸ್ಪತ್ರೆ ಸ್ಥಾಪನೆಗಾಗಿ ಸ್ವೀಕರಿಸುತ್ತಿರುವ ಈ ದೇಣಿಗೆ ನಮ್ಮ ಸಂಸ್ಥೆ ಇರುವರೆಗೆ ಸ್ವೀಕರಿಸಿರುವ ಖಾಸಗಿ ದೇಣಿಗೆಗಳಲ್ಲೇ ಗರಿಷ್ಠ ಮೊತ್ತದ್ದು’ ಎಂದರು.

‘ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆಯು ರೋಗನಿರ್ಣಯ, ಚಿಕಿತ್ಸೆ ಮತ್ತು ಸಂಶೋಧನೆಗೆ ಸುಧಾರಿತ ಸೌಲಭ್ಯಗಳನ್ನು ಹೊಂದಿರಲಿದೆ. ಕ್ಯಾನ್ಸರ್‌ ವಿಜ್ಞಾನ (ಆಂಕಾಲಾಜಿ), ಹೃದ್ರೋಗ ವಿಜ್ಞಾನ, ನರವಿಜ್ಞಾನ, ಅಂತಃಸ್ರಾವ ವಿಜ್ಞಾನ (ಎಂಡೊಕ್ರೈನಾಲಜಿ), ಉದರ ವಿಜ್ಞಾನ (ಗ್ಯಾಸ್ಟ್ರೋಎಂಟರಾಲಜಿ), ಮೂತ್ರಪಿಂಡ ವಿಜ್ಞಾನ (ನೆಫ್ರಾಲಜಿ ಮತ್ತು ಯುರಾಲಜಿ), ಚರ್ಮರೋಗ ವಿಜ್ಞಾನ ಮತ್ತು ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಕಸಿ, ರೋಬೋಟಿಕ್ ಶಸ್ತ್ರಚಿಕಿತ್ಸೆ, ನೇತ್ರವಿಜ್ಞಾನ ಸೇರಿದಂತೆ ಹವು ವಿಶೇಷ ವಿಭಾಗಗಳನ್ನು ಆರಂಭಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾನದಂಡಗಳ ಪ್ರಕಾರ, ನಿರ್ದಿಷ್ಟ ಎಂ.ಡಿ- ಪಿಎಚ್. ಡಿ, ಎಂ.ಡಿ/ಎಂ.ಎಸ್ ಮತ್ತು ಡಿ.ಎಂ/ ಎಂಸಿಎಚ್ ಕಾರ್ಯಕ್ರಮಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅವರ ತರಗತಿ ಮತ್ತು ಪ್ರಯೋಗಾಲಯ ಕಲಿಕೆಯೊಂದಿಗೆ ಆಸ್ಪತ್ರೆಯ ಸೂಕ್ತ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಸಮಗ್ರ ವಿದ್ಯುನ್ಮಾನ ವೈದ್ಯಕೀಯ ದಾಖಲೆ ವ್ಯವಸ್ಥೆ (ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ ಮೆಡಿಕಲ್ ರೆಕಾರ್ಡ್ ಸಿಸ್ಟಮ್ಸ್) ಮತ್ತು ಹ್ಯಾಪ್ಟಿಕ್ಸ್ ಇಂಟರ್‌ಫೇಸ್‌ಗಳೊಂದಿಗೆ ಸಮಗ್ರ ಟೆಲಿಮೆಡಿಸಿನ್ ವ್ಯವಸ್ಥೆಯೊಂದಿಗೆ ಆಸ್ಪತ್ರೆಯು ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಪರಿಹಾರಗಳನ್ನು ಒಳಗೊಂಡಿರಲಿದೆ’ ಎಂದು ತಿಳಿಸಿದರು. ಸುಬ್ರೋತೊ ಬಾಗ್ಚಿ ಹಾಗೂ ಎನ್.ಎಸ್.ಪಾರ್ಥಸಾರಥಿ ಅವರು ಮೈಂಡ್‌–ಟ್ರೀ ಸಂಸ್ಥೆಯ ಸಹಸಂಸ್ಥಾಪಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT