ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಮೆಟ್ರೊ ರೈಲು ಪರೀಕ್ಷಾರ್ಥ ಸಂಚಾರ ಆರಂಭ

ವೈಟ್‌ಫೀಲ್ಡ್‌- –ಪಟ್ಟಂದೂರು ಅಗ್ರಹಾರ(ಐಟಿಪಿಎಲ್) ನಡುವಿನ 3.5 ಕಿ.ಮೀ
Last Updated 21 ಅಕ್ಟೋಬರ್ 2022, 20:49 IST
ಅಕ್ಷರ ಗಾತ್ರ

ಬೆಂಗಳೂರು: ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಮೆಟ್ರೊ ರೈಲು ಸಂಚಾರದ ಕಾಲ ಹತ್ತಿರವಾಗಿದ್ದು, ಶುಕ್ರವಾರ ಪರೀಕ್ಷಾರ್ಥ ಸಂಚಾರವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ಆರಂಭಿಸಿದೆ.

ವೈಟ್‌ಫೀಲ್ಡ್‌- ಪಟ್ಟಂದೂರು ಅಗ್ರಹಾರ(ಐಟಿಪಿಎಲ್) ನಡುವಿನ 3.5 ಕಿ.ಮೀ. ಪರೀಕ್ಷಾರ್ಥ ಸಂಚಾರವನ್ನು ಆರಂಭಿಸಲಾಯಿತು. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸಿ, ಚಾಲನೆ ನೀಡಿದರು.

ಕಳೆದ ಶುಕ್ರವಾರವಷ್ಟೇ(ಅ.14) ರೈಲು ಬೋಗಿಗಳನ್ನು ವೈಟ್‌ಫೀಲ್ಡ್‌ ಮೆಟ್ರೊ ಡಿಪೊಗೆ ಸಾಗಿಸಿ ಹಳಿಗಳ ಮೇಲೆ ಇಳಿಸ ಲಾಗಿತ್ತು. ಅ.25ರಿಂದ ಪರೀಕ್ಷಾರ್ಥ ಸಂಚಾರ ಆರಂಭಿಸಲಾಗುವುದು ಎಂದು ಬಿಎಂಆರ್‌ ಸಿಎಲ್ ತಿಳಿಸಿತ್ತು. ನಾಲ್ಕು ದಿನ ಮುಂಚಿತ ವಾಗಿಯೇ ಸಂಚಾರ ಆರಂಭಿಸಿದೆ.

ಮೊದಲ ದಿನ ಆರು ಬೋಗಿಗಳ ಒಂದು ರೈಲು ಸಂಚರಿಸಿದೆ. ಶೀಘ್ರವೇ ಮತ್ತೊಂದು ರೈಲು ಸಂಚರಿಸಲಿದೆ. ಇಂತಿಷ್ಟೇ ಅವಧಿ ಎಂದು ನಿಗದಿಪಡಿಸಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ‘ಸದ್ಯಕ್ಕೆ ವೈಟ್‌ಫೀಲ್ಡ್‌– ಪಟ್ಟಂದೂರು ಅಗ್ರಹಾರ ನಡುವೆಯಷ್ಟೇ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಗರುಡಾಚಾರ್ ಪಾಳ್ಯ ತನಕ ಟ್ರ್ಯಾಕ್ ಮತ್ತು ಸಿಗ್ನಲಿಂಗ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮುಂದಿನ ವಾರದಲ್ಲಿ ಗರುಡಾಚಾರ್‌ ಪಾಳ್ಯದ ತನಕ ರೈಲುಗಳ ಸಂಚರಿಸಲಿವೆ.ಕೆಲವೇ ದಿನಗಳಲ್ಲಿ ಬೈಯಪ್ಪನಹಳ್ಳಿ ತನಕ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ’ ಎಂದು ಅಂಜುಂ ಪರ್ವೇಜ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ನಿಲ್ದಾಣ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜ್ಯೋತಿಪುರ ನಿಲ್ದಾಣ ಕಾಮಗಾರಿಗೆ ಮಾತ್ರ ಹೆಚ್ಚಿನ ಸಮಯ ಬೇಕಾಗಲಿದೆ. ಜನವರಿ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ’ ಎಂದು ಹೇಳಿದರು.

ಅಷ್ಟರಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡು ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆಯೂ ಪೂರ್ಣಗೊಳ್ಳಲಿದೆ. 2023ರ ಜನವರಿ ಕೊನೆ ಅಥವಾ ಫೆಬ್ರುವರಿಯಲ್ಲಿ ಬೈಯಪ್ಪನಹಳ್ಳಿ–ವೈಟ್‌ಫೀಲ್ಡ್‌ ಮೆಟ್ರೊ ರೈಲು ಸಂಚಾರ ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT