ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರ್ಷ ಹತ್ಯೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ
Last Updated 11 ಮೇ 2022, 22:30 IST
ಅಕ್ಷರ ಗಾತ್ರ

ಬೆಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಹತ್ತು ಜನ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಹೆಚ್ಚಿನ ತನಿಖೆಗಾಗಿ 90 ದಿನಗಳಿಂದ 180 ದಿನಗಳಿಗೆ ಹೆಚ್ಚಿಸಬೇಕೆಂಬರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮನವಿಯನ್ನು ವಿಶೇಷ ನ್ಯಾಯಾಲಯ ಮಾನ್ಯ ಮಾಡಿದೆ.

ಈ ಕುರಿತಂತೆ ಎನ್‌ಐಎ ಪರ ವಕೀಲರು ಸಲ್ಲಿಸಿದ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಉಸ್ತುವಾರಿ ನ್ಯಾಯಾಧೀಶ ಕಸನಪ್ಪ ನಾಯಕ್‌ ಬುಧವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಎನ್‌ಐಎ ಪರ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್, ‘ಪ್ರಕರಣದಲ್ಲಿ ಈಗಾಗಲೇ ಆರೋಪಿಗಳ ಗುರುತು ಪತ್ತೆಯ ಪೆರೇಡ್‌ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ, ಪ್ರತ್ಯಕ್ಷ ಸಾಕ್ಷಿಗಳ ವಿಚಾರಣೆ ನಡೆಯಬೇಕಿದೆ. ಅಂತೆಯೇ, ಆರೋಪಿಗಳು ಬಳಸುತ್ತಿದ್ದ ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ಸಿಡಿಆರ್ ವಿಶ್ಲೇಷಣೆಯು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಇನ್ನೂ ನಡೆಯಬೇಕಿದೆ’ ಎಂದು
ತಿಳಿಸಿದರು.

‘ಹತ್ಯೆ ನಡೆಸಿ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಲು ನಡೆಸಲಾದ ಪಿತೂರಿ ಮತ್ತು ಸಂಚನ್ನು ಕಾರ್ಯಗತಗೊಳಿಸಿದ ಬಗೆ, ಇದಕ್ಕಾಗಿ ಎಲ್ಲಿಂದ ಹಣಕಾಸಿನ ನೆರವು ಪಡೆಯಲಾಯಿತು ಎಂಬುದನ್ನೆಲ್ಲಾ ಪತ್ತೆ ಹಚ್ಚಬೇಕಿದೆ. ಆದಕಾರಣ, ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ–1967ರ ಕಲಂ 43ಡಿ (2)(ಬಿ) ಅಡಿಯಲ್ಲಿ 190 ದಿನಗಳಿಗೆ ವಿಸ್ತರಿಸಿ ಆದೇಶಿಸಬೇಕು’ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 180 ದಿನಗಳಿಗೆ ವಿಸ್ತರಿಸಿ ಆದೇಶಿಸಿದರು. 2022ರ ಫೆಬ್ರುವರಿ 20 ರಂದು ರಾತ್ರಿ 9 ಗಂಟೆಯ ವೇಳೆಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT