ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರೀದ್‌: ಬೆಂಗಳೂರಿನಲ್ಲಿ ಸರಳ ಆಚರಣೆ

ಈದ್ಗಾ ಮೈದಾನಗಳ ಬದಲು ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ
Last Updated 21 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಗ, ಬಲಿದಾನಗಳ ಸಂಕೇತದ ಬಕ್ರೀದ್ ಅನ್ನು ಕೋವಿಡ್‌ ಕಾರಣ ಬುಧವಾರ ಸರಳವಾಗಿ ಆಚರಿಸಲಾಯಿತು. ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಅವಕಾಶ ಇರಲಿಲ್ಲವಾದ್ದರಿಂದ ಮಸೀದಿಗಳಲ್ಲಿಯೇ ಪ್ರಾರ್ಥನೆಯ ಮೂಲಕ ಮುಸ್ಲಿಮರು ಅಲ್ಲಾಹುವನ್ನು ಸ್ಮರಿಸಿದರು.

ಮಸೀದಿಗಳಲ್ಲಿಯೇ ವಿಶೇಷ ನಮಾಜ್ ಸಲ್ಲಿಸುವಂತೆ ಸಿಟಿ ಮಾರುಕಟ್ಟೆಯ ಜಾಮಿಯಾ ಮಸೀದಿ ಮೌಲಾನಾ ಮಖ್ಸೂದ್ ಇಮ್ರಾನ್ ರಶಾದಿಯವರು ಈ ಹಿಂದೆಯೇ ಕರೆ ನೀಡಿದ್ದರು. ಅವರ ಕರೆಗೆ ಓಗೊಟ್ಟು ಮಸೀದಿಗಳಲ್ಲಿ ನಮಾಜ್ ಮಾಡಿದರು.

ಕಲಾಸಿಪಾಳ್ಯ, ಚಾಮರಾಜಪೇಟೆ, ಶಿವಾಜಿನಗರ, ಬಿಟಿಎಂ ಲೇಔಟ್, ಪಾದರಾಯನಪುರ, ಹೆಬ್ಬಾಳ, ಆರ್.ಟಿ. ನಗರ, ಶಾಂತಿನಗರ, ಮೈಸೂರು ರಸ್ತೆ, ಜಯನಗರ, ಲಾಲ್‍ಬಾಗ್ ರಸ್ತೆ, ಮಾಗಡಿ ರಸ್ತೆ ಸೇರಿದಂತೆ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಿತು. ಒಂದು ಮಸೀದಿಯಲ್ಲಿ ಒಮ್ಮೆಗೆ 50 ಜನರಿಗೆ ಮಾತ್ರ ಅವಕಾಶವಿತ್ತು. ಬೆಳಿಗ್ಗೆ 6.30 ಹಾಗೂ 8.30ಕ್ಕೆ ತಲಾ 50 ಜನರಂತೆ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡಲಾಯಿತು.

ದೇಹದ ಉಷ್ಣಾಂಶ ಪರೀಕ್ಷೆ ನಡೆಸಿದ ನಂತರವೇ ಮಸೀದಿಗಳ ಒಳಗೆ ಬಿಡಲಾಗುತ್ತಿತ್ತು. ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಮಾಸ್ಕ್ ಧರಿಸದೆ ಬಂದವರಿಗೆ ಮಸೀದಿಯಲ್ಲೇ ಮಾಸ್ಕ್‌ಗಳನ್ನು ಕೂಡ ವಿತರಿಸಲಾಯಿತು.

ಕೈ ಕುಲುಕುವುದು ಹಾಗೂ ಆಲಿಂಗನ ಮಾಡಲು ಅವಕಾಶವಿರಲಿಲ್ಲ. ನಮಾಜ್ ವೇಳೆ ಅಂತರ ಕಾಯ್ದುಕೊಳ್ಳಲಾಯಿತು. ಮಕ್ಕಳು ಹಾಗೂ ಹಿರಿಯ ನಾಗರಿಕರು ತಮ್ಮ ತಮ್ಮ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳ ಮುಂಭಾಗದಲ್ಲಿ ಗುಲಾಬಿ ಹೂವಿನ ದಳಗಳ ಮಾರಾಟ ವ್ಯವಸ್ಥೆಯೂ ಇತ್ತು.

ಮಕ್ಕಳಾದಿಯಾಗಿ ಎಲ್ಲರೂ ಹೊಸ ಬಟ್ಟೆ ತೊಟ್ಟು, ಟೋಪಿಯೊಂದಿಗೆ ಕಂಗೊಳಿಸಿದರೆ, ಹೆಂಗಳೆಯರು, ಮಹಿಳೆಯರು ಕೂಡ ಹೊಸ ಬಟ್ಟೆ, ಕೈಗಳಲ್ಲಿ ಮೆಹಂದಿ ರಂಗಿನೊಂದಿಗೆ ಕಂಗೊಳಿಸಿದರು. ರಾತ್ರಿಯ ವೇಳೆಗೆ ಬಂಧುಗಳು, ಆತ್ಮೀಯರನ್ನು ಊಟಕ್ಕೆ ಆಹ್ವಾನಿಸಿ ಹಬ್ಬ ಮಾಡಿದರು.

ಗೋಹತ್ಯೆ ನಿಷೇಧದ ನಂತರದ ಮೊದಲ ಬಕ್ರೀದ್‌

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ನಡೆದ ಮೊದಲ ಬಕ್ರೀದ್‌ ಇದು. ಗೋಮಾಂಸ ಸೇವನೆಯೂ ಸಾಮಾನ್ಯವಾಗಿರುತ್ತಿದ್ದ ಈ ಹಬ್ಬವು, ಬುಧವಾರ ಕುರಿ–ಕೋಳಿ ಮಾಂಸ ಸೇವನೆಗೆ ಸೀಮಿತವಾಗಿತ್ತು.

‘ಹಂಚುವುದೇ ಹಬ್ಬ’

‘ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ಸಂಕೇತವಾಗಿ ಆಚರಿಸುವ ಈ ಹಬ್ಬದಲ್ಲಿ ಪ್ರಾಣಿ ಬಲಿ ಕೊಡುವುದು ವಾಡಿಕೆ. ಬಲಿ ಅರ್ಪಿಸಿದ ಮಾಂಸವನ್ನು ಸಮನಾಗಿ ಮೂರು ಭಾಗ ಮಾಡಿ ಒಂದು ಭಾಗ ಸ್ವತಃ ಬಳಸಿಕೊಳ್ಳುವುದು, ಇನ್ನೆರಡು ಭಾಗವನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಬಡವರೂ ಸೇರಿದಂತೆ ಹಬ್ಬದ ಊಟದಿಂದ ಯಾರು ವಂಚಿತರಾಗಬಾರದು ಎನ್ನುವುದು ಇದರ ಉದ್ದೇಶ’ ಎಂದು ಮುಸ್ಲಿಂ ಮುಖಂಡರೊಬ್ಬರು ಹೇಳಿದರು.

ಅದರಂತೆ, ಬಡವರಿಗೆ ಆಹಾರ–ಹೊಸ ಬಟ್ಟೆ ಹಂಚುವ ಕಾರ್ಯವೂ ನಗರದಲ್ಲಿ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT