ಶುಕ್ರವಾರ, ಆಗಸ್ಟ್ 23, 2019
25 °C
ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್‌ ಆಚರಣೆ

ಬಕ್ರೀದ್‌: ಪ್ರವಾಹ ಸಂತ್ರಸ್ತರಿಗಾಗಿ ಪ್ರಾರ್ಥನೆ

Published:
Updated:
Prajavani

ಬೆಂಗಳೂರು: ಬಕ್ರೀದ್ ಹಬ್ಬವನ್ನು ನಗರದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ರಾಜ್ಯದಲ್ಲಿ ಪ್ರವಾಹದಲ್ಲಿ ಸಿಲುಕಿದವರ ಸಂಕಷ್ಟ ದೂರಾಗಲಿ ಎಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ವೇಳೆ ಬೇಡಿಕೊಂಡರು.

ಈದ್ಗಾ ಮೈದಾನ ಮತ್ತು ಮಸೀದಿಗಳ ಬಳಿ ಹೊಸ ಬಟ್ಟೆಗಳನ್ನು ತೊಟ್ಟು ಸಡಗರದಿಂದ ಮಕ್ಕಳೊಂದಿಗೆ ನೆರೆದಿದ್ದ ಮುಸ್ಲಿಮರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ನೆರವಿಗಾಗಿ ಹಣ ಸಂಗ್ರಹ: ಪ್ರವಾಹ ಪೀಡಿತರ ನೆರವಿಗಾಗಿ ಅಗತ್ಯ ವಸ್ತುಗಳು ಮತ್ತು ಹಣದ ಸಂಗ್ರಹ ಕಾರ್ಯವೂ ನಡೆಯಿತು.

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಶಾಸಕ ಜಮೀರ್ ಅಹಮದ್ ಖಾನ್‌, ‘ಪ್ರವಾಹದಲ್ಲಿ ಜನ ಸಿಲುಕಿರುವ ಸಂದರ್ಭದಲ್ಲಿ ಬೇಸರದಿಂದಲೇ ಹಬ್ಬ ಆಚರಿಸುತ್ತಿದ್ದೇವೆ. ಸಂತ್ರಸ್ತರ ನೆರವಿಗಾಗಿ ₹7 ಲಕ್ಷ ಸಂಗ್ರಹಿಸಲಾಗಿದೆ. ಎಲ್ಲಾ ಮಸೀದಿಗಳಲ್ಲೂ ನಿಧಿ ಸಂಗ್ರಹ ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು.

ಮೈಸೂರು ರಸ್ತೆ, ಫ್ರೇಜರ್ ಟೌನ್, ಮಿಲ್ಲರ್ಸ್ ರಸ್ತೆ, ಆರ್.ಟಿ.ನಗರ, ಲಾಲ್‍ಬಾಗ್ ರಸ್ತೆ, ಕೋರಮಂಗಲ, ಯಲಹಂಕ, ಯಶವಂತಪುರ, ಇಂದಿರಾನಗರ, ಕೆ.ಆರ್.ಪುರ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದವು.

ಪ್ರಾರ್ಥನೆ ಸಂದರ್ಭದಲ್ಲಿ ಈದ್ಗಾ ಮೈದಾನದ ಹೊರ ಭಾಗದಲ್ಲಿ ಕುಳಿತಿದ್ದ ಬಡವರಿಗೆ ಕೆಲವರು ಹಣ್ಣು, ಬಟ್ಟೆ, ಹಣ ದಾನ ಮಾಡಿದರು.

ಒಂದೆಡೆ ಸೇರಿದ ಕಾಂಗ್ರೆಸ್ ಮುಖಂಡರು: ಬಕ್ರೀದ್ ಹಬ್ಬದ ಪ್ರಯುಕ್ತ ಸೋಮವಾರ ನಗರದಲ್ಲಿ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರೆಲ್ಲ ಭಾಗವಹಿಸಿದ್ದರು. ಪ್ರಸಕ್ತ ರಾಜಕೀಯ ವಿದ್ಯಮಾನಗಳು ಹಾಗೂ ಮಳೆ ಅನಾಹುತಗಳ ಬಗ್ಗೆ ಚರ್ಚಿಸಿದ್ದಾರೆ.

ಕಾಂಗ್ರೆಸ್ ಆಂತರಿಕ ವಿಚಾರಗಳೂ ಈ ಸಂದರ್ಭದಲ್ಲಿ ಚರ್ಚೆಗೆ ಬಂದಿವೆ. ಜೆಡಿಎಸ್ ಜತೆಗಿನ ಮೈತ್ರಿ, ರಾಜ್ಯದಲ್ಲಿ ಪಕ್ಷ ಸಂಘಟನೆ, ಪದಾಧಿಕಾರಿಗಳ ನೇಮಕದ ವಿಚಾರಗಳು ಪ್ರಸ್ತಾಪವಾದವು ಎನ್ನಲಾಗಿದೆ.

ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ರಮೇಶ್ ಕುಮಾರ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ ಪಾಲ್ಗೊಂಡಿದ್ದರು.

Post Comments (+)