ಶನಿವಾರ, ಜುಲೈ 24, 2021
22 °C
ಕೆಎಂಎಫ್‌ಗೆ ಆರ್ಥಿಕ ಸಂಕಷ್ಟದ ಅಪಾಯ: ಬಾಲಚಂದ್ರ ಜಾರಕಿಹೊಳಿ

ಹಾಲಿನ ಬಾಕಿ: ₹530 ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಫೆಬ್ರುವರಿಯಿಂದ ಜುಲೈ 4 ರವರೆಗೆ ಹಾಲು ಉತ್ಪಾದಿಸುವ ರೈತರಿಗೆ ನೀಡಬೇಕಾಗಿದ್ದ ₹530 ಕೋಟಿ ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಿದೆ.

ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮಂಗಳವಾರ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಸಂವಾದ ನಡೆಸಿ ಈ ವಿಷಯ ತಿಳಿಸಿದರು.

ಕೋವಿಡ್‌–19 ನಿಂದಾಗಿ ಹಾಲು, ಮೊಸರಿನ ಮಾರಾಟ ಕುಸಿತವಾಗಿದೆ. ಪ್ರತಿ ದಿನ 10 ರಿಂದ 12 ಲಕ್ಷ ಲೀಟರ್‌ನಷ್ಟು ಹಾಲು‌ ಮಾರಾಟ ಕಡಿಮೆಯಾಗಿದೆ. ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ಪ್ರತಿ ತಿಂಗಳು ವಿತರಿಸುತ್ತಿದ್ದ 2 ಸಾವಿರ ಮೆಟ್ರಿಕ್ ಟನ್‌ ಹಾಲಿನ ಪುಡಿ ಕೂಡ ಶಾಲೆಗಳು ಮುಚ್ಚಿದ್ದರಿಂದ ವಿಲೇವಾರಿ ಆಗುತ್ತಿಲ್ಲ ಎಂದು ಹೇಳಿದರು.

ಹಾಲು ಶೇಖರಣೆ ಹೆಚ್ಚಾಗಿದ್ದು, ಪ್ರತಿ ದಿನ 35 ಲಕ್ಷ ಲೀಟರ್‌ಗಳಷ್ಟು ಹೆಚ್ಚುವರಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರಿಂದ ಪ್ರತಿ ನಿತ್ಯ 305 ಮೆಟ್ರಿಕ್ ಟನ್‌ ಹಾಲಿನ ಪುಡಿ ಮತ್ತು 150 ರಿಂದ 160 ಮೆಟ್ರಿಕ್‌ ಟನ್‌ ಬೆಣ್ಣೆ ಉತ್ಪಾದನೆಯಾಗಿ ದಾಸ್ತಾನು ಉಳಿಯುವಂತಾಗಿದೆ. ಇದೇ ಸ್ಥಿತಿ ಮುಂದುವರಿದರೆ ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಬೇಕಾಗುತ್ತದೆ ಎಂದರು.

ಈಗ ವಿವಿಧ ಹಾಲು ಒಕ್ಕೂಟಗಳಿಂದ ಪ್ರತಿದಿನ 88 ಲಕ್ಷ ಲೀಟರ್‌ ಹಾಲು ದಾಖಲೆ ಮಟ್ಟದಲ್ಲಿ ಶೇಖರಣೆ ಆಗುತ್ತಿದೆ. ಕಳೆದ ವರ್ಷಕ್ಕಿಂತ 6 ಲಕ್ಷ ಲೀಟರ್‌ ಹಾಲಿನ ಶೇಖರಣೆ ಹೆಚ್ಚಾಗಿದೆ. ಕಳೆದ ಮಾರ್ಚ್‌ ತಿಂಗಳಿಗೆ ಹೋಲಿಸಿದರೆ, ಪ್ರತಿ ದಿನ ಸುಮಾರು 20 ಲಕ್ಷ ಲೀಟರ್‌ ಹಾಲು ಹೆಚ್ಚಾಗಿದೆ ಎಂದರು. 

ನಾಲ್ಕು ತಿಂಗಳಿನಿಂದ ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಪ್ರೋತ್ಸಾಹಧನ ನೀಡಿಲ್ಲ ಎಂದು ‘ಪ್ರಜಾವಾಣಿ’ ಇತ್ತೀಚೆಗೆ ವರದಿ ಮಾಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು