ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಮೂಲ್’ ಕ್ವಾರ್ಟರ್ಸ್ ಕಟ್ಟಡದ ಭಾಗ ಕುಸಿತ

ಸಾಕುನಾಯಿಗಳ ರಕ್ಷಣೆ l ನಾಲ್ವರಿಗೆ ಗಾಯ
Last Updated 28 ಸೆಪ್ಟೆಂಬರ್ 2021, 19:01 IST
ಅಕ್ಷರ ಗಾತ್ರ

ಬೆಂಗಳೂರು: ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ಆವರಣದಲ್ಲಿದ್ದ ಎರಡು ಅಂತಸ್ತಿನ ಕಟ್ಟಡದ ಒಂದು ಭಾಗ ಮಂಗಳವಾರ ಕುಸಿದಿದ್ದು, ಭದ್ರತಾ ಸಿಬ್ಬಂದಿ ಹಾಗೂ ನಿವಾಸಿಗಳ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ.

ಬಮೂಲ್ ಉದ್ಯೋಗಿಗಳ ಕುಟುಂಬದವರ ವಾಸಕ್ಕಾಗಿ 50 ವರ್ಷಗಳ ಹಿಂದೆ ಕ್ವಾರ್ಟರ್ಸ್ ನಿರ್ಮಿಸಲಾಗಿತ್ತು. ಇದರಲ್ಲಿ 18 ಮನೆಗಳು ಇದ್ದವು. 40ಕ್ಕೂ ಹೆಚ್ಚು ಮಂದಿ ವಾಸವಿದ್ದರು. ಮಂಗಳವಾರ ಬೆಳಿಗ್ಗೆ ಕಟ್ಟಡದ ಮಧ್ಯಭಾಗದ ಅಡಿಪಾಯದಲ್ಲಿ ನೆಲ ಕುಸಿದು, ಅದರ ಜೊತೆಯಲ್ಲಿ ಕಟ್ಟಡವೂ ಕುಸಿದಿದೆ.

ಕುಸಿತದ ವೇಳೆ ಕಟ್ಟಡದ ಮನೆಗಳಲ್ಲಿ ನಿವಾಸಿಗಳು ಇರಲಿಲ್ಲ. ಹೀಗಾಗಿ, ಯಾವುದೇ ಅನಾಹುತ ಸಂಭವಿಸಿಲ್ಲ.

ನಿವಾಸಿಗಳ ಸ್ಥಳಾಂತರ: ‘ಹಳೆಯ ಕಟ್ಟಡವಾಗಿದ್ದರಿಂದ, ಮಳೆ ಬಂದಾಗ ಹಲವೆಡೆ ಸೋರುತ್ತಿತ್ತು. 2016ರಲ್ಲಿ ಕಟ್ಟಡದ ಪರಿಶೀಲನೆ ನಡೆಸಿದ್ದ ಎಂಜಿನಿಯರ್‌ಗಳ ತಂಡ, ‘ಕಟ್ಟಡವು 10 ವರ್ಷ ವಾಸಕ್ಕೆ ಯೋಗ್ಯವಾಗಿದೆ’ ಎಂದು ಪ್ರಮಾಣಪತ್ರ ನೀಡಿದ್ದರು. ಹೀಗಾಗಿ, ಕಟ್ಟಡ ಕುಸಿಯುವ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಸುಳಿವು ಇರಲಿಲ್ಲ’ ಎಂದೂ ಅಧಿಕಾರಿ
ವಿವರಿಸಿದರು.

‘ಸೋಮವಾರ ರಾತ್ರಿ ಕಟ್ಟಡದ ಒಂದು ಭಾಗದಲ್ಲಿ ಬಿರುಕು ಕಾಣಿಸಿಕೊಂಡು, ಇಟ್ಟಿಗೆಯೊಂದು ಕಳಚಿ ಬಿದ್ದಿತ್ತು. ಅದನ್ನು ಗಮನಿಸಿದ್ದ ಭದ್ರತಾ ಸಿಬ್ಬಂದಿಹಾಗೂ ನಿವಾಸಿಗಳು, ಬಮೂಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರಾತ್ರಿಯೇ ಕೆಲ ನಿವಾಸಿಗಳನ್ನು ಮನೆಯಿಂದ ಸ್ಥಳಾಂತರ ಮಾಡಲಾಗಿತ್ತು.’

‘ಮಂಗಳವಾರ ಬೆಳಿಗ್ಗೆ ಕಟ್ಟಡದ ಒಂದು ಭಾಗ ನಿಧಾನವಾಗಿ ವಾಲುತ್ತಿತ್ತು. ಇದೇ ಸಂದರ್ಭದಲ್ಲಿ ಕೆಲ ನಿವಾಸಿಗಳು ಹೊರಗೆ ಓಡಿಬಂದು ದೂರದಲ್ಲಿ ನಿಂತಿದ್ದರು. ಕಟ್ಟಡದ ಭಾಗ ಕುಸಿಯುತ್ತಿದ್ದಂತೆ ನಿವಾಸಿಗಳು, ಮತ್ತಷ್ಟು ದೂರಕ್ಕೆ ಓಡಿ ಹೋಗಿದ್ದರು. ಇದೇ ವೇಳೆಯೇ ಆಯತಪ್ಪಿ ಬಿದ್ದು ನಾಲ್ವರಿಗೆ ಸಣ್ಣಪುಟ್ಟ ಗಾಯವಾಗಿದೆ’ ಎಂದೂ ಅಧಿಕಾರಿ ಹೇಳಿದರು.

ಸಾಕುನಾಯಿ ರಕ್ಷಣೆ: ‘ಕಟ್ಟಡ ಕುಸಿಯುವ ಆತಂಕದಲ್ಲಿ ನಿವಾಸಿಗಳು ಹೊರಗೆ ಓಡಿ ಬಂದಿದ್ದರು. ಸಾಕುನಾಯಿಗಳು ಮನೆಯಲ್ಲೇ ಉಳಿದುಕೊಂಡಿದ್ದವು. ಕಟ್ಟಡ ಕುಸಿಯುತ್ತಿದ್ದಂತೆ, ಅವಶೇಷಗಳಡಿ ಸಿಲುಕಿ ಬೊಗಳುತ್ತಿದ್ದವು’ ಎಂದೂ ಅಧಿಕಾರಿತಿಳಿಸಿದರು.

‘ಕಾರ್ಯಾಚರಣೆ ನಡೆಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ನಾಲ್ಕು ನಾಯಿಗಳನ್ನು ಸುರಕ್ಷಿತವಾಗಿ ರಕ್ಷಿಸಿ ಹೊರಗೆ ತಂದರು’ ಎಂದೂ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್, ‘ಕಟ್ಟಡದಲ್ಲಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಅವರ ವಾಸಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಕಟ್ಟಡ ಕುಸಿದಿರುವ ಬಗ್ಗೆ ಪರಿಶೀಲನೆ ವರದಿ ಸಿದ್ಧಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ‘ಬಮೂಲ್ ಆವರಣದಲ್ಲಿರುವ 6 ಬ್ಲಾಕ್‌ಗಳ 186 ಮನೆಗಳನ್ನು ಪರಿಶೀಲಿಸಲಾಗುವುದು. ನಂತರವೇ, ನೆಲಸಮದ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

‘ದೂರು ದಾಖಲಿಸುವ ಅಗತ್ಯವಿಲ್ಲ’

‘ಕಟ್ಟಡ ವಾಸಕ್ಕೆ ಯೋಗ್ಯವಾಗಿದ್ದ ಬಗ್ಗೆ ಎಂಜಿನಿಯರ್‌ಗಳು ಪ್ರಮಾಣ ಪತ್ರ ನೀಡಿದ್ದರು. ಜೊತೆಗೆ, ಇಡೀ ಕಟ್ಟಡ ಕುಸಿದಿಲ್ಲ. ಒಂದು ಭಾಗ ಮಾತ್ರ ಕುಸಿದಿದೆ. ಇದಕ್ಕೆ ಯಾರೊಬ್ಬರ ನಿರ್ಲಕ್ಷ್ಯವೂ ಕಾರಣವಲ್ಲ. ಹೀಗಾಗಿ, ಸದ್ಯಕ್ಕೆ ದೂರು ದಾಖಲಿಸಿಕೊಂಡಿಲ್ಲ’ ಎಂದು ಪೊಲೀಸರು ಹೇಳಿದರು.

‘ನೆಲ ಕುಸಿತದಿದ್ದರಿಂದ ಈ ಅವಘಡ ಸಂಭವಿಸಿರುವ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬಮೂಲ್ ಅವರೇ ಎಲ್ಲ ನಿವಾಸಿಗಳನ್ನು ಸ್ಥಳಾಂತರಿಸಿ ರಕ್ಷಿಸಿದ್ದಾರೆ’ ಎಂದೂ ತಿಳಿಸಿದರು.

ದುಸ್ಥಿತಿಯಲ್ಲಿದ್ದ 178 ಕಟ್ಟಡ ಗುರುತಿಸಿದ್ದ ಬಿಬಿಎಂಪಿ

ಬೆಂಗಳೂರು: ಜೆ.ಪಿ.ನಗರದಲ್ಲಿ 30 ವರ್ಷದ ಹಳೆಯ ಕಟ್ಟಡ 2019ರಲ್ಲಿ ಕುಸಿದ ಬಳಿಕ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನಗರದಾದ್ಯಂತ ದುಸ್ಥಿತಿಯಲ್ಲಿರುವ ಕಟ್ಟಡಗಳ ಸಮೀಕ್ಷೆ ಕೈಗೊಂಡಿತ್ತು.

ಈ ಸಮೀಕ್ಷೆಯ ಸಂದರ್ಭದಲ್ಲಿ ದುಸ್ಥಿತಿಯಲ್ಲಿರುವ 178 ಕಟ್ಟಡಗಳನ್ನು ನಗರದ ವಿವಿಧ ಭಾಗಗಳಲ್ಲಿ ಗುರುತಿಸಿತ್ತು. ಇವುಗಳಲ್ಲಿ 77 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ಜಾರಿಗೊಳಿಸಲಾಗಿತ್ತು. ಆದರೆ, ನೋಟಿಸ್‌ ಜಾರಿ ನೀಡಿದ ಬಳಿಕ ಈ ಮಾಲೀಕರ ವಿರುದ್ಧ ಯಾವುದೇ ಕ್ರಮಕೈಗೊಳ್ಳಲಿಲ್ಲ. ಈ ಬಗ್ಗೆ ಅಧಿಕಾರಿಗಳ ಬಳಿಯೂ ಮಾಹಿತಿ ಇಲ್ಲ. 77ರಲ್ಲಿ ದಕ್ಷಿಣ ಮತ್ತು ಪೂರ್ವ ವಲಯದಲ್ಲಿ 33 ಕಟ್ಟಡಗಳಿದ್ದವು.

ಮಾಲೀಕರ ವಿರುದ್ಧ ಯಾವುದೇ ರೀತಿ ಕ್ರಮಕೈಗೊಳ್ಳದ ಕಾರಣದಿಂದಾಗಿಯೇ ಸೋಮವಾರ ಲಕ್ಕಸಂದ್ರನಲ್ಲಿನ ಮೂರು ಅಂತಸ್ತಿನ ಕಟ್ಟಡ ಕುಸಿಯಲು ಕಾರಣವಾಯಿತು ಎನ್ನುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.

‘ಸಮೀಕ್ಷೆಯ ಸಂದರ್ಭದಲ್ಲಿ ಲಕ್ಕಸಂದ್ರದಲ್ಲಿನ ಕಟ್ಟಡವನ್ನು ಗುರುತಿಸಿರುವ ಬಗ್ಗೆ ಮಾಹಿತಿಯನ್ನು
ಪರಿಶೀಲಿಸಬೇಕಾಗಿದೆ. ಇನ್ನು ಮುಂದೆ ಪ್ರತಿ ವರ್ಷವೂ ಕಟ್ಟಡಗಳ ಸಮೀಕ್ಷೆ ಕೈಗೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು. ಇದರಿಂದ, ಹಳೆಯ ಮತ್ತು ದುಸ್ಥಿತಿಯಲ್ಲಿರುವ ಕಟ್ಟಡಗಳ ಮೇಲೆ ನಿಗಾವಹಿಸಲು ಸಾಧ್ಯವಾಗಲಿದೆ’ ಎಂದು
ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರಸ್ವಾಮಿ ತಿಳಿಸಿದ್ದಾರೆ.

‘ಇಂದಿನ ಆಧುನಿಕ ಕಟ್ಟಡಗಳನ್ನು 25 ವರ್ಷಗಳ ಬಳಿಕ ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಬೇಕು. ಆದರೆ, ಬಿಬಿಎಂಪಿ ಇಂತಹ ಕಟ್ಟಡಗಳ ಮೇಲೆ ನಿಗಾವಹಿಸಿಲ್ಲ’ ಎಂದು ಬೆಂಗಳೂರು ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಕೇಂದ್ರದ (ಎಸಿಸಿಇ) ಅಧ್ಯಕ್ಷ ಶ್ರೀಕಾಂತ್‌ ಚನ್ನಾಳ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT