ಬೆಂಗಳೂರು: ಬನಶಂಕರಿ ದೇವಸ್ಥಾನದಿಂದ ಕನಕಪುರ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯ ವಾಹನ ದಟ್ಟಣೆಯನ್ನು ನಿವಾರಿಸಲು ರೂಪಿಸಿರುವ ಮೇಲ್ಸೇತುವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಸ್ಥಳೀಯ ಮುಖಂಡರು, ನಾಗರಿಕರು ಒತ್ತಾಯಿಸಿದ್ದಾರೆ.

ಈ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದಿದ್ದು ಎರಡು ವರ್ಷದ ಹಿಂದೆ ರೂಪಿಸಿರುವ ಈ ಯೋಜನೆಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಕನಕಪುರ ರಸ್ತೆ– ಬನಶಂಕರಿ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ನಿವಾರಿಸಲು 2.5 ಕಿ.ಮೀ ಮೇಲ್ಸೇತುವೆ ನಿರ್ಮಾಣ ಮಾಡಲು 2023ರ ಆಗಸ್ಟ್ 19ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಂದಿನ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಬನಶಂಕರಿ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ, ಮೆಟ್ರೊ, ಬಿಬಿಎಂಪಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು.

ಬಿಎಂಆರ್ಸಿಎಲ್ನಿಂದ ಬನಶಂಕರಿ ಜಂಕ್ಷನ್ನಲ್ಲಿ ₹45 ಕೋಟಿ ವೆಚ್ಚದಲ್ಲಿ ಸ್ಕೈವಾಕ್ ನಿರ್ಮಿಸಲಾಗುತ್ತದೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ, ಅಷ್ಟೊಂದು ವೆಚ್ಚ ಮಾಡಿದರೂ ಅದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ ಎಂಬ ಅಭಿಪ್ರಾಯ ಅಂದು ವ್ಯಕ್ತವಾಗಿತ್ತು.

ಬನಶಂಕರಿ ಜಂಕ್ಷನ್ನಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ದೂರದೃಷ್ಟಿಯಿಂದ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಈ ಜಂಕ್ಷನ್ ಸೇರಿದಂತೆ ಐದಾರು ಜಂಕ್ಷನ್ಗಳಲ್ಲಿ ಸಿಗ್ನಲ್ ರಹಿತ ಸಂಚಾರಕ್ಕೆ ಅನುವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಕಾಂಗ್ರೆಸ್ನ ಮುಖಂಡ ರಘುನಾಥ ನಾಯ್ಡು ಹಾಗೂ ಸ್ಥಳೀಯ ಮುಖಂಡರು ಮನವಿ ಮಾಡಿಕೊಂಡಿದ್ದರು.

ಈ ಪ್ರಸ್ತಾವವನ್ನು ಪರಿಶೀಲಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಯೋಜನೆಯ ವಿವರವಾದ ವರದಿ ಸಲ್ಲಿಸಿ, ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಂದಿನ ದಕ್ಷಿಣ ವಲಯದ ಆಯುಕ್ತ ಜಯರಾಂ ರಾಯಪುರ ಅವರಿಗೆ ಸೂಚನೆ ನೀಡಿದ್ದರು. ಇದಾದ ಮೇಲೆ, ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು 2023ರ ಸೆಪ್ಟೆಂಬರ್ 25ರಂದು ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ನಂತರ ಇದು ಮುಂದುವರಿಯಲಿಲ್ಲ.

ಮೇಲ್ಸೇತುವೆ ಉಪಯೋಗಗಳು

ಯಡಿಯೂರು ಟರ್ಮಿನಲ್ನಿಂದ ಆರಂಭವಾಗುವ 2.5 ಕಿ.ಮೀ ಉದ್ದ ಇಂಟಿಗ್ರೇಟೆಡ್ ಮೇಲ್ಸೇತುವೆ ಬನಶಂಕರಿ ಜಂಕ್ಷನ್ ಮೂಲಕ ಕನಕಪುರ ರಸ್ತೆಗೆ ಸಂಪರ್ಕಿಸಲಿದೆ. ಟಾಟಾ ಸಿಲ್ಕ್ ಫಾರ್ಮ್ ಜಂಕ್ಷನ್ ಯಡಿಯೂರು ಜಂಕ್ಷನ್ ಯಡಿಯೂರು ಹೆರಿಗೆ ಆಸ್ಪತ್ರೆ ಜಂಕ್ಷನ್ ಜೆಎಸ್ಎಸ್ ಕಾಲೇಜು ಜಂಕ್ಷನ್ ಹುಣಸೆಮರ ಜಂಕ್ಷನ್ ಬನಶಂಕರಿ ಜಂಕ್ಷನ್ನಲ್ಲಿ ಸಂಚಾರ ಸಿಗ್ನಲ್ ಮುಕ್ತವಾಗಲಿವೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

‘ಸುಗಮ ಸಂಚಾರಕ್ಕೆ ಅಗತ್ಯ’

‘ಬನಶಂಕರಿ ದೇವಸ್ಥಾನಕ್ಕೆ ನಿತ್ಯವೂ ಸಾವಿರಾರು ಜನರು ಬರುತ್ತಾರೆ. ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಇವರ ಅನುಕೂಲಕ್ಕೆ ಸ್ಕೈವಾಕ್ ಅಗತ್ಯವಾಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ಮೇಲ್ಸೇತುವೆಯೂ ಅಗತ್ಯಗತ್ಯವಾಗಿದೆ.

ಕನಕಪುರ ಡಿಂಡಗಲ್ ಮೈಸೂರು ಹೊಸೂರು ರಸ್ತೆಗೆ ಈ ಜಂಕ್ಷನ್ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸುವುದರಿಂದ ಭವಿಷ್ಯದಲ್ಲೂ ಸುಗಮ ಸಂಚಾರ ಸಾಧ್ಯವಾಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಲಿ’ ಎಂದು ಬಿಜೆಪಿ ಮುಖಂಡ ಎ.ಎಚ್. ಬಸವರಾಜು ಒತ್ತಾಯಿಸಿದರು.

- ‘ಸಾರ್ವಜನಿಕರಿಗೆ ಅನುಕೂಲ’

‘ಬನಶಂಕರಿ ದೇವಾಲಯದ ಬಳಿ ಸ್ಕೈವಾಕ್ ನಿರ್ಮಿಸಲು ಅನುಮೋದನೆಯಾಗಿದೆ. ಆದರೆ ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಸಿಗ್ನಲ್ ಹುಣಸೆಮರ ಜಂಕ್ಷನ್ವರೆಗೆ ಹಾಗೂ ಉತ್ತರಹಳ್ಳಿ ಮುಖ್ಯರಸ್ತೆಯಿಂದ ಬರುವ ವಾಹನಗಳಿಂದ ಕಿಲೋಮೀಟರ್ವರೆಗೆ ದಟ್ಟಣೆ ಉಂಟಾಗುತ್ತಿದೆ.

ಇದರಿಂದ ಸಾರ್ವಜನಿಕರಿಗೆ ಬಹಳ ಅನನುಕೂಲವಾಗಿದೆ. ಈ ಸಮಸ್ಯೆ ನಿವಾರಿಸಲು ಬನಶಂಕರಿ ದೇವಾಲಯದ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಈ ಸಂಬಂಧ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.