ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಹಾದಿಯಲ್ಲಿ ಬೆಂಗಳೂರು: ಎಚ್ಚರಿಕೆ

ಅಸಮರ್ಪಕ ಪ್ಲಂಬಿಂಗ್‍ನಿಂದಾಗಿ ಬೃಹತ್ ಪ್ರಮಾಣದ ಕುಡಿಯುವ ನೀರು ವ್ಯರ್ಥ
Last Updated 28 ಜೂನ್ 2019, 7:42 IST
ಅಕ್ಷರ ಗಾತ್ರ

ಬೆಂಗಳೂರು: ‘200 ದಿನಗಳಿಂದ ಒಂದು ಹನಿ ಮಳೆಯೂ ಸುರಿಯದ ಕಾರಣ ಚೆನ್ನೈ ನೀರಿನ ಬಿಕ್ಕಟ್ಟನ್ನು ಎದುರಿಸಿದೆ. ಬೆಂಗಳೂರು ಸಹ ಅದೇ ಹಾದಿಯಲ್ಲಿದೆ’ ಎಂದು ನಾಗರಿಕ ಹೋರಾಟಗಾರರು ಎಚ್ಚರಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ತ್ವರಿತವಾಗಿ ಆಗಿರುವ ನಗರೀಕರಣ, ಜನಸಂಖ್ಯಾ ಹೆಚ್ಚಳ, ಅಸಮರ್ಪಕ ನೀರಿನ ನಿರ್ವಹಣೆಯಿಂದಾಗಿ ನೀರಿನ ಮೂಲಗಳೇ ಬರಿದಾಗುತ್ತಿವೆ. ಅಂತರ್ಜಲ ಮಟ್ಟ ಪಾತಾಳದತ್ತ ಕುಸಿಯುತ್ತಿದೆ’ ಎಂದರು.

‘2030ರ ವೇಳೆಗೆ ಭಾರತದ ಶೇ 40ರಷ್ಟು ಜನರಿಗೆ ಕುಡಿಯುವ ನೀರೇ ದಕ್ಕದಂತಹ ಘೋರ ಪರಿಸ್ಥಿತಿ ತಲೆದೋರಲಿದೆ ಎಂದು ನೀತಿ ಆಯೋಗ ಹೇಳಿದೆ. ಕುಡಿಯುವ ನೀರೇ ಇಲ್ಲದ 11 ಪ್ರಮುಖ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಲಿದೆ ಎಂದು ಬಿಬಿಸಿ ತನ್ನ ವರದಿಯಲ್ಲಿ ತಿಳಿಸಿದೆ’ ಎಂದರು.

‘ಜಲಮಂಡಳಿ ನಗರದ ಶೇ 50ರಷ್ಟು ಜನರಿಗೆ ಮಾತ್ರ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಅಸಮರ್ಪಕ ಪ್ಲಂಬಿಂಗ್‍ನಿಂದಾಗಿ ಬೃಹತ್ ಪ್ರಮಾಣದ ಕುಡಿಯುವ ನೀರಿನ ವ್ಯರ್ಥವಾಗುತ್ತಿದೆ. ನಗರದ ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ತಕ್ಕಂತೆ ಸೂಕ್ತ ಯೋಜನೆ ರೂಪಿಸಿಲ್ಲ’ ಎಂದರು. ‘ರಾಜಧಾನಿಯಲ್ಲಿ 1960ರ ವೇಳೆಗೆ 260 ಕೆರೆಗಳಿದ್ದವು. ಅವುಗಳ ಸಂಖ್ಯೆ ಈಗ 80ಕ್ಕೆ ಕುಸಿದಿದೆ. ಇವುಗಳಲ್ಲಿ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ’ ಎಂದರು.

ಶರಾವತಿ ಕಣಿವೆ ಸುತ್ತ ವಾಸಿಸುತ್ತಿರುವ ಜನರು ಅನೇಕ ಅಭಿವೃದ್ಧಿ ಯೋಜನೆಗಳಿಂದ ಸಾಕಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಯೋಜನೆಗಳಿಂದಾಗಿ ಈ ಪ್ರದೇಶದಲ್ಲಿ ವಾರ್ಷಿಕ ಮಳೆ ಪ್ರಮಾಣವು 80 ಇಂಚುಗಳಷ್ಟು ಕಡಿಮೆ ಆಗಿದೆ. ಈ ಸಮಸ್ಯೆಗಳ ನಡುವೆಯೂ ಶರಾವತಿಯಿಂದ ನಗರಕ್ಕೆ ನೀರು ತರಲು ವಿಸ್ತೃತಾ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಸರ್ಕಾರ ಸೂಚಿಸಿದೆ. ಈ ಯೋಜನೆಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದರು.

ಫ್ರೆಂಡ್ಸ್‌ ಆಫ್ ಲೇಕ್‌ ಸಂಘಟನೆಯ ಸಹ ಸಂಸ್ಥಾಪಕ ವಿ.ರಾಮಪ್ರಸಾದ್‌, ‘ಸಮುದ್ರಮಟ್ಟದಿಂದ 3,500 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ಯಾವುದೇ ನೀರಿನ ಮೂಲಗಳಿಲ್ಲ. ದಕ್ಷಿಣ ಪಿನಾಕಿನಿ ಮತ್ತು ವೃಷಭಾವತಿಗಳ ನೀರಿನ ಮೂಲಗಳು ಈಗಾಗಲೇ ಬತ್ತಿ ಹೋಗಿವೆ. ಮಳೆ ನೀರಿನ ಸಂಗ್ರಹವೇ ಏಕೈಕ ಪರಿಹಾರ. ಅಂತರ್ಜಲದ ಅತಿ ಬಳಕೆಗೆ ಕಡಿವಾಣ ಹಾಕಬೇಕು’ ಎಂದರು.

ಯುನೈಟೆಡ್ ಬೆಂಗಳೂರು ನಿರ್ದೇಶಕ ಎನ್‌.ಆರ್‌. ಸುರೇಶ್‌, ‘ಕೆರೆಗಳ ಅಭಿವೃದ್ಧಿಯ ನಯಾಪೈಸೆ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಸುಳ್ಳು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಸರ್ಕಾರ ಗಮನಹರಿಸಿ ಜಲಮೂಲಗಳ ಅಭಿವೃದ್ಧಿಗೆ ಆದ್ಯತೆ ನೀಡಿ ನಗರವನ್ನು ಉಳಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT