ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂದ್ರಹಳ್ಳಿ: ರಸ್ತೆ ಕೆಸರುಮಯ- ಸಂಚಾರ ಅಯೋಮಯ

Last Updated 18 ನವೆಂಬರ್ 2021, 21:29 IST
ಅಕ್ಷರ ಗಾತ್ರ

ಬೆಂಗಳೂರು: ‘ಮನೆ ಬಾಡಿಗೆಗೆ ಯಾರೂ ಬರುತ್ತಿಲ್ಲ. ಈಗ ಇರುವವರೂ ಮನೆ ಖಾಲಿ ಮಾಡುತ್ತಿದ್ದಾರೆ. ಮಳೆ ಬಂತೆಂದರೆ ವಾಹನಗಳನ್ನು ರಸ್ತೆಗೆ ಇಳಿಸುವ ಹಾಗಿಲ್ಲ. ಕೆಲಸಕ್ಕೆ ತೆರಳಲು ಆಟೊ ರಿಕ್ಷಾಗಳಿಗೆ ದುಪ್ಪಟ್ಟು ಹಣ ತೆರುವುದು ಇಲ್ಲಿ ಅನಿವಾರ್ಯ...’

ಇದು ಅಂದ್ರಹಳ್ಳಿ ನಿವಾಸಿಗಳ ಅಳಲು. ಕಾವೇರಿ ಪೈಪ್‌ಲೈನ್ ಅಳವಡಿಕೆಗಾಗಿ ಈ ಭಾಗದ ರಸ್ತೆಗಳ ಒಂದೆಡೆ ಅಗೆಯಲಾಗಿದೆ. ಇನ್ನೊಂದೆಡೆ, ರಸ್ತೆಯು ಗುಂಡಿಗಳಿಂದ ಕೂಡಿದೆ. ಹೀಗಾಗಿ, ಇಲ್ಲಿನ ರಸ್ತೆಗಳಲ್ಲಿ ಪ್ರಯಾಣ ಮಾಡಲು ವಾಹನ ಸವಾರರು ಹರಸಾಹಸ ಪಡಬೇಕಾದ ಪರಿಸ್ಥಿತಿಯಿದೆ. ಬಿಸಿಲು ಬಂದರೆ ದೂಳು ರಸ್ತೆಯನ್ನು ಆವರಿಸಿಕೊಳ್ಳುತ್ತಿದೆ.

ಅಂದ್ರಹಳ್ಳಿ ಮುಖ್ಯ ರಸ್ತೆಯು ನಗರದಲ್ಲಿ 5.98 ಕಿ.ಮೀ ಹಾದು ಹೋಗಿದ್ದು, ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ತಿಗಳರಪಾಳ್ಯ, ತಿಪ್ಪೇನಹಳ್ಳಿ, ನಾಗಸಂದ್ರ, ಬಾಗಲಕುಂಟೆ, ಪೀಣ್ಯ, ರಾಘವೇಂದ್ರನಗರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಗುವವರು ಇದೇ ಮಾರ್ಗದಲ್ಲಿ ಸಾಗಬೇಕಿದೆ.

ಸಂಚಾರಕ್ಕೆ ಅಡ್ಡಿ:ಈ ರಸ್ತೆಯಲ್ಲಿ ಕೆಲವೆಡೆ ‌ಕಾವೇರಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ, ರಸ್ತೆಯನ್ನು ಎಲ್ಲೆಂದರೆಲ್ಲಿ ಅಗೆಯಲಾಗಿದೆ. ಇನ್ನೂ ಕೆಲವೆಡೆ ರಸ್ತೆಯಲ್ಲಿಯೇ ಪೈಪ್‌ಗಳನ್ನು ಇರಿಸಲಾಗಿದೆ. ಇದರಿಂದಾಗಿ ವಾಹನ ಸಂಚಾರ ದುಸ್ತರವಾಗಿದ್ದು, ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯವಾಗಿದೆ.ಆಟೊ ರಿಕ್ಷಾ, ಕಾರು ಒಳಗೊಂಡಂತೆ ವಿವಿಧ ವಾಹನಗಳು ಕೆಸರಿನಲ್ಲಿ ಸಿಲುಕಿಕೊಳ್ಳುತ್ತಿವೆ.

‘ಮಳೆ ಬಂದಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತದೆ. ಹಲವರು ಪ್ರತಿನಿತ್ಯ ಜಾರಿ ಬೀಳುತ್ತಿದ್ದಾರೆ. ವಾಹನಗಳು ನಡುರಸ್ತೆಯಲ್ಲಿ ಸಿಲುಕಿಕೊಂಡ ಉದಾಹರಣೆಗಳು ಸಾಕಷ್ಟಿವೆ. ನಿತ್ಯವೂ ಇಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ರಾತ್ರಿ ವೇಳೆ ರಸ್ತೆಯಲ್ಲಿ ಕಾಲು ಇರಿಸಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮನೆಯಲ್ಲಿ ವಾಹನವಿದ್ದರೂ ಆಟೊ ರಿಕ್ಷಾಗಳಿಗೆ ದುಪ್ಪಟ್ಟು ಬಾಡಿಗೆ ನೀಡಿ, ಕೆಲಸಗಳಿಗೆ ಸಾಗಬೇಕಿದೆ’ ಎಂದು ಅಂದ್ರಹಳ್ಳಿ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಹೆಚ್ಚಳ

ಅಂದ್ರಹಳ್ಳಿಯ ಅಡ್ಡ ರಸ್ತೆಗಳ ಡಾಂಬರು ಸಂಪೂರ್ಣ ಕಿತ್ತುಹೋಗಿದ್ದು,ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದರಿಂದಾಗಿ ವಿವಿಧೆಡೆ ಕೆಲಸಕ್ಕೆ ಸಾಗುವವರು ಮುಖ್ಯ ರಸ್ತೆಗೆ ಬಂದು, ಆಟೊ ರಿಕ್ಷಾದ ಮೂಲಕ ಸಾಗಬೇಕಿದೆ. ಕೆಲವರು ದ್ವಿಚಕ್ರ ವಾಹನವನ್ನು ಮುಖ್ಯರಸ್ತೆಯವರೆಗೆ ತಳ್ಳಿಕೊಂಡೇ ಬರುತ್ತಿದ್ದಾರೆ.ಕಾವೇರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿಯಿಂದಾಗಿ ಬಸ್‌ಗಳು ಬರುತ್ತಿಲ್ಲ. ಈ ರಸ್ತೆಯ‍ಲ್ಲಿ ಕೆಲ ದಿನಗಳಿಂದ ವಾಹನ ದಟ್ಟಣೆ ಹೆಚ್ಚಳವಾಗುತ್ತಿದೆ.

‘ರಸ್ತೆಗಳ ಸ್ಥಿತಿಯನ್ನು ನೋಡಿ ಯಾರೂ ಮನೆ ಬಾಡಿಗೆಗೆ ಬರುತ್ತಿಲ್ಲ. ಇರುವವರೂ ಬೇರೆ ಕಡೆ ತೆರಳುತ್ತಿದ್ದಾರೆ. ರಸ್ತೆಯಲ್ಲಿನ ಕೆಸರು ಇಕ್ಕೆಲಗಳಲ್ಲಿರುವ ಮನೆಗಳಿಗೂ ಸಿಡಿಯುತ್ತಿದೆ. ಬಿಸಿಲು ಬಂದರೆ ದೂಳು ಬರುತ್ತದೆ. ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಅಂದ್ರಳ್ಳಿ ನಿವಾಸಿ ನಾಗೇಶ್ ತಿಳಿಸಿದರು.

***

ರಸ್ತೆಗಳ ದುಸ್ತಿತಿಯಿಂದಾಗಿ ಒಂದೂವರೆ ತಿಂಗಳಿಂದ ನರಕಯಾತನೆ ಅನುಭವಿಸುತ್ತಿದ್ದೇವೆ. ರಸ್ತೆಗಳನ್ನು ಎಲ್ಲೆಂದರೆಲ್ಲಿ ಅಗೆಯಲಾಗಿದ್ದು, ಮಳೆ ಬಂದರೆ ಸಂಚಾರ ಕಷ್ಟ

-ರಾಘವೇಂದ್ರ, ಅಂದ್ರಹಳ್ಳಿ ನಿವಾಸಿ

***

ಬಿಸಿಲು ಬಂದರೆ ದೂಳು, ಮಳೆ ಬಂದರೆ ಕೆಸರಿನ ಸಮಸ್ಯೆ ಎದುರಿಸಬೇಕಾಗಿದೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುವುದು ಸಾಮಾನ್ಯವಾಗಿದೆ

-ವೆಂಕಟೇಶ್, ಕರಿಹೋಬನಹಳ್ಳಿ ನಿವಾಸಿ

***

ರಸ್ತೆಗಳ ಸ್ಥಿತಿ ಹದಗೆಟ್ಟಿರುವುದರಿಂದ ವಾಹನಗಳ ನಿರ್ವಹಣೆಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ಮನೆಯಲ್ಲಿನ ಕಾರನ್ನು ಹೊರತೆಗೆಯುತ್ತಿಲ್ಲ. ಕೆಲಸಕ್ಕೆ ತೆರಳಲಾಗುತ್ತಿಲ್ಲ‌

-ಹರೀಶ್, ಅಂದ್ರಹಳ್ಳಿ ಮುಖ್ಯರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT