ಬೆಂಗಳೂರು: ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದೊಣ್ಣೆಯಿಂದ ಹಲ್ಲೆ ನಡೆಸಿ, ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ನೆಲಮಂಗಲದ ಮಹಿಮಾಪುರದ ಕಾರ್ಮಿಕರ ಶೆಡ್‌ನಲ್ಲಿ ಶನಿವಾರ ನಡೆದಿದೆ.
ರಾಜೀವ್ ಗಾಂಧಿ ಪೆರುಮಾಳ್ (40) ಎಂಬುವರು ಕೊಲೆಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
‘ರಾಜೀವ್ ಗಾಂಧಿ ಪೆರುಮಾಳ್ ಮತ್ತು ಆರೋಪಿ ಇಬ್ಬರೂ ತಮಿಳುನಾಡಿನ ಸೇಲಂನವರು. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಆದರೆ, ಹಣದ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಕೋಪದಲ್ಲಿ ಆರೋಪಿ ದೊಣ್ಣೆಯಿಂದ ರಾಜೀವ್ ಮೇಲೆ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದ ರಾಜೀವ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಬೆರಳಚ್ಚು ತಜ್ಞರು ಭೇಟಿ ನೀಡಿ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್‌ಪಿ ಸಿ.ಕೆ.ಬಾಬಾ, ಹೆಚ್ಚುವರಿ ಎಸ್‌ಪಿ ನಾಗೇಶ್, ಡಿವೈಎಸ್ಪಿ ರವಿ, ಇನ್‌ಸ್ಪೆಕ್ಟರ್ ನರೇಂದ್ರ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.