ಭಾನುವಾರ, ಮೇ 29, 2022
29 °C
ಅಮೃತ ನಗರೋತ್ಥಾನ ಯೋಜನೆಗೆ ಆದ್ಯತೆ ಯಾವುದು?

ರಾಜಧಾನಿ ಒಡಲದನಿ: ಬಸ್ ಬೇಕು, ಪಾದಚಾರಿ ಮಾರ್ಗ ಅಭಿವೃದ್ಧಿ ಆಗಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರದ 12 ಅತಿ ದಟ್ಟಣೆ ಕಾರಿಡಾರ್‌ಗಳ ಅಭಿವೃದ್ಧಿ ಸೇರಿದಂತೆ ₹6 ಸಾವಿರ ಕೋಟಿ ಮೊತ್ತದ ಕಾಮಗಾರಿಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.

ರಸ್ತೆ ಅಭಿವೃದ್ಧಿ, ಕೆಳ ಸೇತುವೆ (ಗ್ರೇಡ್ ಸಪರೇಟರ್‌), ಕೆರೆ ಅಭಿವೃದ್ಧಿ, ರಾಜಕಾಲುವೆ, ಉದ್ಯಾನ, ಘನತಾಜ್ಯ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಆಸ್ಪತ್ರೆ ಮತ್ತು ಶಾಲಾ ಕಟ್ಟಡಗಳ ನಿರ್ಮಾಣವನ್ನು ಮುಂದಿನ ಮೂರು ವರ್ಷಗಳಲ್ಲಿ ಮಾಡಲು ಸರ್ಕಾರ ಉದ್ದೇಶಿಸಿದೆ. ರಾಜ್ಯ ಸರ್ಕಾರದಿಂದ ಶೇ 50ರಷ್ಟು ಅನುದಾನ, ಶೇ 10ರಷ್ಟನ್ನು ಬಿಬಿಎಂಪಿ ಸಂಪನ್ಮೂಲದಿಂದ, ಶೇ 40ರಷ್ಟನ್ನು ಕೆಯುಐಡಿಎಫ್‌ಸಿಯ ‘ಕರ್ನಾಟಕ ವಾಟರ್ ಆ್ಯಂಡ್‌ ಸ್ಯಾನಿಟೈಸೇಷನ್‌ ಪೂಲ್‌ಡ್ ಫಂಡ್‌ ಟ್ರಸ್ಟ್’ನಿಂದ ಸಾಲ ಪಡೆಯಲು ಯೋಜಿಸಿದೆ.

ನಗರದ ಅಭಿವೃದ್ಧಿಗೆ ಏನೆಲ್ಲಾ ಯೋಜನೆಗಳ ಅಗತ್ಯವಿದೆ, ಯಾವುದು ಅಗತ್ಯ ಇಲ್ಲ ಎಂಬುದರ ಬಗ್ಗೆ ನಗರ ಯೋಜನಾ ತಜ್ಞರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಬಿಬಿಎಂಪಿಗೆ ಯೋಗ್ಯತೆ ಇಲ್ಲ‘

ನಗರಕ್ಕೆ ಬೇಕಿರುವುದು ಬಿಎಂಟಿಸಿ ಬಸ್ ಮತ್ತು ಉತ್ತಮವಾದ ಪಾದಚಾರಿ ಮಾರ್ಗ. ಬೆಂಗಳೂರಿನಲ್ಲಿ ಈಗ 6 ಸಾವಿರ ಬಿಎಂಟಿಸಿ ಬಸ್‌ಗಳಿವೆ. ಈ ಸಂಖ್ಯೆಯನ್ನು ಕನಿಷ್ಠ 14 ಸಾವಿರಕ್ಕೆ ಹೆಚ್ಚಿಸಬೇಕು. ನಗರದಲ್ಲಿ ಇತ್ತಿಚೆಗೆ 10ರಿಂದ 15 ರಸ್ತೆಗಳಲ್ಲಷ್ಟೇ ಉತ್ತಮ ಪಾದಚಾರಿ ಮಾರ್ಗಗಳಿವೆ. ಈ ರೀತಿಯ ಪಾದಚಾರಿ ಮಾರ್ಗ ಇರುವ ರಸ್ತೆಗಳ ಸಂಖ್ಯೆ ಕನಿಷ್ಠ 1,500ಕ್ಕೆ ಹೆಚ್ಚಾಗಬೇಕು. ಪಾದಚಾರಿ ಮಾರ್ಗಗಳು ಅಭಿವೃದ್ಧಿಯಾದರೆ ಜನ ನಡೆದೇ ಹೋಗಲು ಬಯಸುತ್ತಾರೆ. ಸ್ವಲ್ಪ ದೂರಕ್ಕೂ ವಾಹನಗಳನ್ನು ಬಳಕೆ ಮಾಡುವುದನ್ನು ಕಡಿಮೆ ಮಾಡುತ್ತಾರೆ. ಇದನ್ನು 15 ವರ್ಷಗಳಿಂದ ಹೇಳುತ್ತಲೇ ಇದ್ದೇವೆ. ಬಿಬಿಎಂಪಿ ಏನ್ನನ್ನೂ ಮಾಡಿಲ್ಲ. ಈಗ ಸರ್ಕಾರ ಘೋಷಣೆ ಮಾಡಿರುವ ಅನುದಾನ ಖರ್ಚು ಮಾಡಲು ಬಿಬಿಎಂಪಿಗೆ ಯೋಗ್ಯತೆ ಇಲ್ಲ.

-ಅಶ್ವಿನ್ ಮಹೇಶ್, ನಗರ ಯೋಜನಾ ತಜ್ಞ

***

‘ತಪ್ಪು ಆದ್ಯತೆ‘

ಬಿಎಂಟಿಸಿ ಬಸ್, ಮೆಟ್ರೊ ರೈಲು ಮತ್ತು ಸ್ಥಳೀಯ ರೈಲುಗಳ(ಉಪನಗರ) ಸಂಚಾರ ಹೆಚ್ಚಳ ಆಗುವಂತೆ ಮಾಡಿದರೆ ಈ ರೀತಿಯ ದಟ್ಟಣೆ ಕಾರಿಡಾರ್‌ಗಳಿಗೆ ಹಣ ಖರ್ಚು ಮಾಡಬೇಕಾದ ಅಗತ್ಯ ಇರುವುದಿಲ್ಲ. ರಸ್ತೆ ಮತ್ತು ಮೇಲ್ಸೇತುವೆ ಅಭಿವೃದ್ಧಿ ಮೂಲಕ ವಾಹನ ಖರೀದಿಗೆ ಸರ್ಕಾರವೇ ಪರೋಕ್ಷ ಪ್ರೋತ್ಸಾಹ ನೀಡುತ್ತಿದೆ. ಈಗಲೇ ನಗರದಲ್ಲಿ 1 ಕೋಟಿಗೂ ಹೆಚ್ಚು ವಾಹನಗಳಿವೆ. ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಈ ರೀತಿ ಉಪಯೋಗ ಇಲ್ಲದ ಯೋಜನೆಗಳಿಗೆ ಹಣ ಖರ್ಚು ಮಾಡುವ ಬದಲು ಈ ಹಣವನ್ನು ಬಿಎಂಟಿಸಿ, ಮೆಟ್ರೊ ರೈಲು ನಿಗಮ ಮತ್ತು ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ( ಕೆ–ರೈಡ್) ನೀಡುವುದು ಸೂಕ್ತ. ಆಗ ದಟ್ಟಣೆ ಕಾರಿಡಾರ್‌ಗಳ ಅಗತ್ಯ ಇರುವುದಿಲ್ಲ.

-ರಾಜಕುಮಾರ್ ದುಗಾರ್, ರೈಲ್ವೆ ಹೋರಾಟಗಾರ

***

‘ಮೊದಲು ಲೆಕ್ಕ ಕೊಡಲಿ’

ಬಿಬಿಎಂಪಿ ವರ್ಷಕ್ಕೆ ₹10 ಸಾವಿರ ಕೋಟಿಯಷ್ಟು ಬಜೆಟ್ ಮಂಡಿಸುತ್ತದೆ. ಅದೆಲ್ಲವನ್ನೂ ಖರ್ಚು ಮಾಡಿದ್ದರೂ ನಗರದಲ್ಲಿ ರಸ್ತೆಗಳು ಹಾಗೇ ಇವೆ. ರಸ್ತೆ ನಿರ್ಮಾಣಕ್ಕೆ, ರಸ್ತೆ ಗುಂಡಿ ಮುಚ್ಚಲು ಮಾಡಿರುವ ಹಣ ಎಲ್ಲಿ ಹೋಯಿತು ಎಂಬುದರ ಬಗ್ಗೆ ಮೊದಲು ಬಿಬಿಎಂಪಿ ಲೆಕ್ಕ ಕೊಡಬೇಕು. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುವ ಸ್ಥಿತಿ ಇದೆ. ಇದು ಪ್ರತಿ ಮಳೆಗಾಲದಲ್ಲೂ ತಪ್ಪಿದಲ್ಲ. ಚುನಾವಣೆಗಳು ಸಮೀಪಿಸುತ್ತಿವೆ ಎಂಬ ಕಾರಣಕ್ಕೆ ಸಾವಿರಾರು ಕೋಟಿ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತಿದೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷಗಳಾಗಿವೆ. ಇಷ್ಟು ದಿನ ಏನು ಮಾಡಿದೆ ಎಂಬುದು ಗೊತ್ತಿದೆ. ಬಿಬಿಎಂಪಿ ಚುನಾವಣೆ ಘೋಷಣೆ ಆಗಲಿದೆ ಎಂಬ ಕಾರಣಕ್ಕೆ ಈಗ ಹೊಸ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡುತ್ತಿದೆ.

-ಶಾಂತಲಾ ದಾಮ್ಲೆ, ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು