ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಂಗಸಂದ್ರ | 13 ಮಂದಿಗೆ ಸೋಂಕು: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 109ಕ್ಕೆ

170 ಅಧಿಕ ಮಂದಿ ಕ್ವಾರಂಟೈನ್
Last Updated 23 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಗುರುವಾರ ಒಂದೇ ದಿನ 18 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ13 ಮಂದಿ ಸೋಂಕಿತರು ಹೊಂಗಸಂದ್ರದವರಾಗಿದ್ದಾರೆ. ಇದರಿಂದಾಗಿ ನಗರದಲ್ಲಿಸೋಂಕಿತರ ಸಂಖ್ಯೆ ನೂರರ (109) ಗಡಿ ದಾಟಿದೆ.

ಟಿಪ್ಪುನಗರದಲ್ಲಿ ಒಂದು ಪ್ರಕರಣ ಹಾಗೂ ಪಾದರಾಯನಪುರದಲ್ಲಿ ಮತ್ತೆ ಮೂರು ಪ್ರಕರಣಗಳು ದಾಖಲಾಗಿವೆ.

ಹೊಗಸಂದ್ರದಲ್ಲಿ ನೆಲೆಸಿರುವ 54 ವರ್ಷದ ಬಿಹಾರದ ಕಾರ್ಮಿಕನಿಗೆ ಬುಧವಾರ ಸೋಂಕು ತಗುಲಿತ್ತು. ಅವರು ವಾಸವಿದ್ದ ಹೊಂಗಸಂದ್ರದ ವಿದ್ಯಾನಗರ ಪ್ರದೇಶದಲ್ಲಿ ಎರಡು ನೂರಕ್ಕೂ ಅಧಿಕ ಮಂದಿ ನೆಲೆಸಿದ್ದಾರೆ. ಸೋಂಕಿತ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಹೊಂದಿದ್ದವರಲ್ಲಿ 9 ಮಂದಿಗೆ ಸೋಂಕು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿತರೆಲ್ಲರೂ ಪುರುಷರಾಗಿದ್ದು, 45 ವರ್ಷದೊಳಗಿನವರಾಗಿದ್ದಾರೆ. ಕೋವಿಡ್‌ ರೋಗಿಗಳೊಂದಿಗೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದ 170ಕ್ಕೂ ಅಧಿಕ ಮಂದಿಯನ್ನು ಗುರುತಿಸಿ, ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಅವರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಲಾಕ್‌ ಡೌನ್‌ ಘೋಷಣೆಯಾಗುವುದಕ್ಕಿಂತ ಎರಡು ವಾರಗಳ ಮುನ್ನ ಬಿಹಾರದಿಂದ ಕೆಲ ಕಟ್ಟಡ ಕಾರ್ಮಿಕರು ಈ ಪ್ರದೇಶಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದು, ಅವರೆಲ್ಲರೂ ಚಿಕ್ಕದಾದ ಶೆಡ್‌ಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ಈಗ ಅವರನ್ನು ಹೋಟೆಲ್‌, ವಸತಿ ಗೃಹ ಹಾಗೂ ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪರೋಕ್ಷ ಸಂಪರ್ಕ ಹೊಂದಿರುವವರನ್ನೂ ಪತ್ತೆ ಮಾಡಲಾಗುತ್ತಿದೆ. 54 ವರ್ಷದ ವ್ಯಕ್ತಿ (ರೋಗಿ 419) ಸೋಂಕು ತಗುಲಿದ ಕೆಲ ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದು, ಹಲವರಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎಂದು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಬೊಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ.ಕೆ.ಆರ್. ಯಶಸ್ವಿನಿ, ‘ಇಲ್ಲಿಯವರೆಗೆ ರೋಗಿಗಳೊಂದಿಗೆ ಸಂಪರ್ಕ ಹೊಂದಿದ್ದ 174 ಮಂದಿಯನ್ನು ಪತ್ತೆ ಮಾಡಿದ್ದೇವೆ. ಅದರಲ್ಲಿ 155 ಮಂದಿ ನೇರ ಹಾಗೂ 19 ಮಂದಿ ದ್ವಿತೀಯ ಸಂಪರ್ಕ ಹೊಂದಿದ್ದಾರೆ. ಇವರಲ್ಲಿ ಮೇಲ್ನೋಟಕ್ಕೆ ಸೋಂಕು ಲಕ್ಷಣಗಳು ಗೋಚರಿಸದಿದ್ದರೂ ರಕ್ತ ಹಾಗೂ ಗಂಟಲಿನ ದ್ರದವ ಮಾದರಿಯನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಮಹಿಳೆ ಮತ್ತು ಮಕ್ಕಳೂ ಇದ್ದಾರೆ. ಮಾ.21ರಿಂದ ಕಾರ್ಮಿಕರು ಎಲ್ಲಿಯೂ ಕೆಲಸಕ್ಕೆ ಹೋಗಿರಲಿಲ್ಲ’ ಎಂದರು.

ಎಲ್ಲರಿಗೂ ಪರೀಕ್ಷೆ: ‘ಈ ಪ್ರದೇಶದಲ್ಲಿರುವ ಎಲ್ಲರನ್ಣೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸೋಂಕಿತ ಹತ್ತು ಕಾರ್ಮಿಕರು ಒಂದೇ ಶೆಡ್‌ನಲ್ಲಿ ವಾಸ ಮಾಡುತ್ತಿದ್ದರು. ಪರಸ್ಪರ ಅಂತರ ಕಾಯ್ದುಕೊಳ್ಳದ ಪರಿಣಾಮ ಕೆಲವರಿಗೆ ಸೋಂಕು ತಗುಲಿದೆ. ಈ ಪ್ರದೇಶವನ್ನು ಧಾರಾವಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಜನರು ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಆಗ ಮಾತ್ರ ಸೋಂಕು ಹರಡುವುದನ್ನು ತಡೆಯಲು ಸಾಧ್ಯ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ತಿಳಿಸಿದರು.

ಹೊಂಗಸಂದ್ರ ವಾರ್ಡ್‌ನ ಪಾಲಿಕೆ ಸದಸ್ಯೆ ಭಾರತಿ ರಾಮಚಂದ್ರ, ‘ವಿದ್ಯಾ ಜ್ಯೋತಿ ಶಾಲೆಯ ಹಿಂದಿರುವ ಸಮಾನಾಂತರ ರಸ್ತೆಯಲ್ಲಿ ಕಾರ್ಮಿಕರು ಶೆಡ್‌ ಹಾಕಿಕೊಂಡಿದ್ದರು. ಅವರಲ್ಲಿ ಕೆಲವರು ಆರು ತಿಂಗಳ ಹಿಂದೆಯೇ ಇಲ್ಲಿ ಬಂದು ನೆಲೆಸಿದ್ದರು. ಬುಧವಾರ ಮೊದಲ ಪ್ರಕರಣ ವರದಿಯಾಗುತ್ತಿದ್ದಂತೆ ರಾತ್ರಿಯೇ ಸೋಂಕಿತರೊಂದಿಗೆ ಸಂಪರ್ಕವನ್ನು ಪತ್ತೆ ಮಾಡುವ ಕಾರ್ಯವನ್ನು ಆರಂಭಿಸುವ ಜತೆಗೆ ಪ್ರದೇಶಲ್ಲಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಿದ್ದೇವೆ’ ಎಂದರು.

ಆಸ್ಪತ್ರೆಗಳಿಗೆ ಅಲೆದಾಡಿದ್ದ ರೋಗಿ

ಕೊರೊನಾ ಸೋಂಕಿತ 54 ವರ್ಷದ ವ್ಯಕ್ತಿ (ರೋಗಿ 419) ನಗರದ ವಿವಿಧ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ್ದಾರೆ. ಜ್ವರ, ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿ ಸ್ಥಳೀಯ ವೇಣು ಕ್ಲಿನಿಕ್‌ಗೆ ಹೋಗಿ ತಪಾಸಣೆ ಮಾಡಿಸಿಕೊಂಡಿದ್ದರು.

ಎರಡು ದಿನವಾದರೂ ಅನಾರೋಗ್ಯ ಕಡಿಮೆಯಾಗದ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿರುವ ಪ್ರಯೋಗಾಲಯಕ್ಕೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದರು. ಇದರಿಂದಾಗಿ ವ್ಯಕ್ತಿ ಪ್ರಯೋಗಾಲಯಕ್ಕೆ ತೆರಳಿ, ರಕ್ತ ಮತ್ತು ಗಂಟಲು ದ್ರವದ ಮಾದರಿ ನೀಡಿ, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.

ಪರೀಕ್ಷಾ ವರದಿಯಲ್ಲಿ ಸೋಂಕು ದೃಢಪಟ್ಟ ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಬುಧವಾರ ಸ್ಥಳಾಂತರಿಸಿ, ದಾಖಲಿಸಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಅವರೊಂದಿಗೆ ಹಲವರು ನೇರ ಸಂಪರ್ಕಕ್ಕೆ ಬಂದಿದ್ದು, ಅಧಿಕಾರಿಗಳು ಅವರನ್ನು ಪತ್ತೆ ಮಾಡುತ್ತಿದ್ದಾರೆ. ವೇಣು ಕ್ಲಿನಿಕ್‌ನ ವೈದ್ಯರು ಸೇರಿದಂತೆ ಅಲ್ಲಿನ 10 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪಾದರಾಯನಪುರದಲ್ಲಿ ಮತ್ತೆ ಮೂರು ಪ್ರಕರಣ

ಮಾ.8ರಂದು ನಗರದಲ್ಲಿ ಮೊದಲ ಕೋವಿಡ್‌ ಪ್ರಕರಣ ವರದಿಯಾಗಿತ್ತು. ಅದಾದ ಬಳಿಕ ಪ್ರಕರಣಗಳ ಸಂಖ್ಯೆ ಏರಿಕೆಯತ್ತ ಮುಖ ಮಾಡಿತ್ತು. ಆದರೆ, ನಾಲ್ಕು ದಿನಗಳಿಂದ ಎರಡು ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಆದರೆ, ಗುರುವಾರ ಒಂದೇ ದಿನ ಹತ್ತಕ್ಕೂ ಅಧಿಕ ಪ್ರಕರಣಗಳು ವರದಿಯಾಗಿರುವುದು ಅಧಿಕಾರಿಗಳು ನಿದ್ದೆಗೆಡುವಂತೆ ಮಾಡಿದೆ.

ಸೀಲ್‌ ಡೌನ್‌ಗೆ ಒಳಗಾಗಿರುವ ಪಾದರಾಯನಪುರದಲ್ಲಿ ಹೊಸದಾಗಿ ಮೂರು ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಆ ಪ್ರದೇಶದಲ್ಲಿ ಒಟ್ಟು 22 ಕೋವಿಡ್‌ ಪ್ರಕರಣಗಳು ಬೆಳಕಿಗೆ ಬಂದಂತೆ ಆಗಿದೆ. ಟಿಪ್ಪುನಗರದಲ್ಲಿಯೂ ಮತ್ತೊಂದು ಪ್ರಕರಣ ವರದಿಯಾಗಿದೆ. ಈವರೆಗೆ 49 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT