ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

48 ಗಂಟೆಗಳಲ್ಲಿ 4,303 ಮಂದಿಗೆ ಸೋಂಕು

ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 43,503ಕ್ಕೆ ಏರಿಕೆ l ಸೋಂಕಿನಿಂದ ಇಲ್ಲಿಯವರೆಗೂ 862 ಜನರ ಸಾವು
Last Updated 25 ಜುಲೈ 2020, 19:59 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ 2,036 ಮಂದಿ ಕೊರೊನಾ ಸೋಂಕಿತರಾಗಿರುವುದು ಹಾಗೂ ಸೋಂಕಿನಿಂದ 29 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.

ಕೋವಿಡ್ ಪರೀಕ್ಷೆಗಳ ಸಂಖ್ಯೆ 4 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳ ಮಾಡಿದ ಬೆನ್ನಲ್ಲಿಯೇ ಸೋಂಕಿತರ ಸಂಖ್ಯೆ ಕೂಡ ಅಧಿಕವಾಗುತ್ತಿದೆ. 48 ಗಂಟೆಗಳಲ್ಲಿ 4,303 ಮಂದಿ ಕೋವಿಡ್ ಪೀಡಿತರಾಗಿರುವುದು ಖಚಿತಪಟ್ಟಿದೆ. ಇದೇ ಅವಧಿಯಲ್ಲಿ 79 ಮಂದಿ ಸಾವಿಗೀಡಾಗಿದ್ದಾರೆ. ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 43,503 ಹಾಗೂ ಮೃತಪಟ್ಟವರ ಸಂಖ್ಯೆ 862ಕ್ಕೆ ತಲುಪಿದೆ.

ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಪೂರ್ವ ವಲಯದಲ್ಲಿಯೇ ಅಧಿಕ ಮಂದಿ (495) ಸೋಂಕಿತರಾಗಿದ್ದಾರೆ.ದಕ್ಷಿಣ ವಲಯದಲ್ಲಿ 429, ಬೊಮ್ಮನಹಳ್ಳಿಯಲ್ಲಿ 172, ದಾಸರಹಳ್ಳಿಯಲ್ಲಿ 36, ಮಹದೇವಪುರದಲ್ಲಿ 135, ಆರ್.ಆರ್.ನಗರದಲ್ಲಿ 127, ಪಶ್ಚಿಮ ವಲಯದಲ್ಲಿ 390 ಹಾಗೂ ಯಲಹಂಕದಲ್ಲಿ 78 ಮಂದಿ ಸೋಂಕಿತರಾಗಿದ್ದಾರೆ.

ನಗರದಲ್ಲಿ 686 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 10,758ಕ್ಕೆ ಏರಿಕೆಯಾಗಿದೆ. 31,882 ಸೋಂಕಿತರು ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 339 ರೋಗಿಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.ನಗರದ ಜ್ವರ ಚಿಕಿತ್ಸಾಲಯಗಳಲ್ಲಿ (ಫಿವರ್ ಕ್ಲಿನಿಕ್‌) ಒಂದೇ ದಿನ 12,047 ಮಂದಿಯ ಗಂಟಲ ದ್ರವವನ್ನು ಸಂಗ್ರಹಿಸಿ, ಪರೀಕ್ಷೆಗೆ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. 40,143 ಮಂದಿಯ ತಪಾಸಣೆ ಮಾಡಲಾಗಿದೆ.

ಆರೈಕೆ ಕೇಂದ್ರದಲ್ಲಿ 244 ಹಾಸಿಗೆ: ನಗರದಲ್ಲಿ ಕೋವಿಡ್ ಚಿಕಿತ್ಸೆಗೆ ಗುರುತಿಸ ಲಾದ 16 ಸರ್ಕಾರಿ ಆಸ್ಪತ್ರೆಗಳಲ್ಲಿ 592 ಹಾಸಿಗೆಗಳು ಖಾಲಿಯಿವೆ. ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಸಿದ್ಧಗೊಳಿಸಲಾಗಿದ್ದ 2,802 ಹಾಸಿಗೆಗಳಲ್ಲಿ 2,558 ಹಾಸಿಗೆಗಳು ಭರ್ತಿಯಾಗಿವೆ. ಸದ್ಯ ಅಲ್ಲಿ 244 ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಹಾಸಿಗೆಗಳು ಖಾಲಿಯಿವೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸದ್ಯ 634 ಹಾಸಿಗೆಗಳು ಖಾಲಿಯಿವೆ.

ಖಾಸಗಿ ಆಸ್ಪತ್ರೆಗಳಲ್ಲಿ 1,535 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಒಟ್ಟು 8,639 ಹಾಸಿಗೆಗಳನ್ನು ಗುರುತಿಸಲಾಗಿದ್ದು, ಅಲ್ಲಿ ಇನ್ನೂ 7,104 ಹಾಸಿಗೆಗಳು ಖಾಲಿಯಿವೆ.

ಕೋವಿಡ್: ಡಿಜಿಟಲ್ ವಹಿವಾಟಿಗೆ ಮನವಿ

ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಹಿನ್ನೆಲೆಯಲ್ಲಿ ನಗದುರಹಿತ (ಡಿಜಿಟಲ್‌) ವಹಿವಾಟಿಗೆ ಆದ್ಯತೆ ನೀಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಜಯಿಸಬೇಕಾದರೆ ಮನೆಯಿಂದ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುವ ಜತೆಗೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವ್ಯಕ್ತಿಗಳು ಪರಸ್ಪರ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಸೋಂಕಿತ ವ್ಯಕ್ತಿಯ ಸ್ಪರ್ಶದಿಂದಲೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಅಗತ್ಯ ವಸ್ತುಗಳನ್ನು ಖರೀದಿಸಿದ ಬಳಿಕ ಡಿಜಿಟಲ್ ಹಣ ಪಾವತಿ ಮಾಡುವುದು ಅತ್ಯಂತ ಸುರಕ್ಷಿತ ಎಂದು ಇಲಾಖೆ ತಿಳಿಸಿದೆ.

ಮಾರುಕಟ್ಟೆಗೆ ತೆರಳುವಾಗ ಚೀಲವನ್ನು ಕೊಂಡೊಯ್ಯಬೇಕು. ಪ್ಲಾಸ್ಟಿಕ್‌ ಹಾಗೂ ಪೇಪರ್‌ ಚೀಲಗಳನ್ನು ಬಳಸಬಾರದು. ಬದಲಾಗಿ ಬಟ್ಟೆಯ ಚೀಲವನ್ನು ಬಳಕೆ ಮಾಡಬೇಕು. ಶಾಪಿಂಗ್‌ ವೇಳೆ ಯಾವುದೇ ಕಾರಣಕ್ಕೂ ಮುಖವನ್ನು ಮುಟ್ಟಿಕೊಳ್ಳಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಶಾಪಿಂಗ್ ಮುಗಿಸಿ ವಾಪಸ್ ಆದ ಬಳಿಕ ಕೈಗಳನ್ನು ಸೋಪಿನ ನೀರಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಸೇರಿದಂತೆ ಕೋವಿಡ್ ಲಕ್ಷಣಗಳು ಗೋಚರಿಸಿದಲ್ಲಿ ಕೂಡಲೇ ಹತ್ತಿರದ ಜ್ವರ ಚಿಕಿತ್ಸಾಲಯಕ್ಕೆ ತೆರಳಿ, ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಐಜಿಪಿ, ಎಸ್‌ಪಿ ಕಚೇರಿ ಸಿಬ್ಬಂದಿಗೂ ಸೋಂಕು

ಕೇಂದ್ರ ವಲಯ ಐಜಿಪಿ ಸೀಮಾಂತ್‌ ಕುಮಾರ್ ಸಿಂಗ್ ಕಚೇರಿ ಹಾಗೂ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಚನ್ನಣ್ಣನವರ ಕಚೇರಿಯ ಒಟ್ಟು 9 ಸಿಬ್ಬಂದಿಯಲ್ಲಿ ಕೊರೊನಾ ದೃಢಪಟ್ಟಿದೆ.

ಎರಡೂ ಕಚೇರಿಗಳು ವಸಂತನಗರದ ಮಿಲ್ಲರ್ಸ್ ರಸ್ತೆಯಲ್ಲಿವೆ. ಕಾರು ಚಾಲಕ, ಕಾನ್‌ಸ್ಟೆಬಲ್ ಸೇರಿ ಆರು ಮಂದಿ ಸೋಂಕಿತ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರು ಕೋವಿಡ್‌ ಆರೈಕೆ ಕೇಂದ್ರದಲ್ಲಿದ್ದಾರೆ.

ಎರಡೂ ಕಚೇರಿಗಳಿಗೂ ಮುಂಜಾಗ್ರತಾ ಕ್ರಮವಾಗಿ ಸೋಂಕು ನಿವಾರಕ ಸಿಂಪಡಿಸಲಾಗಿದೆ. ಐಜಿ‍ಪಿ ಕಚೇರಿಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ. ಸೋಂಕಿತರ ಜೊತೆ ಸಂಪರ್ಕದಲ್ಲಿದ್ದ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರ ಗಂಟಲಿನ ದ್ರವ ಸಂಗ್ರಹಿಸಿ ಕೋವಿಡ್‌ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT