ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ, ಹಣ್ಣಿನ ಹೆಸರಲ್ಲೂ ₹ 2 ಕೋಟಿ ಲೂಟಿ!

ನೆಲಮಂಗಲದ ದಂಪತಿಗಾಗಿ ಪೊಲೀಸರ ಶೋಧ
Last Updated 17 ಮಾರ್ಚ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ಕಿ ಹಾಗೂ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡುವ ವ್ಯವಹಾರದ ನೆಪದಲ್ಲಿ ಗ್ರಾನೈಟ್ ಉದ್ಯಮಿಯಿಂದ ₹ 2 ಕೋಟಿ ನಗದು ಹಾಗೂ 1 ಕೆ.ಜಿ.ಚಿನ್ನಾಭರಣ ಪಡೆದು ವಂಚಿಸಿದ ಆರೋಪದಡಿ ನೆಲಮಂಗಲದ ದಂಪತಿ ವಿರುದ್ಧ ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಥಣಿಸಂದ್ರದ ಮೊಹಮದ್ ಇತಿಶ್ಯಾಮ್ ಎಂಬುವರು ದೂರು ಕೊಟ್ಟಿದ್ದು, ಪೊಲೀಸರು ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ರವಿ ಹಾಗೂ ಅವರ ಪತಿ ಇಂದಿರಾ ಬಂಧನಕ್ಕೆ ಬಲೆ ಬೀಸಿದ್ದಾರೆ.

‘2018ರ ಮೇ ತಿಂಗಳಲ್ಲಿ ನನ್ನ ಅಕ್ಕನ ಗೆಳತಿ ಮೂಲಕ ಬಸವೇಶ್ವರನಗರದ ಪ್ರಿಯದರ್ಶಿನಿ ಹೋಟೆಲ್‌ ಬಳಿ ದಂಪತಿಯ ಪರಿಚಯವಾಯಿತು. ‘ನಾವು ಅಕ್ಕಿ, ಹಣ್ಣುಗಳನ್ನು ಹೊರದೇಶಗಳಿಗೆ ಎಕ್ಸ್‌ಪೋರ್ಟ್ ಮಾಡುತ್ತೇವೆ. ನಮ್ಮಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡುತ್ತೇವೆ’ ಎಂದು ಹೇಳಿದರು. ಅವರ ಮಾತನ್ನು ನಂಬಿ ₹ 2 ಕೋಟಿ ಕೊಟ್ಟಿದ್ದೆ. ಈ ವ್ಯವಹಾರಕ್ಕೆ ಸಂಬಂಧಿಸಿದಂತೆ ಕರಾರು ಪತ್ರಗಳನ್ನೂ ನೀಡಿದ್ದರು’ ಎಂದು ಮೊಹಮದ್ ದೂರಿನಲ್ಲಿ ವಿವರಿಸಿದ್ದಾರೆ.

‘ಆ ನಂತರದ ದಿನಗಳಲ್ಲಿ ನಮ್ಮ ಮನೆಗೆ ಬಂದು ಹೋಗುತ್ತ ಕುಟುಂಬ ಸದಸ್ಯರಿಗೂ ಹತ್ತಿರವಾದ ದಂಪತಿ, ‘ನಮ್ಮ ಸಂಬಂಧಿಕರ ಮದುವೆ ಇದೆ. ನಿಮ್ಮ ಒಡವೆಗಳನ್ನು ಕೊಡಿ. ವಿವಾಹ ಮುಗಿದ ಬಳಿಕ ವಾಪಸ್ ಕೊಡುತ್ತೇವೆ’ ಎಂದು ನಂಬಿಸಿ 1 ಕೆ.ಜಿ ಚಿನ್ನವನ್ನೂ ತೆಗೆದುಕೊಂಡು ಹೋಗಿದ್ದರು’ ಎಂದೂ ಆರೋಪಿಸಿದ್ದಾರೆ.

ಬ್ಯಾಂಕ್ ಚಲನ್‌ಗಳೂ ನಕಲಿ: ‘ಹೂಡಿಕೆ ಮಾಡಿದ್ದಕ್ಕೆ ಲಾಭದ ಹಣವೆಂದು ಆಗಾಗ್ಗೆ ₹ 50 ಸಾವಿರ, ₹ 1 ಲಕ್ಷದಂತೆ ಹಣ ಕೊಡುತ್ತಿದ್ದ ದಂಪತಿ, ಕೆಲ ದಿನಗಳ ನಂತರ ಲಾಭಾಂಶ ಕೊಡುವುದನ್ನು ನಿಲ್ಲಿಸಿಬಿಟ್ಟರು. ಈ ಬಗ್ಗೆ ವಿಚಾರಿಸಿದಾಗ ಸಬೂಬು ಹೇಳಿಕೊಂಡೇ ದಿನ ದೂಡುತ್ತಿದ್ದರು. ಇತ್ತೀಚೆಗೆ ದುಡ್ಡು ಕೇಳಿದಾಗ, ‘ಆಂಧ್ರಬ್ಯಾಂಕ್‌ನ ರಾಜಾಜಿನಗರ ಶಾಖೆಗೆ ಹಣ ಜಮೆ ಮಾಡಿದ್ದೇವೆ’ ಎಂದು ಕೆಲವು ಚಲನ್‌ಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು.’

‘ಖಾತೆಗೆ ಹಣ ಬಾರದೆ ಇದ್ದಾಗ ಬ್ಯಾಂಕ್‌ಗೆ ಹೋಗಿ ವಿಚಾರಿಸಿದೆ. ಆಗ ಅವು ನಕಲಿ ಚಲನ್‌ಗಳು ಎಂಬುದು ಗೊತ್ತಾಯಿತು. ಅಲ್ಲದೆ, ನಮ್ಮ ಒಡವೆಗಳನ್ನು ಅವರ ಹೆಸರುಗಳಲ್ಲಿ ಅಡಮಾನವಿಟ್ಟು ಹಣ ಪಡೆದುಕೊಂಡಿರುವುದೂ ತಿಳಿಯಿತು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT