ಕೊಲೆ ಆರೋಪಿ ಕಾಲಿಗೆ ಗುಂಡೇಟು

7

ಕೊಲೆ ಆರೋಪಿ ಕಾಲಿಗೆ ಗುಂಡೇಟು

Published:
Updated:

ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕೊಲೆ ಪ್ರಕರಣದ ಆರೋಪಿ ಸೀಗೇಹಳ್ಳಿ ಚರಣ್‍ರಾಜ್ (34) ಎಂಬಾತನ ಕಾಲಿಗೆ ಕೆ.ಆರ್‌.ಪುರ ಇನ್‌ಸ್ಪೆಕ್ಟರ್‌ ಜಯರಾಜ್ ಗುಂಡು ಹೊಡೆದಿದ್ದಾರೆ.

ಗಾಯಗೊಂಡಿರುವ ಆರೋಪಿಯನ್ನು ಕಾಡುಗೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಎಎಸ್‌ಐ ನಾರಾಯಣಸ್ವಾಮಿ ಅವರ ಕೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದು ಮನೆಗೆ ಹೋಗಿದ್ದಾರೆ ಎಂದು ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು.

ಹಳೇ ಮದ್ರಾಸ್ ರಸ್ತೆ ಸಮೀಪ ಗುರುವಾರ ರೌಡಿಶೀಟರ್ ಮಂಜುನಾಥ್ ಅಲಿಯಾಸ್ ವಾಟರ್ ಮಂಜನ ಕೊಲೆ ಆಗಿತ್ತು. ಅದಾದ ಬಳಿಕ ಆರೋಪಿ ಚರಣ್‍ರಾಜ್, ತಲೆಮರೆಸಿಕೊಂಡಿದ್ದ. ಶುಕ್ರವಾರ ನಸುಕಿನಲ್ಲಿ ಕಾಡುಗೋಡಿ ಬಳಿ ಆತ ದ್ವಿಚಕ್ರ ವಾಹನದಲ್ಲಿ ಹೊರಟಿದ್ದ. ಆ ಬಗ್ಗೆ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ಜಯರಾಜ್‌ ಹಾಗೂ ಸಿಬ್ಬಂದಿ, ಆತನನ್ನು ಬೆನ್ನಟ್ಟಿದ್ದರು.

ಬೆಳ್ತೂರು ಬಳಿ ಆರೋಪಿಯ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದರು. ನಂತರ, ಅಲ್ಲಿಂದ ತಪ್ಪಿಸಿಕೊಂಡಿದ್ದ ಆರೋಪಿ, ಪೊದೆಯೊಳಗೆ ಅವಿತುಕೊಂಡಿದ್ದ. ಆತನನ್ನು ಹಿಡಿದುಕೊಳ್ಳಲು ಎಎಸ್‍ಐ ನಾರಾಯಣಸ್ವಾಮಿ ಹೋಗಿದ್ದರು. ಅವರ ಮೇಲೆಯೇ ಚರಣ್‍ರಾಜ್, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದ ಎಂದು ಅಹದ್‌ ವಿವರಿಸಿದರು. 

ಎಎಸ್‌ಐ ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್‌, ಶರಣಾಗುವಂತೆ ಸೂಚಿಸಿದ್ದರು. ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದ. ಅವಾಗಲೇ ಅವರು ಆತನ ಮೇಲೆ ಗುಂಡು ಹಾರಿಸಿದರು ಎಂದರು.

ಮೃತ ಮಂಜುನಾಥ್, ಆರೋಪಿ ಚರಣ್‍ರಾಜ್ ಬಳಿ ₹15 ಲಕ್ಷ ಮೊತ್ತದ ನಿವೇಶನ ಖರೀದಿಸಿದ್ದ. ಅರ್ಧದಷ್ಟು ಹಣ ಕೊಟ್ಟು ಮನೆ ನಿರ್ಮಿಸಿಕೊಂಡಿದ್ದ. ನಿವೇಶನದ ಬಾಕಿ ಹಣ ಕೊಡಲು ಮಂಜುನಾಥ್‌ ನಿರಾಕರಿಸಿದ್ದ. ಅದೇ ಕಾರಣಕ್ಕೆ ಆರೋಪಿ, ತನ್ನ ಸಹಚರರ ಜತೆ ಸೇರಿ ಕೃತ್ಯ ಎಸಗಿದ್ದ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !