ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪೂರ್ವ ತಾ.ಪಂ.ಗೆ ದೀನದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತೀಕರಣ ಪ್ರಶಸ್ತಿ

Last Updated 24 ಏಪ್ರಿಲ್ 2021, 13:08 IST
ಅಕ್ಷರ ಗಾತ್ರ

ಬೆಂಗಳೂರು: ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಉತ್ತೇಜನ ನೀಡಲು ಕೇಂದ್ರ ಪಂಚಾಯತ್‌ ರಾಜ್‌ ಸಚಿವಾಲಯವು ರಾಷ್ಟ್ರೀಯ ಪಂಚಾಯತ್‌ರಾಜ್‌ ದಿನಾಚರಣೆಯಂದು (ಏ. 24) ನೀಡುವ ರಾಷ್ಟ್ರಮಟ್ಟದ ಎರಡು ಮಹತ್ತರ ಪ್ರಶಸ್ತಿಗಳನ್ನು ಬೆಂಗಳೂರು ನಗರದ ಜಿಲ್ಲೆ ಪಡೆದು ಕೊಂಡಿದೆ.

ಜಿಲ್ಲೆಯ ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿಯು ‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ’ ಪ್ರಶಸ್ತಿಗೆ ಭಾಜನವಾಗಿದ್ದರೆ, ರಾಜಾನುಕುಂಟೆ ಗ್ರಾಮ ಪಂಚಾಯಿತಿಯು ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರ್ಚುವಲ್‌ ರೂಪದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

‘ದೀನದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ’ ಪ್ರಶಸ್ತಿಗೆ, ಬೀದಿದೀಪ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ಒಳಚರಂಡಿ ಮತ್ತು ಸಾರ್ವಜನಿಕ ಶೌಚಾಲಯ ನಿರ್ವಹಣೆ, ರಸ್ತೆ, ಸಮುದಾಯ ಭವನ ಗ್ರಂಥಾಲಯ ಮುಂತಾದ ಮೂಲಸೌಕರ್ಯ ಒದಗಿಸುವುದು, ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೂಲಗಳಲ್ಲದೇ ಅನ್ಯ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ, ಲೆಕ್ಕಪತ್ರ ನಿರ್ವಹಣೆ, ಶಿಕ್ಷಣಕ್ಕೆ ಉತ್ತೇಜನ ನೀಡುವ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಮಾಹಿತಿ ಹಂಚಿಕೊಳ್ಳುವಲ್ಲಿ ಪಾರದರ್ಶಕತೆ ಮುಂತಾದ 34 ಮಾನದಂಡಗಳನ್ನು ಆಧರಿಸಿ ತಾಲ್ಲೂಕು ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಅರ್ಹ ಪಂಚಾಯತ್‌ರಾಜ್‌ ಸಂಸ್ಥೆಯನ್ನು ಪ್ರಶಸ್ತಿಗೆ ಶಿಫಾರಸು ಮಾಡುತ್ತದೆ.

‘ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯಿತಿಯು ಒಟ್ಟು 11 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಇವುಗಳಲ್ಲಿ ಕೈಗೊಂಡ ಮಳೆ ನೀರು ಸಂಗ್ರಹ ಕಾರ್ಯಕ್ರಮ, ಬೀದಿದೀಪಗಳಿಗೆ ಸೌರಶಕ್ತಿ ಬಳಕೆ, ಸ್ವಚ್ಛಭಾರತ ಅಭಿಯಾನದ ಯಶಸ್ವಿ ಅನುಷ್ಠಾನ, ಜೀವವೈವಿಧ್ಯ ಸಂರಕ್ಷಣೆಗೆ ಕೈಗೊಂಡ ಕ್ರಮಗಳು, ಒತ್ತುವರಿ ತೆರವು, ಹಸಿರೀಕರಣ ಅಭಿಯಾನ, ಕೆರೆ–ಕಲ್ಯಾಣಿಗಳ ಅಭಿವೃದ್ಧಿ, ಜಲಶಕ್ತಿ– ಜಲಾಮೃತ ಯೋಜನೆಯ ಯಶಸ್ವಿ ಅನುಷ್ಠಾನ, ಪರಿಶಿಷ್ಟರ ಅಭಿವೃದ್ಧಿಗೆ ಅನುದಾನ ಸದ್ಬಳಕೆ, ಸಾವಯವ ಕೃಷಿಗೆ ಉತ್ತೇಜನ, ಗ್ರಂಥಾಲಯಗಳ ಅಭಿವೃದ್ಧಿ, ಅಂಗನವಾಡಿಗಳ ಉನ್ನತೀಕರಣ, ಅಂಗನವಾಡಿಗಳನ್ನುಮಕ್ಕಳ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಿರುವುದು ಮುಂತಾದ ಅಂಶಗಳನ್ನು ಪರಿಗಣಿಸಿ ಈ ತಾಲ್ಲೂಕು ಪಂಚಾಯಿತಿಗೆ ಪ್ರಶಸ್ತಿ ನೀಡಲಾಗಿದೆ’ ಎಂದು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮಸಭೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಮಕ್ಕಳ ಹಾಗೂ ಮಹಿಳಾಸ್ನೇಹಿ ಗ್ರಾಮಸಭೆಗಳ ಆಯೋಜನೆ, ತೆರಿಗೆ ವಸೂಲಾತಿ ಮತ್ತು ಸದ್ಬಳಕೆ, ಅಂಗವಿಕಲ ಸ್ನೇಹಿ ಕಾರ್ಯಕ್ರಮಗಳ ಅನುಷ್ಠಾನ, ಸಾರ್ವಜನಿಕ ಉದ್ಯಾನ, ಯೋಗಮಂದಿರಗಳ ಅಭಿವೃದ್ಧಿ ಮತ್ತು ನಿರ್ವಹಣೆ ವಿಚಾರದಲ್ಲಿ ಈ ತಾಲ್ಲೂಕಿನ ಗ್ರಾಮಗಳು ಮುಂಚೂಣಿಯಲ್ಲಿವೆ. ಇಲ್ಲಿ ಎಲ್ಲ ಗ್ರಾಮಗಳಲ್ಲೂ ಕಸ ವಿಲೇವಾರಿಗೆ ಪ್ರತ್ಯೇಕ ತಾಣಗಳನ್ನು ಗುರುತಿಸಿ ಶಾಶ್ವತವಾಗಿ ಜಮೀನು ಹಂಚಿಕೆ ಮಾಡಲಾಗಿದೆ. ಪ್ರಶಸ್ತಿಗೆ ಭಾಜನವಾಗುವುದಕ್ಕೆ ಈ ಅಂಶಗಳೂ ನೆರವಾಗಿವೆ’ ಎಂದು ಅವರು ವಿಶ್ಲೇಷಿಸಿದರು.

‘ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ ಎಂಬುದಕ್ಕೆ ಜಿಲ್ಲೆಗೆ ದಕ್ಕಿರುವ ಎರಡು ಪ್ರಶಸ್ತಿಗಳೇ ಉದಾಹರಣೆ. ಸರ್ಕಾರಿ ಸಿಬ್ಬಂದಿ, ಜನಪ್ರತಿನಿಧಿಗಳ ಶ್ರಮ ಹಾಗೂ ಜನರ ಸಹಕಾರವೂ ಇದಕ್ಕ ಕಾರಣ’ ಎಂದರು.

2019–20ನೇ ಸಾಲಿನ ಸಾಧನೆ ಪರಿಗಣಿಸಿ ಪಂಚಾಯತ್‌ ರಾಜ್‌ ಸಂಸ್ಥೆಗಳನ್ನು ಈ ಪ್ರಶಸ್ತಿ ಆಯ್ಕೆ ಮಾಡಲಾಗಿದೆ. 2021ನೇ ಸಾಲಿನ ಪ್ರಶಸ್ತಿಗೆ 2020ರ ನವೆಂಬರ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ದಿನಾಂಕವನ್ನು 2021ರ ಜ.30ರವರೆಗೆ ವಿಸ್ತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT