ಶುಕ್ರವಾರ, ಡಿಸೆಂಬರ್ 4, 2020
21 °C

ಬೆಂಗಳೂರು: ಮೂವರು ಮಕ್ಕಳ ಕೊಂದು ತಂದೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ನೊಂದಿದ್ದ ಎನ್ನಲಾದ ಜನಕರಾಜ್ (35) ಎಂಬಾತ, ತನ್ನ ಮೂವರು ಮಕ್ಕಳನ್ನು ನೇಣು ಹಾಕಿ ಕೊಂದು ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೈಕೊ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ‘ನೇಪಾಳದ ಜನಕರಾಜ್, ಪತ್ನಿ ನಂದಾದೇವಿ ಜೊತೆ ನಗರಕ್ಕೆ ಬಂದಿದ್ದ. ರಮಣಶ್ರೀ ಎನ್‌ಕ್ಲೇವ್‌ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ಭದ್ರತಾ ಸಿಬ್ಬಂದಿ ಆಗಿ ಕೆಲಸಕ್ಕೆ ಸೇರಿದ್ದ. ಅಪಾರ್ಟ್‌ಮೆಂಟ್ ಸಮುಚ್ಚಯ ಬಳಿ ಜನಕರಾಜ್ ಕುಟುಂಬಕ್ಕೆ ಉಳಿದುಕೊಳ್ಳಲು ಕೊಠಡಿ ನೀಡಲಾಗಿತ್ತು. ದಂಪತಿಗೆ ಸರಸ್ವತಿ (14), ಹೇಮಂತಿ (9) ಮತ್ತು ರಾಜ್‌ಕುಮಾರ್ (3) ಎಂಬ ಮೂವರು ಮಕ್ಕಳಿದ್ದರು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜನಕರಾಜ್ ಪತ್ನಿ ನಂದಾದೇವಿ, ಎರಡು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರಿಂದಾಗಿ ಮಾನಸಿಕವಾಗಿ ನೊಂದಿದ್ದ ಜನಕರಾಜ್‌ನಿಗೆ ಮಕ್ಕಳನ್ನು ಜೋಪಾನ ಮಾಡುವುದು ಕಷ್ಟವಾಗಿತ್ತು. ಸಮೀಪದಲ್ಲಿ ಸಂಬಂಧಿ ಮನೆ ಇದ್ದು, ಅವರೇ ನಿತ್ಯ ಮಕ್ಕಳಿಗೆ ಊಟ ತಂದು ಕೊಡುತ್ತಿದ್ದರು. ತಾಯಿ ಇಲ್ಲದಿದ್ದರಿಂದ ರಾತ್ರಿಯಿಡಿ ಮಕ್ಕಳು ಅಳುತ್ತಿದ್ದರು. ಶುಕ್ರವಾರ ಮೂವರು ಮಕ್ಕಳು ಜೋರಾಗಿ ಅಳಲಾರಂಭಿಸಿದ್ದರು. ಆಗ ಜನಕರಾಜ್ ರೇಡಿಯೋ ಆನ್ ಮಾಡಿ ನಂತರ ಮೂವರು ಮಕ್ಕಳ ಕುತ್ತಿಗೆಗೆ ಹಗ್ಗದಿಂದ ಬಿಗಿದು ಒಬ್ಬೊಬ್ಬರಾಗಿ ಕೊಂದಿದ್ದ. ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದೂ ವಿವರಿಸಿದರು.

‘ಪತ್ನಿ ನಂದಾದೇವಿ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಹಾಗೂ ಸಂಬಂಧಿಕರ ಹೇಳಿಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು