ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಈ ವರ್ಷ ದಾಖಲೆ ಮಳೆ

2017ರಲ್ಲಿ ವಾರ್ಷಿಕ 169.9 ಸೆಂ.ಮೀ ಮಳೆ, ಈ ವರ್ಷ 170.9 ಸೆಂ.ಮೀ ಮಳೆ
Last Updated 21 ಅಕ್ಟೋಬರ್ 2022, 21:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಅತಿಹೆಚ್ಚು ಮಳೆ ಸುರಿದಿದ್ದು, ಮೂಲಸೌಕರ್ಯಕ್ಕೂ ಸಾಕಷ್ಟು ಹಾನಿಯಾಗಿದೆ. ನಗರದಲ್ಲಿ ಈ ವರ್ಷ ಮಲೆನಾಡು ಜಿಲ್ಲೆಗಳಲ್ಲಿ ಸುರಿಯುವಷ್ಟೇ ಸರಾಸರಿ ಮಳೆಯಾಗಿದೆ.

‘ಸಿಲಿಕಾನ್‌ ಸಿಟಿ’ಯಲ್ಲಿ 2017ರಲ್ಲಿ ವಾರ್ಷಿಕವಾಗಿ 169.9 ಸೆಂ.ಮೀ ಮಳೆ ಸುರಿದಿತ್ತು. ಅದು ಇದುವರೆಗಿನ ದಾಖಲೆಯಾಗಿತ್ತು. ಆದರೆ, ಈ ವರ್ಷ ಈ ವರ್ಷ ಜನವರಿ 1ರಿಂದ ಅಕ್ಟೋಬರ್‌ 21ರ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಆ ಪ್ರಮಾಣ ಅಳಿಸಿ ಹಾಕಿ ಸಾರ್ವಕಾಲಿಕ ದಾಖಲೆಯಾಗಿ ಅಂದಾಜು 170.9 ಸೆಂ.ಮೀ ಮಳೆಯಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ಘೋಷಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಈ ವರ್ಷ ಜನವರಿ 1ರಿಂದ ಅ.21ರ ಅವಧಿಯಲ್ಲಿ 137.2 ಸೆಂ.ಮೀ. ಮಳೆ ಸುರಿದಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆ ಮಳೆ 69.5 ಸೆಂ.ಮೀ. ಆಗಬೇಕಿತ್ತು. ವಾಡಿಕೆ ಮಳೆಗಿಂತ ಸರಾಸರಿ 67.7 ಸೆಂ.ಮೀ. ಹೆಚ್ಚು ಮಳೆ ಸುರಿದಿದೆ ಎಂದು ಐಎಂಡಿ ಅಧಿಕಾರಿ ಮಾಹಿತಿ ನೀಡಿದ್ಧಾರೆ.

‘ಬೆಂಗಳೂರಿನಲ್ಲಿ ಅಕ್ಟೋಬರ್‌ ಕೊನೆಯ ವೇಳೆಗೆ ನಿಧಾನವಾಗಿ ಮಳೆ ಕ್ಷೀಣಿಸಿ, ಚಳಿಗಾಲ ಪ್ರವೇಶದ ಮುನ್ಸೂಚನೆ ಸಿಗಬೇಕಿತ್ತು. ಆದರೆ, ಈಗಲೂ ಅಧಿಕ ಮಳೆಯಾಗುತ್ತಿದೆ. ಅ.1ರಿಂದ 21ರ ಅವಧಿಯಲ್ಲಿ ವಾಡಿಕೆ 11.4 ಸೆಂ.ಮೀ. ಮಳೆ ಸುರಿಯಬೇಕಿತ್ತು. 21.6 ಸೆಂ.ಮೀ. ಮಳೆಯಾಗಿದೆ. 10.2 ಸೆಂ.ಮೀನಷ್ಟು ಹೆಚ್ಚು ಮಳೆ ಬಿದ್ದಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ.

ಮುಂಗಾರು ಅವಧಿಯಲ್ಲಿ (ಜೂನ್‌1ರಿಂದ ಸೆಪ್ಟೆಂಬರ್‌ 30ರ ತನಕ) ಬೆಂಗಳೂರು ನಗರ ಜಿಲ್ಲೆಯಲ್ಲಿ 47.1 ಸೆಂ.ಮೀ. ವಾಡಿಕೆಯ ಮಳೆ ಪ್ರಮಾಣ. ಆದರೆ, 79 ಸೆಂ.ಮೀ. ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ ಬೆಂಗಳೂರು ಮಳೆಯಲ್ಲಿ ತೋಯುವಂತೆ ಆಗಿತ್ತು. ಮುಂಗಾರು ಅವಧಿಯಲ್ಲೇ 31.9 ಸೆಂ.ಮೀ. ಹೆಚ್ಚು ಮಳೆ ಸುರಿದಿದೆ.

‘ಸಿಲಿಕಾನ್‌ ಸಿಟಿ’ಯಲ್ಲಿ ನಿರಂತರ ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಗುಂಡಿಗಳಿಂದ ದ್ವಿಚಕ್ರ ಸವಾರರು ಸಂಕಟ ಪಡುತ್ತಿದ್ದಾರೆ.

ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಯಿಂದ ಬೆಂಗಳೂರು ಪೂರ್ವ ವಲಯದ ವ್ಯಾಪ್ತಿಯ ಕೆಲವು ಅಪಾರ್ಟ್‌ಮೆಂಟ್‌ಗಳಿಗೆ ನೀರು ನುಗ್ಗಿತ್ತು. ನೆಲಮಹಡಿಯಲ್ಲಿ ನಿಲುಗಡೆ ಮಾಡಿದ್ದ ವಾಹನಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಆ ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ಮಾಲೀಕರಿಗೆ ಬಂದಿತ್ತು. ಮಳೆಯ ನೀರು ಸಂಗ್ರಹಗೊಳ್ಳುವ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌, ನಿವೇಶನ ಹಾಗೂ ಬಾಡಿಗೆ ಮನೆಗಳಿಗೆ ಈಗ ಬೇಡಿಕೆ ಕುಸಿದಿದೆ.

‘ಬೆಳಕಿನ ಹಬ್ಬ ದೀಪಾವಳಿಯಲ್ಲಿ ವ್ಯಾಪಾರ ನಡೆಸಿ, ಬದುಕು ಕಟ್ಟಿಕೊಳ್ಳುತ್ತಿದ್ದೆವು. ಪ್ರತಿನಿತ್ಯ ಸಂಜೆ ಸುರಿಯುತ್ತಿರುವ ಮಳೆಯಿಂದ ವ್ಯಾಪಾರ ನಡೆಸಲು ಸಾಧ್ಯವಾಗುತ್ತಿಲ್ಲ. ವ್ಯಾಪಾರಕ್ಕಿಟ್ಟ ಸಾಮಗ್ರಿಗಳು ನೀರು ಪಾಲಾಗುತ್ತಿವೆ. ಮಳೆ ಬಂದರೆ ಕೆ.ಆರ್. ಮಾರುಕಟ್ಟೆ ಹಾಗೂ ಚಿಕ್ಕಪೇಟೆ ರಸ್ತೆಗಳಲ್ಲಿ ನೀರು ನಿಲುತ್ತಿದೆ. ಶನಿವಾರ ಹಾಗೂ ಭಾನುವಾರವೂ ಮಳೆ ಸುರಿದರೆ ಹೂವಿನ ಹಾಗೂ ಹಣ್ಣು ವ್ಯಾಪಾರ ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಚಿಕ್ಕಪೇಟೆಯಲ್ಲಿ ವ್ಯಾಪಾರ ನಡೆಸುವ ಸವಿತಾ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT