‘ಬೆಂಗಳೂರು ಕವನೋತ್ಸವ’ದಲ್ಲಿ ಮೊದಲ ದಿನ ಮೇಳೈಸಿದ.ಬಹುಭಾಷಾ ಸೊಗಡು

ಬೆಂಗಳೂರು: ನಗರದಲ್ಲಿ ಶನಿವಾರ ಆರಂಭವಾದ ‘ಬೆಂಗಳೂರು ಕವನೋತ್ಸವ’ದಲ್ಲಿ ಮೊದಲ ದಿನ ಬಹುಭಾಷಾ ಸೊಗಡು ಮೇಳೈಸಿತು. ಕನ್ನಡ, ಹಿಂದಿ, ತಮಿಳು, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷಾ ಕವಿಗಳು ಸಮಕಾಲೀನ ಸಮಸ್ಯೆ ಹಾಗೂ ಸವಾಲುಗಳನ್ನು ಕವನದ ಮೂಲಕ ಅಭಿವ್ಯಕ್ತಗೊಳಿಸಿದರು.
ವೇದಿಕೆಯಲ್ಲಿ ಕಾವ್ಯದ ರಸಧಾರೆ ಹರಿಯಿತು. ಇಡೀ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು ತಲೆದೂಗಿದರು.
ಇಲ್ಲಿನ ಲೀಲಾ ಪ್ಯಾಲೆಸ್‌ನಲ್ಲಿ ‘ಆಟಾ ಗಲಾಟ’ದ 6ನೇ ಆವೃತ್ತಿಯ ಉತ್ಸವಕ್ಕೆ ಸಿನಿಮಾ ನಟಿ, ಲೇಖಕಿ ದೀಪ್ತಿ ನವಲ್ ಚಾಲನೆ ನೀಡಿದರು.
ಕೋವಿಡ್ ಸಾಂಕ್ರಾಮಿಕ ರೋಗ ಭೀತಿಯಿಂದ ಎರಡು ವರ್ಷ ಆನ್‌ಲೈನ್‌ನಲ್ಲಿ ಕವನ ಉತ್ಸವ ನಡೆದಿತ್ತು. ಈ ಬಾರಿ ಭೌತಿಕವಾಗಿ ನಡೆದ ಕಾರ್ಯಕ್ರಮಕ್ಕೆ ಹಲವರು ಸಾಕ್ಷಿಯಾದರು.
ಕವಿಗಳು, ಕಲಾವಿದರು ಹಾಗೂ ಸಾಹಿತ್ಯಾಸಕ್ತರಿಂದ ಸಭಾಂಗಣ ಭರ್ತಿಗೊಂಡಿತ್ತು. ಜ್ಯೋತಿ ಸೇವಾ ಸದನ ಮಕ್ಕಳ ಹಾಡಿನಿಂದ ಆರಂಭವಾದ ಉತ್ಸವ, ದಿನವಿಡೀ ಹಲವು ವಿಚಾರಗಳ ಮಂಥನದ ಮೂಲಕ ಕಣ್ತೆರೆಸಿತು.
ದೀಪ್ತಿ ನವಲ್ ಮಾತನಾಡಿ, ‘ನಾನು ಸಿನಿಮಾ ನಟಿಯಾದರೂ ಕಾವ್ಯದ ಬಗ್ಗೆ ಆಸಕ್ತಿ ಬೆಳೆದು ಹಲವು ಕವನ ಸಂಕಲನಗಳನ್ನು ಹೊರತಂದಿರುವೆ. ತಾಯಿ ಪ್ರೇರಣೆಯಿಂದ ಬರವಣಿಗೆ ಸಾಧ್ಯಯಾಯಿತು’ ಎಂದರು.
‘ನಾನು ಮನಃಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದು, ಸಿನಿಮಾವೊಂದರಲ್ಲಿ ಮಾನಸಿಕ ಖಿನ್ನತೆಗೆ ಒಳಗಾದ ಮಹಿಳೆಯ ಪಾತ್ರದಲ್ಲಿ ನಟಿಸುವ ಅವಕಾಶ ಲಭಿಸಿತು. ಪಾತ್ರವು ನೈಜವಾಗಿ ಬರಲೆಂದು ರಾಂಚಿಯ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ 23 ದಿನ ವಾಸ್ತವ್ಯ ಮಾಡಿದ್ದೆ. ಅದು ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತು. ಅಲ್ಲಿನ ಅನುಭವಗಳೂ ಕವನಗಳಾಗಿವೆ. ಅಲ್ಲಿಂದ ಬಂದಮೇಲೆ ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳುವುದು ಕಷ್ಟ ವಾಯಿತು’ ಎಂದು ನೆನಪಿಸಿಕೊಂಡರು.
‘ನ್ಯೂಯಾರ್ಕ್‌ನಲ್ಲಿ ಎಲ್ಲರೂ ಇಂಗ್ಲಿಷ್‌ನಲ್ಲಿ ಕವಿತೆ ಬರೆಯುತ್ತಿದ್ದರೆ, ನಾನು ಹಿಂದಿ ಹಾಗೂ ಉರ್ದುವಿನಲ್ಲಿ ಕವನ ರಚಿಸುತ್ತಿದ್ದೆ. ಎರಡೂ ಭಾಷೆಗಳಲ್ಲೂ ನನಗೆ ಹಿಡಿತವಿದೆ’ ಎಂದು ಹೇಳಿದರು.
ಇದೇ ವೇಳೆ ನಟಿ ಸ್ವರಚಿತ ಕವನ ವಾಚಿಸಿದರು. ಸಿನಿಮಾ ವಿಮರ್ಶಕ ಶಂತನು ರಾಯ್ ಚೌಧರಿ ಸಂದರ್ಶಿಸಿದರು.
ನೃತ್ಯದ ಕುರಿತು ನಡೆದ ಗೋಷ್ಠಿಯಲ್ಲಿ ಮೈಸೂರಿನ ಅಖಿಲಾ ಕೃಷ್ಣಮೂರ್ತಿ, ಚೆನ್ನೈನ ಅಪೂರ್ವಾ, ಬೆಂಗಳೂರಿನ ನವ್ಯಾ ಹಾಗೂ ದೆಹಲಿಯ ಪೂರ್ವಾ ವಿಚಾರ ಮಂಡಿಸಿದರು.
‘ನೃತ್ಯಕ್ಕೆ ಹಾಡುಗಳ ಆಯ್ಕೆಯೂ ಮುಖ್ಯ. ಕಲೆಯನ್ನು ಸ್ವತಃ ಅನುಭವಿಸಿ ಪ್ರದರ್ಶಿಸಬೇಕು. ವೈವಿಧ್ಯ ಅಗತ್ಯ, ಚಲನಶೀಲತೆ ಇರಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ತಮಿಳಿನ ಯುವ ಕವಯಿತ್ರಿ ಮೀನಾ ಕಂದಸ್ವಾಮಿ ನಿರ್ಭಯ ಪ್ರಕರಣದ ಕುರಿತು ಬರೆದಿದ್ದ ಕವಿತೆಯು ಘಟನೆಯ ಭೀಕರತೆ ವಿವರಿಸಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.