ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಹೊನಲಿನಲ್ಲಿ ಚಿಂತನೆಗಳ ಹಾಯಿದೋಣಿ

ನೆಚ್ಚಿನ ಲೇಖಕರ ಹಸ್ತಾಕ್ಷರ, ಸೆಲ್ಫಿ ಪಡೆದು ಸಂಭ್ರಮಿಸಿದ ಆಸ್ತಕರು l ವರ್ಚುವಲ್‌ ಆಗಿ ನಡೆದ ಕೆಲವು ಗೋಷ್ಠಿಗಳು
Last Updated 18 ಡಿಸೆಂಬರ್ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ಭಾಷೆ, ವಿಜ್ಞಾನ, ಸಿನಿಮಾ, ರಾಜಕೀಯ, ವಾಸ್ತುಶಿಲ್ಪ, ನೃತ್ಯ... ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಹತ್ತು ಹಲವು ವಿಚಾರಗಳ ಮೆರವಣಿಗೆಯೇ ಇಲ್ಲಿ ನಡೆಯಿತು. ಒಂದೊಂದು ಗೋಷ್ಠಿಗಳೂ ಸಾಹಿತ್ಯ ಹೊನಲಿನಲ್ಲಿ ಹರಿದು ಬಂದ ಚಿಂತನೆಗಳ ಹಾಯಿದೋಣಿಗಳಂತಿದ್ದವು.

ದೊಮ್ಮಲೂರಿನ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಶನಿವಾರ ಆರಂಭವಾದ ಬೆಂಗಳೂರು ಸಾಹಿತ್ಯ ಉತ್ಸವ ವಿವಿಧ ಕ್ಷೇತ್ರಗಳ ಹೊಸ ಬೆಳವಣಿಗೆಗಳತ್ತ ಬೆಳಕು ಚೆಲ್ಲುವ ಮೂಲಕ ಜಡ್ಡುಗಟ್ಟಿದ್ದ ಮನಸುಗಳಲ್ಲಿ ಹೊಸತನದ ಸಿಹಿಗಾಳಿ ಬೀಸುವಂತೆ ಮಾಡಿತು.

ಬಹುತೇಕ ಸಂವಾದಗಳಲ್ಲಿ ಲೇಖಕರು ನೇರವಾಗಿ ಪಾಲ್ಗೊಂಡರೆ, ಇನ್ನು ಕೆಲವು ಗೋಷ್ಠಿಗಳು ವರ್ಚುವಲ್‌ ರೂಪದಲ್ಲಿ, ಮತ್ತೆ ಕೆಲವು ಮಿಶ್ರ ರೂಪದಲ್ಲಿ ನಡೆದವು. ಆದರೆ, ಉತ್ಸವಕ್ಕೆ ಭೇಟಿ ನಿಡಿದವರಿಗಷ್ಟೇ ಅವುಗಳನ್ನು ವೀಕ್ಷಿಸುವ ಅವಕಾಶವಿತ್ತು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ ಅವರು ಸೇರಿದಂತೆ ಅನೇಕ ಖ್ಯಾತ ಸಾಹಿತಿಗಳ ಹಾಗೂ ಉದಯೋನ್ಮುಖ ಬರಹಗಾರ ಮನದ ಮಾತುಗಳನ್ನು ಒಂದೇ ಸೂರಿನಡಿ ಕೇಳುವ ಅವಕಾಶವನ್ನು ಈ ಸಾಹಿತ್ಯ ಜಾತ್ರೆಒದಗಿಸಿತು.

ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಂಡಿದ್ದ ಅನೇಕರು ನೆಚ್ಚಿನ ಲೇಖಕ, ಲೇಖಕಿಯನ್ನು ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದರು. ಸಂವಾದ ಮುಗಿಸಿ ಲೇಖಕರು ಹೊರಬರುತ್ತಿದ್ದಂತೆ ಪುಸ್ತಕಗಳಿಗೆ ಲೇಖಕರ ಹಸ್ತಾಕ್ಷರ ಪಡೆದು, ಜೊತೆಗೊಂದು ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದರು.

ನಗರದ ವಿವಿಧ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡು, ವಾರಾಂತ್ಯದಲ್ಲಿ ಸಾಹಿತ್ಯದ ಸಂವಾದಗಳಿಗೆ ಕಿವಿಯಾದರು. ಯುವಜನರ ಪಾಲ್ಗೊಳ್ಳುವಿಕೆಯಿಂದಾಗಿ ಉತ್ಸವದಲ್ಲಿ ಹೊಸ ಹುರುಪು ಮೂಡಿತ್ತು.

ಸಾಹಿತ್ಯಾಸ್ತಕರಿಗೆ ಪುಸ್ತಕಗಳ ಖರೀದಿಗೂ ಭರಪೂರ ಆಯ್ಕೆಗಳಿತ್ತು. ನಾಡಿನ ವಿವಿಧ ಲೇಖಕರ ಪುಸ್ತಕಗಳು ಮಾರಾಟಕ್ಕಿದ್ದವು. ಉತ್ಸವದಲ್ಲಿ ಪಾಲ್ಗೊಂಡವರು ಆಸ್ಥೆಯಿಂದಲೇ ಪುಸ್ತಕಗಳತ್ತ ಕಣ್ಣು ಹಾಯಿಸಿದರು. ಇಷ್ಟದ ಹೊತ್ತಿಗೆಗಾಗಿ ಹುಡುಕಾಡಿದರು. ಮಕ್ಕಳಿಗೆ ಇಷ್ಟವಾಗುವ ಪುಸ್ತಕಗಳಿಗೂ ಕೊರತೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT