ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ: ಗುತ್ತಿನ ಮನೆಯ ಗತ್ತು ಗೈರತ್ತು

Last Updated 18 ಡಿಸೆಂಬರ್ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ಕರಾವಳಿಯಲ್ಲಿ ಕಂಡು ಬರುವ ಗುತ್ತಿನ ಮನೆಯ ಗತ್ತು ಗೈರತ್ತು ಹೇಗಿರುತ್ತವೆ, ಅವುಗಳ ವೈಶಿಷ್ಟ್ಯ ಏನು, ಅವುಗಳ ಚರಿತ್ರೆ ಏನು ಎಂಬುದನ್ನು ಸಾಯಿಗೀತಾ ಹೆಗ್ಡೆ ಕಟ್ಟಿಕೊಟ್ಟರು.

ಬೆಂಗಳೂರಿನಲ್ಲಿ ಶನಿವಾರ ನಡೆದ ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ತುಳುನಾಡಿನ ಪೂರ್ವಿಕರ ಬಂಟರ ಮನೆ’ ಕುರಿತ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಗುತ್ತು ಮನೆತನಕ್ಕೆ ಹಕ್ಕು ಮತ್ತು ಜವಾಬ್ದಾರಿ ಮುಖ್ಯವಾಗಿತ್ತು. ಊರಿಗೆ ಅಪಾಯ ಬಂದಾಗ, ಯುದ್ಧದ ಸಂದರ್ಭದಲ್ಲಿ ಮನೆಗೊಬ್ಬರಂತೆ ಎಲ್ಲ ಪಂಗಡದವರು ಆಯುಧ ಹಿಡಿದು ಗುತ್ತಿನ ಚಾವಡಿಗೆ ಬರಲೇಬೇಕಿತ್ತು. ನಂತರ ದೇವಸ್ಥಾನದಲ್ಲಿ ಪ್ರಾರ್ಥಿಸಿ ಗುತ್ತಿನ ಮನೆಯವರು ಹೇಳಿದಂತೆ ಅಥವಾ ಅರಮನೆಗೋ ಹೋಗಬೇಕಾಗಿತ್ತು. ಗ್ರಾಮ ಗುತ್ತು, ಹೋಬಳಿ ಗುತ್ತು, ಮಾಗಣೆ ಗುತ್ತು, ಸೀಮೆಗುತ್ತು ಎಂದು ಮನೆತನಗಳನ್ನು ಗುರುತಿಸಲಾಗುತ್ತದೆ ಎಂದರು.

ಗುತ್ತುಮನೆತನದ ಕೋಣೆಗಳ ಹೆಸರುಗಳೂ ಮುಖ್ಯವಾಗುತ್ತವೆ. ಭತ್ತವನ್ನು ಶೇಖರಿಸುವ ತುಪ್ಪೆಸ್ಥಳ, ಹೆಬ್ಬಾಗಿಲು, ಚಾವಡಿ, ಭಂಡಾರದ ಮನೆ, ತುಂಡುಕೊಟ್ಯ ಇರುತ್ತಿತ್ತು. ಸರ್ಕಾರಿ ದಾಖಲೆಗಳನ್ನು ಇಡಲು ಪಟೇಲರಿಗೆ ತುಂಡುಕೊಟ್ಯ ಮೀಸಲಾಗುತ್ತಿತ್ತು. 80ರಿಂದ 100 ಜನ ಒಂದೊಂದು ಮನೆಯಲ್ಲಿ ಇರುತ್ತಿದ್ದರು. ಮನೆಯ ಉತ್ತರ ಭಾಗದಲ್ಲಿ ಸತ್ತವರನ್ನು ಸುಡುವುದಕ್ಕೆ ಜಾಗ ಮೀಸಲಿರಿಸಲಾಗುತ್ತಿತ್ತು. ಮನೆಗಳು ಎತ್ತರದ ಜಾಗದಲ್ಲಿ ಇರುತ್ತಿದ್ದವು ಎಂದು ತಿಳಿಸಿದರು.

ಗುತ್ತಿನ ಮನೆಯನ್ನು ಕಟ್ಟಲು ಬೆಲ್ಲ, ಸುಣ್ಣಗಳ ಮಿಶ್ರಣ, ಅನ್ನ ಬಸಿದ ಗಂಜಿಯ ನೀರು, ಮುಳಿ ಹುಲ್ಲನ್ನು ಹಾಕಿ ಹುಳಿಬರಿಸಿ ಒಂದೂವರೆ ಅಡಿ ಅಗಲದ ಗೋಡೆ ಕಟ್ಟಲಾಗಿತ್ತು. ಕೆತ್ತನೆ ಇರುವ ವಿವಿಧ ಬಗೆಯ ಮರದ ಕಂಬಗಳನ್ನು ಬಳಸಲಾಗುತ್ತಿತ್ತು. ಇದು ಗುತ್ತಿನ ಮನೆಯ ವೈಭವವನ್ನು ಸಾರುತ್ತಿತ್ತು ಎಂದು ವಿವರಿಸಿದರು.

ಬಲಭಾಗದಿಂದ ಹಾಲು ತರಬೇಕು, ಎಡಭಾಗದಿಂದ ನೀರು ತರಬೇಕು ಎಂಬ ನಿಯಮವೂ ಇತ್ತು. ಬಲ ಬದಿಯಲ್ಲಿ ದನಗಳನ್ನು ಕಟ್ಟುವ ದನದ ಹಟ್ಟಿ, ಈಶಾನ್ಯ ಭಾಗದಲ್ಲಿ ಬಾವಿ ಇರುತ್ತಿತ್ತು ಎಂದರು. ಗಾಯತ್ರಿ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT