ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವ ಡಿ.3ರಿಂದ

150ಕ್ಕೂ ಅಧಿಕ ವಿಚಾರ ಸಂಕಿರಣ ಆಯೋಜನೆ
Last Updated 24 ನವೆಂಬರ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 11ನೇ ಆವೃತ್ತಿಯನ್ನು ಡಿ.3 ಮತ್ತು ಡಿ.4ಕ್ಕೆ ಕುಮಾರಕೃಪಾ ರಸ್ತೆಯಲ್ಲಿರುವ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಏರ್ಪಡಿಸಲಾಗಿದೆ.

ಎರಡು ದಿನಗಳ ಉತ್ಸವದಲ್ಲಿ ವಿಚಾರಸಂಕಿರಣಗಳು ಮತ್ತು ಸಂವಾದಗಳು ಬೆಳಿಗ್ಗೆ 10ರಿಂದ ನಡೆಯಲಿವೆ. 280 ಲೇಖಕರು ಹಾಗೂ ಭಾಷಣಕಾರರು ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. 150ಕ್ಕೂ ಅಧಿಕ ವಿಚಾರಸಂಕಿರಣಗಳನ್ನು ಹಮ್ಮಿಕೊಳ್ಳಲಾಗಿದೆ.ಏಕಕಾಲದಲ್ಲಿ ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.‌ ಪ್ರಸ್ತುತ ವಿದ್ಯಮಾನಗಳು, ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ಸಂಗೀತ, ಸಿನಿಮಾ, ಆಹಾರ, ಆರ್ಥಿಕತೆ, ನವೋದ್ಯಮ ಸೇರಿ ವೈವಿಧ್ಯಮಯ ವಿಷಯಗಳ ಕುರಿತು ತಜ್ಞರು ಚರ್ಚಿಸಲಿದ್ದಾರೆ.

ವಿವಿಧ ಭಾಷೆಯ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ಮಕ್ಕಳಿಗೆ ಪ್ರತ್ಯೇಕ ವೇದಿಕೆ ಇರಲಿದೆ. ಬೂಕರ್ ಪ್ರಶಸ್ತಿ ವಿಜೇತರಾದ ಗೀತಾಂಜಲಿ ಶ್ರೀ, ಶೆಹನ್ ಕರುಣಾತಿಲಕ, ಪ್ರವಾಸಿ ಬರಹಗಾರ ಪಿಕೊ ಲೈಯರ್, ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಮೌಜೊ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸಾರಾ ಜೋಸೆಫ್, ನಟರಾದ ಫರ್ಹಾನ್ ಅಖ್ತರ್, ರಮೇಶ್ ಅರವಿಂದ್, ಕಬೀರ್ ಬೇಡಿ, ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಲೇಖಕ ವಿಕ್ರಮ್ ಚಂದ್ರ, ಮಾಜಿ ಕ್ರಿಕೆಟಿಗ ವಿ.ವಿ.ಎಸ್. ಲಕ್ಷ್ಮಣ್, ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ ಸೇರಿ ಹಲವರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

ವೈವಿಧ್ಯದ ಅನಾವರಣ:‌‘ಈ ಉತ್ಸವದಲ್ಲಿ ಅರ್ಥಪೂರ್ಣ ಸಂವಾದ, ಆರೋಗ್ಯಕರ ಚರ್ಚೆಗಳು ನಡೆಯಲಿವೆ. ಉತ್ಸವದ ನೋಂದಣಿ ಪ್ರಾರಂಭವಾಗಿದ್ದು, ಪ್ರವೇಶ ಉಚಿತ ಇರುತ್ತದೆ. ಈ ಉತ್ಸವವು ಸಾಹಿತ್ಯಿಕ ಲೋಕದ ವೈವಿಧ್ಯವನ್ನು ಅನಾವರಣ ಮಾಡಲಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಪ್ರಮುಖರು, ಓದುಗರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರರನ್ನು ಒಂದೆಡೆ ಸೇರಿಸಲು ಈ ಉತ್ಸವ ಸಹಕಾರಿಯಾಗಲಿದೆ’ ಎಂದು ಉತ್ಸವದ ನಿರ್ದೇಶಕಿ ಶೈನಿ ಆಂಟೋನಿ ತಿಳಿಸಿದ್ದಾರೆ.

‘ಸಾಹಿತ್ಯದ ಜತೆಗೆ ಸಂಗೀತ, ಸಿನಿಮಾ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ದೇಶ–ವಿದೇಶಗಳಿಂದ ಬರಲಿದ್ದಾರೆ. ಸಾಹಿತ್ಯಿಕ ಅನುಭವಗಳನ್ನು ಒಟ್ಟುಗೂಡಿಸುವುದು ಈ ಉತ್ಸವದ ಮುಖ್ಯ ಉದ್ದೇಶ’ ಎಂದು ಹೇಳಿದ್ದಾರೆ.

ಮಾಹಿತಿಗೆ:www.bangaloreliteraturefestival.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT