ಬುಧವಾರ, ಜನವರಿ 29, 2020
31 °C

ಬಸ್‌ ಸಂಖ್ಯೆ ಹೆಚ್ಚಿಸಿ: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪ್ರಯಾಣಿಕರ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಗೆ ಕಡಿವಾಣ ಹಾಕಲು ಬಸ್‌ ಪ್ರಯಾಣ ದರ, ಪ್ರಯಾಣದ ಅವಧಿ ಎರಡೂ ಇಳಿಕೆಯಾಗಬೇಕು ಮತ್ತು ಬಸ್‌ಗಳ ಸಂಖ್ಯೆ ಹೆಚ್ಚಾಗಬೇಕು’ ಎಂದು ನಗರ ಸಾರಿಗೆ ಬಸ್ ಪ್ರಯಾಣಿಕರ ವೇದಿಕೆ ಸಲಹೆ ನೀಡಿದೆ.

ಪ್ರಯಾಣಿಕರ ವೇದಿಕೆ ಶನಿವಾರ ‘ಎಲ್ಲರ ಬಸ್, ಎಲ್ಲರಿಗೂ ಬಸ್’ ಸಂವಾದ ಏರ್ಪಡಿಸಿತ್ತು. ಬಿಎಂಟಿಸಿ ಬಸ್ ವ್ಯವಸ್ಥೆ ಬಲಪಡಿಸುವ ಸಂಬಂಧ ವಿವಿಧ ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಂಚಿಕೊಂಡ ಅಭಿಪ್ರಾಯಗಳನ್ನು ಆಧರಿಸಿ ವೇದಿಕೆ ಈ ಶಿಫಾರಸು ಮಾಡಿದೆ. 

‘ಜನಸಂಖ್ಯೆಗೆ ಅನುಗುಣವಾಗಿ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಕಿರಿದಾದ ರಸ್ತೆ, ಕಡಿಮೆ ಅಂತರದ ಮಾರ್ಗಗಳಲ್ಲಿ ಮಿನಿ ಬಸ್‍ಗಳನ್ನು ಪರಿಚಯಿಸಬೇಕು. ಬಸ್‍ಗಳಿಗೆ ಪ್ರತ್ಯೇಕ ಪಥ ನಿರ್ಮಿಸಿ ಪ್ರಯಾಣದ ಅವಧಿ ಕಡಿಮೆ ಮಾಡಬೇಕು. ಈ ಬಗ್ಗೆ ಮಾಹಿತಿ ನೀಡುವ ಮೊಬೈಲ್ ಆ್ಯಪ್, ವೆಬ್‍ಸೈಟ್ ರೂಪಿಸಬೇಕು’ ಎಂದು ಒತ್ತಾಯಿಸಿದೆ.

‘ನಗರದಲ್ಲಿ ಖಾಸಗಿ ವಾಹನ ಬಳಕೆ ಕಡಿಮೆ ಮಾಡಲು ಪೂರಕವಾದ ಪಾರ್ಕಿಂಗ್ ನೀತಿ ರೂಪಿಸಬೇಕು. ಖಾಸಗಿ ವಾಹನಗಳಿಗೆ ವಾರ್ಷಿಕ ತೆರಿಗೆ ವಿಧಿಸಬೇಕು’ ಎಂದು ಆಗ್ರಹಿಸಿದೆ.

‘1,300 ಚದರ ಕಿಲೋ ಮೀಟರ್ ವಿಸ್ತಾರದ ಬೆಂಗಳೂರು 1.20 ಕೋಟಿ ಜನಸಂಖ್ಯೆ ಹೊಂದಿದೆ. 80 ಲಕ್ಷ ವಾಹನಗಳ ಜತೆಗೆ ಪ್ರತಿನಿತ್ಯ 1,750 ಹೊಸ ವಾಹನಗಳು ರಸ್ತೆಗಳಿಯುತ್ತಿದ್ದು, ವಾಹನ ದಟ್ಟಣೆಗೆ ಕಾರಣವಾಗಿದೆ. ವಾಹನ ದಟ್ಟಣೆ, ಜನಸಂದಣಿ, ಬೆಂಗಳೂರಿನ ಜೀವನ ಶೈಲಿಯೇ ಆಗಿ ಹೋಗಿದೆ. ಪ್ರತಿನಿತ್ಯ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದರೆ 5 ವರ್ಷಗಳ ಹಿಂದೆ 6,500 ಇದ್ದ ಬಿಎಂಟಿಸಿ ಬಸ್‌ಗಳ ಸಂಖ್ಯೆ ಬದಲಾಗಿಲ್ಲ. ಪ್ರಯಾಣದರವೂ ಹೆಚ್ಚೇ ಇದೆ’ ಎಂದು ವೇದಿಕೆ ತಿಳಿಸಿದೆ.

ಗೃಹ ಕಾರ್ಮಿಕರ ಸಂಘಟನೆ ಸದಸ್ಯೆ ಯಲ್ಲಮ್ಮ, ಗಾರ್ಮೆಂಟ್ಸ್ ಆ್ಯಂಡ್ ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಪ್ರತಿಭಾ, ಸ್ಲಂ ಜನರ ಸಂಘಟನೆಯ ಮೋಹನ್ ಸೂರ್ಯ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು