ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಅಧಿಕಾರಿಗಳಿಗೆ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಕೊಟ್ಟ 14 ಸೂಚನೆಗಳು

Last Updated 30 ಮಾರ್ಚ್ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯು ಮೂರು ಪಾಳಿಯಲ್ಲಿ ಕೆಲಸ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ.

ನಿಷೇಧಾಜ್ಞೆ ನಡುವೆಯೂ ಹಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅಂಥವರ ಕೆಲಸಕ್ಕೆ ನಿಯಂತ್ರಣ ಹೇರಬೇಕಿದೆ. ಅದರ ಜೊತೆಗೆ ಪೊಲೀಸರ ಆರೋಗ್ಯ ಕಾಪಾಡಿಕೊಳ್ಳಲು ಕಮಿಷನರ್ ಕ್ರಮ ಕೈಗೊಂಡಿದ್ದಾರೆ. ಇದೇ ಕಾರಣಕ್ಕೆ ಭಾನುವಾರ ರಾತ್ರಿ ವಾಕಿಟಾಕಿಯಲ್ಲಿ ಪೊಲೀಸರಿಗೆ 15 ಸೂಚನೆಗಳನ್ನು ಪಾಲಿಸುವಂತೆ ತಿಳಿಸಿದ್ದಾರೆ.

'ನಾಗರಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ, ಇದುವರೆಗೂ ಜಪ್ತಿ ಮಾಡಿರುವ ವಾಹನಗಳನ್ನು ಬಿಡುಗಡೆ ಮಾಡಿ. ನಾಳೆಯಿಂದ (ಸೋಮವಾರ) ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಿ. ಆ ವಾಹನಗಳನ್ನು ಲಾಕ್‌ಡೌನ್ ಮುಗಿಯುವವರೆಗೂ ಬಿಡಬೇಡಿ' ಎಂದು ಕಮಿಷನರ್ ಹೇಳಿದ್ದಾರೆ.

ಪೊಲೀಸರ ಕೆಲಸವನ್ನು ಶ್ಲಾಘಿಸಿರುವ ಕಮಿಷನರ್, ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯ ಕಾಪಾಡಿಕೊಳ್ಳುವಂತೆಯೂ ತಿಳಿಸಿದ್ದಾರೆ.

80 ಸಾವಿರ ಪಾಸ್ ವಿತರಣೆ:ಅಗತ್ಯ ಸೇವೆಗಳ ಜನರಿಗೆ ನೀಡುವ ಪಾಸ್‌ಗಳನ್ನು ಆನ್‌ಲೈನ್ ಮೂಲಕ ನೀಡಲಾಗುತ್ತಿದೆ. ಭಾನುವಾರದ ಅಂತ್ಯಕ್ಕೆ 80 ಸಾವಿರ ಪಾಸ್‌ಗಳನ್ನು ವಿತರಿಸಲಾಗಿದೆ'ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

200 ಕಾರ್ಮಿಕರು ವಶಕ್ಕೆ: ಕೊರೊನಾ ವೈರಾಣು ಹರಡುವಿಕೆ ಭೀತಿಯಲ್ಲಿ ನಗರ
ದಿಂದ ತಮ್ಮ ಊರುಗಳಿಗೆ ಹೊರಟಿದ್ದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ 200 ಜನರನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಹಲವೆಡೆ ನೆಲೆಸಿದ್ದ ಜನ, 10 ವಾಹನಗಳಲ್ಲಿ ತಮ್ಮೂರಿಗೆ ಹೊರಟಿದ್ದರು. ತುಮಕೂರು ರಸ್ತೆಯಲ್ಲಿ ಸೋಮವಾರ ರಾತ್ರಿ ವಾಹನಗಳನ್ನು ತಡೆದ ಪೊಲೀಸರು, 'ನಗರದಲ್ಲಿ ನಿಷೇಧಾಜ್ಞೆ ಇದ್ದು ಮುಂದಕ್ಕೆ ಹೋಗಲು ಬಿಡುವುದಿಲ್ಲ' ಎಂದು ಹೇಳಿ ವಾಹನಗಳನ್ನು ಜಪ್ತಿ ಮಾಡಿದರು.

ಪೊಲೀಸ್ ಕಮಿಷನರ್ ಸೂಚನೆಗಳು

1. ಹಾಲು, ಪತ್ರಿಕೆ, ತರಕಾರಿ ಸರಬರಾಜು ಮತ್ತು ಎಟಿಎಂಗೆ ಹಣ ತುಂಬುವ ವಾಹನಗಳಿಗೆ ಅಡ್ಡಿಪಡಿಸಬೇಡಿ.

2. ತರಕಾರಿ, ದಿನಸಿ, ಹಣ್ಣು ಮತ್ತು ದಿನನಿತ್ಯದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ನಿರ್ವಹಣೆ ಮಾಡಲು ಬಣ್ಣದಿಂದ ವೃತ್ತ ಮಾಡಿ. ಅದರಲ್ಲೇ ಸಾರ್ವಜನಿಕರು ನಿಲ್ಲುವಂತೆ ಮಾಡಿ.

3. ಎಲ್ಲ ಠಾಣೆಗಳಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ನೇಮಿಸಿ. ಜನ ಸಮಸ್ಯೆ ಹೇಳಿಕೊಂಡು ಬಂದಾಗ ಅವರೊಂದಿಗೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಕೆಳಹಂತದಲ್ಲಿ ಸಮಸ್ಯೆ ಬಗೆ ಹರಿಯದಿದ್ದರೆ ಎಸಿಪಿ, ಡಿಸಿಪಿಗಳ ಗಮನಕ್ಕೆ ತಂದು ಪರಿಹಾರ ದೊರಕಿಸಬೇಕು.

4. ಎಲ್ಲ ಠಾಣೆಗಳಲ್ಲಿ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರು ರಸ್ತೆಗಳನ್ನು ಮುಚ್ಚಬೇಕು. ಜನ ಸಂಚರಿಸದಂತೆ ಎಚ್ಚರಿಕೆ ವಹಿಸಬೇಕು

5. ಇಂದು ಬೆಂಗಳೂರಿನಾದ್ಯಂತ 2,008 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅವರಿಗೆಲ್ಲ ಎಚ್ಚರಿಕೆ ಕೊಟ್ಟು ಕಳುಹಿಸಿ. ನಾಳೆಯಿಂದ ಸಂಚರಿಸುವ ವಾಹನಗಳನ್ನು ಲಾಕ್ ಡೌನ್ ಅವಧಿ ಮುಗಿಯುವವರೆಗು ಬಿಡಬೇಡಿ.

6. ತುರ್ತು ಸೇವೆಗಾಗಿ ಪೊಲೀಸ್ ಇಲಾಖೆಯಿಂದ ನೀಡಲಾಗಿರುವ ಪಾಸ್ ಗಳು ದುರುಪಯೋಗವಾಗುತ್ತಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳಾದ ಡಿಸಿಪಿಗಳು, ಎಸಿಪಿಗಳು ಗಮನ ಹರಿಸಬೇಕು.

7. ಸಂಚಾರ ಮತ್ತು ಕಾನೂನು ಸುವ್ಯವಸ್ಥೆಯ ಪೊಲೀಸರು ಜೊತೆಯಲ್ಲಿ ಕೆಲಸ ಮಾಡಬೇಕು, ಸಾಧ್ಯವಾಗುವ ಕಡೆ ದೃಶ್ಯಗಳನ್ನು ಚಿತ್ರೀಕರಣ ಮಾಡಿ

8. ಲಾಠಿ ಇಲ್ಲದ ಬಂದೋಬಸ್ತ್ ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಸದ್ಯಕ್ಕೆ ಅದನ್ನೇ ಮುಂದುವರೆಸಿ, ಮುಂದೆಯೂ ಲಾಠಿ ಹಿಡಿಯದೆ ಬಂದೋಬಸ್ತ್ ಇರಲಿ.

9. ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಇರುವವರಿಗೆ ಹೆಚ್ಚು ದುಡ್ಡು ವಸೂಲಿ ಮಾಡಬಾರದು. ಅಲ್ಲೆ ಊಟದ ವ್ಯವಸ್ಥೆ ಮಾಡಬೇಕು. ಊಟ ಕೊಟ್ಟು ಹೊರಗೆ ಕಳುಹಿಸುವುದು, ಪಿಜಿ ಬಾಗಿಲು ಹಾಕುತ್ತೇನೆ ಎಂದು ಬೆದರಿಸುವುದನ್ನು ಮಾಡಬಾರದು.

10. ಈಗಾಗಲೇ ಸಂಚಾರ ಪೊಲೀಸರು ಮೂರು ಸರದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಸಿಬ್ಬಂದಿಗಳಿಗೂ ಮೂರು ಸರದಿಯಲ್ಲಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಬೇಕು.

11. ಡಯಾಲಿಸ್, ಕಿಮೋಥೆರಪಿ, ಹೃದಯಾಘಾತ ಸೇರಿದಂತೆ ಇತರ ತುರ್ತು ಆರೋಗ್ಯ ಸಂದರ್ಭದಲ್ಲಿ ಹೊಯ್ಸಳ ವಾಹನಗಳು ಖುದ್ದಾಗಿ ಹೋಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ದೂರ ಇದ್ದರೆ, ಬದಲಿ ವಾಹನದ ವ್ಯವಸ್ಥೆ ಮಾಡಬೇಕು.

12. ವಾಕಿಂಗ್ ಮಾಡುವವರಿಗೆ ಒಳ್ಳೆಯ ಮಾತಿನಲ್ಲಿ ಎಚ್ಚರಿಕೆ ಕೊಟ್ಟು ಕಳುಹಿಸಬೇಕು.

13. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಒಡಿಶಾ, ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳ ಜನ ಹಾಗೂ ಉತ್ತರ ಕರ್ನಾಟಕದ ಜನ ಬಂದು ಸಮಸ್ಯೆ ಹೇಳಿಕೊಂಡರೆ ಸಮಾಧಾನದಿಂದ ಕೇಳಿ ಬಗೆಹರಿಸಬೇಕು.

14. ಸುಮಾರು ಜನ ದಾನ ಮಾಡಲು ಬರುತ್ತಾರೆ. ಅದನ್ನು ಗೌರವಯುತವಾಗಿ ಸ್ವೀಕರಿಸಿ ಕಳುಹಿಸಬೇಕು.

15. ಬಿಬಿಎಂಪಿ ಅಧಿಕಾರಿಗಳ ಸಂಪರ್ಕ ಮಾಡಿ ಪೊಲೀಸರ ಕ್ವಾರ್ಟರ್ಸ್ ಸ್ವಚ್ಛಗೊಳಿಸುವ ಕೆಲಸ ಮಾಡಿಸಬೇಕು.

ಮಾಧ್ಯಮದವರಿಗೆ ವಿನಾಕಾರಣ ಕಿರುಕುಳ
‘ಕೆಲ‌ ಮಾಧ್ಯಮ ಮಿತ್ರರು ಕಚೇರಿ ಕೆಲಸದ ನಿಮಿತ್ತ ಹೊರಗಡೆ ಓಡಾಡುವ ಸಂದರ್ಭದಲ್ಲಿ ಪೋಲೀಸರಿಂದ ಅನಗತ್ಯವಾಗಿ ಕಿರುಕುಳ ಉಂಟಾಗುತ್ತಿರುವ‌ ಬಗ್ಗೆ ದೂರುಗಳು ಬಂದಿವೆ. ಮಾಧ್ಯಮದವರು ಕಚೇರಿಯ ಗುರುತಿನ ಚೀಟಿ ತೋರಿಸಿದರೆ ಅದನ್ನು ಮಾನ್ಯ ಮಾಡಬೇಕು. ಯಾವುದೇ‌ ರೀತಿಯಲ್ಲೂ ಕಿರುಕುಳ ನೀಡಬಾರದು. ಆ ರೀತಿ ದೂರುಗಳು ಕೇಳಿಬಂದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಕಮಿಷನರ್ ಭಾಸ್ಕರ್ ರಾವ್‌ ಪೊಲೀಸರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT