ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ವಿಮೆ ವೆಚ್ಚ ₹12,000 ಕೋಟಿ

ಪ್ರತಿ ಕುಟುಂಬ ತುಂಬಬೇಕಿರುವ ಕಂತು ₹1200
Last Updated 2 ಫೆಬ್ರುವರಿ 2018, 20:11 IST
ಅಕ್ಷರ ಗಾತ್ರ

ನವದೆಹಲಿ: 2017–18ರ ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಿದ ಮಹತ್ವಾಕಾಂಕ್ಷಿ ರಾಷ್ಟ್ರೀಯ ಆರೋಗ್ಯ ರಕ್ಷಣೆ ಯೋಜನೆಗೆ (ಎನ್‌ಎಚ್‌ಪಿಎಸ್‌) ಸರ್ಕಾರವು ವರ್ಷವೊಂದಕ್ಕೆ ಮಾಡಬೇಕಿರುವ ವೆಚ್ಚದ ಮೊತ್ತ ಸುಮಾರು ₹12 ಸಾವಿರ ಕೋಟಿ. ಪ್ರತಿ ಕುಟುಂಬಕ್ಕೆ ತುಂಬಬೇಕಿರುವ ವಿಮಾ ಕಂತು ₹1200ಕ್ಕಿಂತ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಮಂಡಿಸಲಾದ ಬಜೆಟ್‌ನಲ್ಲಿ 10 ಕೋಟಿ ಕುಟುಂಬಗಳ 50 ಕೋಟಿ ಜನರಿಗೆ ಉಚಿತ ಆರೋಗ್ಯ ಸೇವೆಯ ಯೋಜನೆಯನ್ನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರಕಟಿಸಿದ್ದರು. ವರ್ಷಕ್ಕೆ ಗರಿಷ್ಠ ₹5 ಲಕ್ಷದವರೆಗೆ ಚಿಕಿತ್ಸೆ ಪಡೆಯಲು ಈ ಯೋಜನೆಯಲ್ಲಿ ಅವಕಾಶ ಇದೆ.

2018–19ನೇ ವರ್ಷಕ್ಕೆ ಈ ಯೋಜನೆಗೆ ₹2,000 ಕೋಟಿ ಮೀಸಲಿರಿಸಲಾಗಿದೆ. ರಾಜ್ಯಗಳು ಈ ಯೋಜನೆಗೆ ಸೇರ್ಪಡೆಯಾಗಲಿವೆ.

ರಾಜ್ಯಗಳು ₹800 ಕೋಟಿ ನೀಡಲಿವೆ. ಆರೋಗ್ಯ ಮತ್ತು ಶಿಕ್ಷಣ ಉಪತೆರಿಗೆಯನ್ನು (ಸೆಸ್‌) ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ. ಇದರಿಂದಲೂ ಸ್ವಲ್ಪ ಹಣ ಎನ್‌ಎಚ್‌ಪಿಎಸ್‌ಗೆ ದೊರೆಯಲಿದೆ. ಯೋಜನೆ ಆರಂಭಿಸಲು ಈ ಮೊತ್ತ ಸಾಕಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗಿ ಪಡೆಯುವ ಚಿಕಿತ್ಸೆಯು ಈ ಯೋಜನೆಯ ವ್ಯಾಪ್ತಿಗೆ ಬರಲಿದೆ. ರಾಜ್ಯ ಸರ್ಕಾರಗಳ ಆಸ್ಪತ್ರೆಗಳ ಜತೆಗೆ ಕೆಲವು ಖಾಸಗಿ ಆಸ್ಪತ್ರೆಗಳನ್ನೂ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಜೇಟ್ಲಿ ಹೇಳಿದ್ದಾರೆ.

ವಿಮಾ ಕಂಪನಿಗಳು ಲಾಭ ಮಾಡಿಕೊಳ್ಳಲು ಈ ಯೋಜನೆಯು ಅವಕಾಶ ಕೊಡುತ್ತದೆ ಎಂಬ ಟೀಕೆಯನ್ನು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಆಡಳಿತಾತ್ಮಕ ವೆಚ್ಚ ಮತ್ತು ಲಾಭವನ್ನು ಒಟ್ಟು ಯೋಜನೆಯ ಶೇ 20ರೊಳಗೇ ಇರಿಸಿಕೊಳ್ಳಬೇಕು ಎಂದು ವಿಮಾ ಕಂಪನಿಗಳಿಗೆ ಸೂಚಿಸಲಾಗುವುದು ಎಂದು ಈ ಮೂಲಗಳು ಹೇಳಿವೆ.

ಎನ್‌ಎಚ್‌ಪಿಎಸ್‌ಗೆ ತಗಲುವ ಒಟ್ಟು ವೆಚ್ಚದಲ್ಲಿ ಶೇ 60ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರಗಳು ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ. ವೃದ್ಧಾಪ್ಯದ ಕಾಯಿಲೆಗಳಿಗೂ ಯೋಜನೆ ಅಡಿ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಯೋಜನೆಯು ಆಧಾರ್‌ನೊಂದಿಗೆ ಜೋಡಣೆಯಾಗಲಿದೆ. ಆದರೆ ಆಧಾರ್‌ ಇಲ್ಲ ಎಂಬ ಕಾರಣಕ್ಕೆ ಯೋಜನೆಯ ಸೌಲಭ್ಯ ನಿರಾಕರಿಸಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಈ ಯೋಜನೆಯು ಭಾರತದ ಸಾಮಾಜಿಕ ಆರ್ಥಿಕ ಚಿತ್ರಣವನ್ನೇ ಬದಲಿಸಲಿದೆ. ಆಸ್ಪತ್ರೆ ವೆಚ್ಚಗಳಿಂದಾಗಿ ಎಷ್ಟೋ ಕುಟುಂಬಗಳು ದಿವಾಳಿಯಾಗುತ್ತಿವೆ. ಯೋಜನೆಯು ಇದನ್ನು ತಡೆಯಲಿದೆ. ಅಷ್ಟಲ್ಲದೆ ದೇಶದ ಉತ್ಪಾದಕತೆಯೂ ಹೆಚ್ಚಲಿದೆ ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ಸೇವೆಗಳಿಗಾಗಿ ಜನರು ಮಾಡುವ ವೆಚ್ಚ ದೇಶದ ಜನರ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಶೇ 62ರಷ್ಟು ಜನರ ಜೀವನದ ಮೇಲೆ ಇದು ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿಯೂ ಹೇಳಲಾಗಿತ್ತು.
***
* ಅಕ್ಟೋಬರ್‌ 2ರಿಂದ ಯೋಜನೆಗೆ ಚಾಲನೆ ಸಾಧ್ಯತೆ

* ಫಲಾನುಭವಿಗಳಿಗೆ ನಗದುರಹಿತ ಚಿಕಿತ್ಸೆ; ಚಿಕಿತ್ಸೆಗೆ ಪಾವತಿಸಿದ ಬಳಿಕ ವೆಚ್ಚ ತುಂಬಿಸಿಕೊಡುವಿಕೆ ಅಲ್ಲ

ಯೋಜನೆ ಅನುಷ್ಠಾನಕ್ಕೆ ಎರಡು ಮಾರ್ಗಗಳು

1. ಖಾಸಗಿ ಕಂಪನಿಯೊಂದರಿಂದ ವಿಮೆ ಖರೀದಿ

2. ಸರ್ಕಾರದ ಬೆಂಬಲದಲ್ಲಿ ಟ್ರಸ್ಟ್‌ ಸ್ಥಾಪಿಸಿ ಅದರ ಮೂಲಕ ವಿಮೆ
ಯಾವ ಮಾದರಿ ಅನುಸರಿಸಬೇಕು ಎಂಬುದನ್ನು  ನಿರ್ಧರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT