ಮಳೆ: ಹೊಳೆಯಾದ ರಸ್ತೆಗಳು

7

ಮಳೆ: ಹೊಳೆಯಾದ ರಸ್ತೆಗಳು

Published:
Updated:
ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಹರಿದ ನೀರು – ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಮಳೆಯ ಅಬ್ಬರ ಜೋರಾಗಿತ್ತು. ಮಧ್ಯಾಹ್ನದಿಂದ ಸಂಜೆಯವರೆಗೂ ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ರಸ್ತೆಯಲ್ಲೆಲ್ಲ ನೀರು ಹರಿದು ಹೊಳೆಯೇ ಸೃಷ್ಟಿಯಾಗಿತ್ತು.

ಇತ್ತೀಚಿನ ಕೆಲ ದಿನಗಳವರೆಗೆ ಕೇವಲ ಮೋಡ ಕವಿದ ವಾತಾವರಣ ನಗರದಲ್ಲಿತ್ತು. ಅಲ್ಲಲ್ಲಿ ತುಂತುರು ಮಳೆ ಮಾತ್ರ ಸುರಿದಿತ್ತು. ಮಂಗಳವಾರ ಮಳೆ ಜೋರಾಗಿ ಸುರಿದು, ಜನಜೀವನ ಅಸ್ತವ್ಯಸ್ತಗೊಳಿಸಿತು. ರಸ್ತೆಯಲ್ಲೇ ನೀರು ಹರಿದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ಆರ್‌.ಟಿ.ನಗರ, ರಾಜಾಜಿನಗರ, ಮಲ್ಲೇಶ್ವರ, ಸಹಕಾರ ನಗರ, ವಿಜಯನಗರ, ಗಾಯತ್ರಿನಗರ, ಯಶವಂತಪುರ, ಕೆ.ಆರ್. ಮಾರ್ಕೆಟ್, ಬಸವನಗುಡಿ, ಹನುಮಂತ ನಗರ, ಯಲಹಂಕ, ಹೆಬ್ಬಾಳ, ವಿದ್ಯಾರಣ್ಯಪುರ, ಜಾಲಹಳ್ಳಿ, ಪೀಣ್ಯ, ಕೆಂಗೇರಿ, ರಾಜರಾಜೇಶ್ವರಿನಗರ, ಬೆಳ್ಳಂದೂರು, ಮಾರತ್ತಹಳ್ಳಿ, ವೈಟ್‌ಫೀಲ್ಡ್‌ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಜೋರು ಮಳೆ ಸುರಿಯಿತು.

ಈ ಪ್ರದೇಶಗಳ ಪ್ರಮುಖ ರಸ್ತೆಗಳಲ್ಲಿ 1ರಿಂದ 2 ಅಡಿಯಷ್ಟು ನೀರು ಹರಿಯಿತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲವು ವಾಹನಗಳು, ನೀರಿನಲ್ಲೇ ಕೆಟ್ಟು ನಿಂತು, ಸವಾರರು ತಳ್ಳಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂದವು.

ಮಹದೇವಪುರ, ಶಿವಾನಂದ ವೃತ್ತದಲ್ಲಿರುವ ಕೆಳ ಸೇತುವೆ ಹಾಗೂ ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲೂ ನೀರು ಹರಿಯಿತು. ಮಹದೇವಪುರದ ಕೆಳ ಸೇತುವೆಯಲ್ಲಿ ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ನೀರು ಕಡಿಮೆಯಾದ ನಂತರವೇ ವಾಹನಗಳ ಓಡಾಟ ಪುನರ್‌ ಆರಂಭಗೊಂಡಿತು.

ಬಾಗಿದ್ದ ಮರ ತೆರವು: ಮಳೆ ವೇಳೆಯೇ ಜೋರಾಗಿ ಗಾಳಿ ಬೀಸಿದ್ದರಿಂದ ಬ್ರಿಗೇಡ್‌ ರಸ್ತೆಯಲ್ಲಿ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿ ಬಾಗಿತ್ತು.

ಪಾದಚಾರಿಗಳು ಆತಂಕದಲ್ಲಿ ಮರದ ಬಳಿ ನಡೆದುಕೊಂಡು ಹೋದರು. ಸ್ಥಳಕ್ಕೆ ಹೋಗಿದ್ದ ಬಿಬಿಎಂಪಿ ಸಿಬ್ಬಂದಿ ಹಾಗೂ ಅಶೋಕನಗರ ಸಂಚಾರ ಪೊಲೀಸರು, ಮರವನ್ನು ತೆರವುಗೊಳಿಸಿ ಸ್ಥಳೀಯರಲ್ಲಿದ್ದ ಆತಂಕ ದೂರ ಮಾಡಿದರು.

‘ರಸ್ತೆಯಲ್ಲಿ ನೀರು ಹರಿದಿದ್ದು ಬಿಟ್ಟರೆ ಬೇರೆ ಯಾವುದೇ ದೂರುಗಳು ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಸಂಚಾರ ದಟ್ಟಣೆ: ಮಧ್ಯಾಹ್ನದಿಂದ ಸಂಜೆಯವರೆಗೂ ಮೆಜೆಸ್ಟಿಕ್, ವೈಟ್‌ಫೀಲ್ಡ್, ಬೆಳ್ಳಂದೂರು, ಮಲ್ಲೇಶ್ವರ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿತ್ತು. ಪೊಲೀಸರು ಕೆಲವೆಡೆ ಮಾರ್ಗ ಬದಲಾವಣೆ ಮಾಡಿ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು. 

Tags: 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !