ಶನಿವಾರ, ನವೆಂಬರ್ 16, 2019
21 °C

ಬೆಂಗಲೂರಿನಲ್ಲಿ ಧಾರಾಕಾರ ಮಳೆ

Published:
Updated:
Prajavani

ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಗುಡುಗು – ಸಿಡಿಲಿನಿಂದ ಕೂಡಿದ ಮಳೆ ಸುರಿಯಿತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಕೆಲವೆಡೆ ಸಾಧಾರಣ ಮಳೆ ಆಯಿತು. ರಾತ್ರಿ ವೇಳೆ ಮಳೆಯು ಜೋರಾಗಿತ್ತು.

ಕೋರಮಂಗಲ, ಮಡಿವಾಳ, ಶಾಂತಿನಗರ, ಬಸವನಗುಡಿ, ಚಾಮರಾಜಪೇಟೆ, ಎಂ.ಜಿ.ರಸ್ತೆ, ಇಂದಿರಾನಗರ, ಶಿವಾಜಿನಗರ, ಹಲಸೂರು ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ಮಳೆ ಜೋರಾಗಿ ಸುರಿಯಿತು. ಈ ಪ್ರದೇಶಗಳ ರಸ್ತೆಯಲ್ಲೆಲ್ಲ ನೀರು ಹರಿಯಿತು. ರಾಜಕಾಲುವೆ ಹಾಗೂ ಚರಂಡಿಯ ತ್ಯಾಜ್ಯ ರಸ್ತೆಗೆ ಬಂದಿತ್ತು.

ಮಳೆ ನೀರು ರಸ್ತೆಯಲ್ಲಿ ಹರಿದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು. ಶಿವಾನಂದ ವೃತ್ತ, ಮೆಜೆಸ್ಟಿಕ್‌ ಬಳಿಯ ರೈಲ್ವೆ ಕೆಳ ಸೇತುವೆಯಲ್ಲೂ ನೀರು ನಿಂತುಕೊಂಡಿತ್ತು. ಈ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಿದವು.

ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆಯಲ್ಲೂ ಮಳೆ ಜೋರಾಗಿತ್ತು. ಅಲ್ಲೆಲ್ಲ ವಾಹನಗಳ ದಟ್ಟಣೆ ಕಂಡುಬಂತು.

ಕೆಲಸ ಮುಗಿಸಿ ಮನೆಗೆ ಹೊರಟಿದ್ದ ದ್ವಿಚಕ್ರ ವಾಹನ ಸವಾರರು, ಸೇತುವೆ ಹಾಗೂ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಆಶ್ರಯ ಪಡೆದುಕೊಂಡಿದ್ದರು. 

‘ನಗರದಲ್ಲಿ ಉತ್ತಮ ಮಳೆಯಾಗುತ್ತಿದೆ. ಮರ ಬಿದ್ದಿರುವುದು ಸೇರಿದಂತೆ ಯಾವುದೇ ರೀತಿಯ ದೂರುಗಳು ಸದ್ಯಕ್ಕೆ ಬಂದಿಲ್ಲ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಮಳೆಯಲ್ಲೇ ಕುಳಿತ ಹೋರಾಟಗಾರರು: ರೈಲು ನಿಲ್ದಾಣದ ಆವರಣದಲ್ಲಿ ಧರಣಿ ನಡೆಸುತ್ತಿರುವ ಉತ್ತರ ಕರ್ನಾಟಕದ ರೈತ ಹೋರಾಟಗಾರರು, ಸುರಿವ ಮಳೆಯಲ್ಲೇ ಕುಳಿತು ಧರಣಿ ಮುಂದುವರಿಸಿದರು.

ಗುರುವಾರದಿಂದಲೇ ನಿಲ್ದಾಣದ ಆವರಣದಲ್ಲಿ ರೈತರು ಕುಳಿತುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮಳೆ ಸುರಿಯುತ್ತಿದ್ದಂತೆ ಕೆಲ ಮಹಿಳೆಯರು ನಿಲ್ದಾಣದೊಳಗೆ ಹೋಗಿ ರಕ್ಷಣೆ ಪಡೆದರು. ರೈತ ಮುಖಂಡರು, ಮಳೆಯಲ್ಲೇ ತಾಡಪಾಲ ಹೊತ್ತುಕೊಂಡು ಕುಳಿತಿದ್ದರು.

‘ಮಹದಾಯಿ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮಳೆ, ಚಳಿ ಹಾಗೂ ಬಿಸಿಲು ಏನೇ ಇದ್ದರೂ ಹೆದರುವುದಿಲ್ಲ’ ಎಂದು ಮುಖಂಡರು ಹೇಳಿದರು.  

ಪ್ರತಿಕ್ರಿಯಿಸಿ (+)