ಬೆಂಗಳೂರು: ಬುಧವಾರ ಸಂಜೆ ಅಚಾನಕ್ ಆಗಿ ಸುರಿದ ಮಳೆ ಬೆಂಗಳೂರಿನಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ ಕುಸಿತದಂತಹ ಘಟನೆಗಳು ವರದಿಯಾಗಿವೆ. ಚರ್ಚ್ ಸ್ಟ್ರೀಟ್ನಲ್ಲಿರುವ ಜನಪ್ರಿಯ ಪುಸ್ತಕ ಮಳಿಗೆಯೊಂದಕ್ಕೆ ನೀರು ನುಗ್ಗಿದ ಪರಿಣಾಮ ಸುಮಾರು 5 ಸಾವಿರ ಪುಸ್ತಕಗಳಿಗೆ ಹಾನಿಯಾಗಿದೆ.

ಚರ್ಚ್ ಸ್ಟ್ರೀಟ್ನಲ್ಲಿರುವ ಕೃಷ್ಣ ಗೌಡ ಅವರ ಮಾಲೀಕತ್ವದ ‘ಬುಕ್ವರ್ಮ್’ ಪುಸ್ತಕ ಮಳಿಗೆಗೆ ಅಪಾರ ಪ್ರಮಾಣದ ನೀರು ನುಗ್ಗಿ ಹಾನಿಯಾಗಿದೆ. ಈ ಮಳಿಗೆಯು ತಗ್ಗು ಪ್ರದೇಶದಲ್ಲಿದ್ದು, ಪ್ರತಿ ಸಲ ಮಳೆ ಬಂದಾಗಲೂ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ, ನಿನ್ನೆ ಸುರಿದ ಆಲಿಕಲ್ಲು ಮಳೆಗೆ ಚರಂಡಿಗಳು ಬಂದ್ ಆಗಿದ್ದು, ನೀರು ನೇರವಾಗಿ ಮಳಿಗೆಗೆ ನುಗ್ಗಿದೆ,

ಪ್ರಮುಖ ಪುಸ್ತಕಗಳು ಹಾನಿಗೊಳಗಾಗಿದ್ದು, ಅವುಗಳಲ್ಲಿ ‘ಆಸ್ಟೆರಿಕ್ಸ್ ಅಂಡ್ ಒಬೆಲಿಕ್ಸ್’, ವಾಲ್ಟರ್ ಐಸಾಕ್ಸನ್ ಬರೆದ ‘ಇಲಾನ್ ಮಸ್ಕ್’, ಜೀತ್ ಥಾಯಿಲ್ ಸಂಕಲನದ ‘ಪೆಂಗ್ವಿನ್ ಬುಕ್ ಆಫ್ ಇಂಡಿಯನ್ ಪೊಯೆಟ್ಸ್’, ರೂಪಾ ಪೈ ಅವರ ‘ಕಬ್ಬನ್ ಪಾರ್ಕ್: ದ ಗ್ರೀನ್ ಹಾರ್ಟ್ ಆಫ್ ಬೆಂಗಳೂರು’ ಮತ್ತು ರಿಕ್ ರಿಯೋರ್ಡನ್ ಅವರ ‘ಪರ್ಸಿ ಜಾಕ್ಸನ್ ಅಂಡ್ ಒಲಿಂಪಿಯನ್ಸ್’ ಪುಸ್ತಕಗಳು ಸೇರಿವೆ.

‘ಬೇಸಿಗೆ ರಜೆಯ ಕಾರಣ ವ್ಯಾಪಾರ ಹೆಚ್ಚಾಗುವುದರಿಂದ ನಾವು ಹೆಚ್ಚಿನ ದಾಸ್ತಾನು ತರಿಸಿಕೊಂಡಿದ್ದೇವು. ಆದರೆ ಈಗ ಹಲವು ಪುಸ್ತಕಗಳು ಹಾಳಾಗಿವೆ’ ಎಂದು ಕೃಷ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

‘ಇತ್ತೀಚಿನ ದಿನಗಳಲ್ಲಿ ಪ್ರಕಾಶಕರು ಮರುಬಳಕೆಯ ಕಾಗದವನ್ನು ಬಳಸುತ್ತಿರುವುದರಿಂದ ಗುಣಮಟ್ಟ ಕಡಿಮೆ ಇರುತ್ತದೆ. ಹೀಗಾಗಿ ಹೆಚ್ಚಿನ ಪುಸ್ತಕಗಳು ನೀರಿನಲ್ಲಿ ನೆನೆದರೆ ತಡೆಯುವುದಿಲ್ಲ. ಅದರಲ್ಲೂ ಆಸ್ಟೆರಿಕ್ಸ್ ಮತ್ತು ಒಬೆಲಿಕ್ಸ್ನಂತಹ ಕಾಮಿಕ್ಸ್ ಪುಸ್ತಕಗಳು ಆಯಿಲ್ ಪೇಪರ್ನಿಂದ ತಯಾರಾಗಿರುವುದರಿಂದ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದ್ದಾರೆ.

ಶೇ. 30 ರಷ್ಟು ಪುಸ್ತಕಗಳನ್ನು ಬಿಸಿಲಿನಲ್ಲಿ ಒಣಗಿಸುವ ಮೂಲಕ ಉಳಿಸಿಕೊಳ್ಳಬಹುದು. ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸಾಧ್ಯತೆಯಿದೆ.

ಸದ್ಯಕ್ಕೆ ನಷ್ಟದ ಪ್ರಮಾಣವನ್ನು ನಿಖರವಾಗಿ ಹೇಳಲಾಗದಿದ್ದರೂ, ಸುಮಾರು ₹14 ಲಕ್ಷ ಎಂದು ಅಂದಾಜಿಸಲಾಗಿದೆ.

ಆಲಿಕಲ್ಲು ಮಳೆ:

ಬೆಂಗಳೂರು ನಗರದಲ್ಲಿ ಇತ್ತೀಚಿನ ದಶಕಗಳಲ್ಲಿ ಕಾಣದಷ್ಟು ಪ್ರಮಾಣದಲ್ಲಿ ಆಲಿಕಲ್ಲು ಸುರಿಯಿತು. ರಸ್ತೆಯ ಬದಿಯಲ್ಲಿ ಮಳೆ ನೀರಿನೊಂದಿಗೆ ಆಲಿಕಲ್ಲುಗಳು ತೇಲುತ್ತಿದ್ದವು. ರಸ್ತೆ, ಪಾದಚಾರಿ ಮಾರ್ಗದಲ್ಲಿ ಬೆಳ್ಳನೆಯ ಹೊದಿಕೆ ಸೃಷ್ಟಿಯಾಗಿತ್ತು. ವಿಧಾನಸೌಧ, ವಿಕಾಸ ಸೌಧ, ಲೋಕಭವನ, ಕಲ್ಯಾಣ ಮಂಪಟಗಳ ಬೃಹತ್ ಆವರಣಗಳಲ್ಲಿ ಆಲಿಕಲ್ಲುಗಳ ರಾಶಿ ರಾಶಿ ಬಿದ್ದಿತ್ತು.

ರಾಶಿ ರಾಶಿ ಆಲಿಕಲ್ಲು ಬಿದ್ದಿದ್ದರಿಂದ ಚರಂಡಿಗಳು ಬಂದ್ ಆಗಿದ್ದು, ನೀರು ಹರಿಯದೇ ರಸ್ತೆಗಳೆಲ್ಲಾ ಜಲಾವೃತಗೊಂಡವು. ಮಹಾತ್ಮಗಾಂಧಿ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಿಗೆ ಮಳೆ ನೀರು ನುಗ್ಗಿ, ಸಾಮಗ್ರಿಗಳಿಗೆ ಹಾನಿಯಾಯಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಮೆಟ್ರೊ ನಿಲ್ದಾಣಕ್ಕೆ ಹೋಗಲು ಹಾಗೂ ಅಲ್ಲಿಂದ ಹೊರಬರಲು ಪ್ರಯಾಣಿಕರು ಪ್ರಯಾಸಪಟ್ಟರು.

750 ಮನೆಗಳಿಗೆ ನೀರು

ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಹಾಗೂ ಕೊಳೆಗೇರಿಗಳಲ್ಲಿರುವ ಸುಮಾರು 750 ಮನೆಗಳಿಗೆ ನೀರು ನುಗ್ಗಿದೆ.

‘ಬಂಗಿ ಕಾಲೊನಿಯಲ್ಲಿ ಸುಮಾರು 180 ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಎಲ್ಲ ಸಾಮಗ್ರಿಗಳು ಹಾಳಾಗಿವೆ. ಅಧಿಕಾರಿಗಳಿಂದ ಯಾವುದೇ ನೆರವು ಸಿಕ್ಕಿಲ್ಲ. ಗುರುವಾರ ಬೆಳಿಗ್ಗೆ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಿದ್ದೇವೆ’ ಎಂದು ಸ್ಥಳೀಯ ನಿವಾಸಿ ರಾಣಿ ತಿಳಿಸಿದರು.

ವಿನೋಬಾ ನಗರದಲ್ಲಿರುವ 300 ಮನೆಗಳಿಗೆ ಹಾಗೂ ಮೈಸೂರು ರಸ್ತೆಯ ಸಮೀಪವಿರುವ ನರಸಿಂಹ ಕಾಲೊನಿಯ 130 ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ವಯಂಸೇವಕರು ಹೇಳಿದರು.

ಧರೆಗುರುಳಿದ 170 ಮರ

ನಗರದಲ್ಲಿ ಭಾರಿ ಮಳೆಯೊಂದಿಗೆ ಬಿರುಗಾಳಿಯೂ ಬೀಸಿದ್ದರಿಂದ ಸುಮಾರು 170 ಮರಗಳು ಧರೆಗುರುಳಿವೆ. 408ಕ್ಕೂ ಹೆಚ್ಚು ಮರಗಳ ರೆಂಬೆ–ಕೊಂಬೆಗಳು ಬಿದ್ದಿವೆ. ಇದರಿಂದ ಹಲವು ವಸತಿ ಬಡಾವಣೆಗಳೂ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನಾಗರಿಕರು ಹಾಗೂ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ಜಯನಗರ, ಚಿಕ್ಕಪೇಟೆ, ಗಾಂಧಿನಗರ, ಶಿವಾಜಿನಗರ, ಮಹಾಲಕ್ಷ್ಮಿ ಲೇಔಟ್, ಶಾಂತಿನಗರ, ಸಿ.ವಿ. ರಾಮನ್ ನಗರ ವ್ಯಾಪ್ತಿಯಲ್ಲಿ ಅತಿಹೆಚ್ಚು ಮರಗಳು ಧರೆಗುರುಳಿವೆ.

ಸಂಚಾರ ದಟ್ಟಣೆ:

ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ಹಾಗೂ ಮರಗಳು ಬಿದ್ದಿದ್ದರಿಂದ ನಗರದ ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಬುಧವಾರ ಮಧ್ಯರಾತ್ರಿಯವರೆಗೂ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು.

ಕಾಂಪೌಂಡ್ ಕುಸಿದು 7 ಮಂದಿ ಸಾವು

ಶಿವಾಜಿನಗರ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಾಲಕಿ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಎಂ.ಆರ್ ಪಾಳ್ಯದ ಬಟ್ಟೆ ವ್ಯಾಪಾರಿ ಮೊಹಮ್ಮದ್ ಅಬ್ದುಲ್ ಹಕ್ (52), ಡಿ.ಜೆ. ಹಳ್ಳಿಯ ಪಾದರಕ್ಷೆ ವ್ಯಾಪಾರಿ ಫಯಾಜ್ ಅಹ್ಮದ್ (39), ಕೆ.ಜಿ ಹಳ್ಳಿ, ವಿದ್ಯಾರ್ಥಿನಿ ಮುಸಾವೀರ್ ಬೇಗಂ (6), ಕೇರಳದಿಂದ ಪ್ರವಾಸಕ್ಕೆ ಬಂದಿದ್ದ ಸ್ಮಿತಾ (47) ಮತ್ತು ಕೆ.ಕೆ.ಲತಾ (57), ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36), ಅಸ್ಸಾಂನ ಕೆಲಸಗಾರ ನಸೀಮುಲ್ಲಾ (19) ಮೃತಪಟ್ಟವರು.

ದಾಖಲೆ ಮಳೆ

ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ 11 ಸೆಂ.ಮೀ ಮಳೆಯಾಗಿದ್ದು, ಏಪ್ರಿಲ್ನಲ್ಲಿ ಇದು ಹೊಸ ದಾಖಲೆಯಾಗಿದೆ. 2001ರ ಏಪ್ರಿಲ್ 19ರಂದು 10.8 ಸೆಂ.ಮೀ ಮಳೆ ಸುರಿದ್ದು ಈವರೆಗಿನ ಏಪ್ರಿಲ್ನಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.