ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನೆರೆ: ಬೆಲೆ ಬಾಳುವ ವಸ್ತುಗಳು ಗುಜರಿಗೆ

ಮನೆಗಳಿಗೆ ಮರಳುತ್ತಿರುವ ನಿವಾಸಿಗಳು l ರಿಪೇರಿಯೇ ದೊಡ್ಡ ಸವಾಲು
Last Updated 10 ಸೆಪ್ಟೆಂಬರ್ 2022, 19:28 IST
ಅಕ್ಷರ ಗಾತ್ರ

ಬೆಂಗಳೂರು: ಮಹದೇವಪುರ ವ್ಯಾಪ್ತಿಯಲ್ಲಿ ಮನೆಗಳಿಗೆ ನುಗ್ಗಿದ್ದ ನೀರು ಈಗ ಕಡಿಮೆಯಾಗಿದ್ದು, ಮನೆಗಳನ್ನು ಸ್ವಚ್ಛಗೊಳಿಸಿ ನಿವಾಸಿಗಳು ಮರಳಿ ವಾಸಕ್ಕೆ ಅಣಿಯಾಗುತ್ತಿದ್ದಾರೆ. ಬೆಲೆಬಾಳುವ ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು ಈಗ ಗುಜರಿಗೆ ಹೋಗುತ್ತಿವೆ.

ರೈನ್‌ಬೋ ಡ್ರೈವ್ ಲೇಔಟ್‌ನಲ್ಲಿ ಬಹುತೇಕ ವಿಲ್ಲಾಗಳಿಗೆ ನೀರು ತುಂಬಿತ್ತು. ಮಳೆ ಕಡಿಮೆಯಾದ ಬಳಿಕ ನೀರಿನ ಹರಿವು ಕಡಿಮೆಯಾಗಿದೆ. ಮನೆಯಲ್ಲಿನ ನೀರು ಹೊರ ಹಾಕಿಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿವಾಸಿ ಗಳು ನಿರತರಾಗಿದ್ದಾರೆ.

ನೀರಿನ ಹರಿವು ಹೆಚ್ಚಾಗಿದ್ದರಿಂದ ಏಕಾಏಕಿ ಖಾಲಿ ಮಾಡಿದ್ದ ನಿವಾಸಿಗಳು, ಈಗ ಮನೆಗೆ ಹೋಗಿ ಹಾಳಾಗಿರುವ ಪರಿಸ್ಥಿತಿ ನೋಡಿ ಕಣ್ಣೀರಿಡುತ್ತಿದ್ದಾರೆ. ಕಸ ಕಡ್ಡಿ ಎಲ್ಲವೂ ಮನೆಗೆ ತುಂಬಿಕೊಂಡಿದ್ದು, ಸ್ವಚ್ಛಗೊಳಿಸುವುದೇ ದೊಡ್ಡ ಸವಾಲಾಗಿದೆ. ನೀರಿನಲ್ಲಿ ಮುಳುಗಿದ್ದ ಪೀಠೋಪಕರಣ ಮರು ಬಳಕೆಗೆ ಯೋಗ್ಯವಾಗಿಲ್ಲ. ಲಕ್ಷಗಟ್ಟಲೆ ಹಣ ಕೊಟ್ಟು ತಂದಿದ್ದ ವಸ್ತುಗಳು ಈಗ ಗುಜರಿಗೆ ಬಿಸಾಡಬೇಕಾದ ಸ್ಥಿತಿಗೆ ಬಂದಿರುವುದು ಬೇಸರ ತರಿಸಿದೆ ಎಂದು ನಿವಾಸಿಗಳು ಅಳಲು
ತೋಡಿಕೊಳ್ಳುತ್ತಾರೆ.

‘ಮನೆಯ ಮುಂದೆ ನಿಲ್ಲಿಸಿದ್ದ ಕಾರು ಮತ್ತು ದ್ವಿಚಕ್ರ ವಾಹನಗಳೂ ಚಾಲನೆ ಮಾಡುವ ಸ್ಥಿತಿಯಲ್ಲಿ ಇಲ್ಲ. ಅವುಗಳ ರಿಪೇರಿಗೂ ಲಕ್ಷಗಟ್ಟಲೆ ಖರ್ಚಾಗುವ ಸಾಧ್ಯತೆ ಇದೆ. ವಿಮಾ ಕಂಪನಿಗಳ ಪ್ರತಿನಿಧಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಯಾರ ಬಳಿ ಕಷ್ಟ ಹೇಳಿಕೊಳ್ಳುವುದೋ ಗೊತ್ತಾಗುತ್ತಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

‘ಮನೆಗಳ ನೀರು ಹೊರಹಾಕಲು ಬಿಬಿಎಂಪಿ ಮತ್ತು ಜಲ ಮಂಡಳಿ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ರಾಸಾಯನಿಕ ಸಿಂಪರಣೆ ಮಾಡುವು ದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆಗಿರುವ ನಷ್ಟಕ್ಕೆ ಪರಿಹಾರ ಕೊಡುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ’ ಎಂದರು.

ಜೋಪಡಿಗಳಿಂದ ನೀರು ಹೊರಕ್ಕೆ

ತೂಬರಹಳ್ಳಿ, ಮುನ್ನೇಕೊಳಲು ಬಳಿ ವಲಸೆ ಕಾರ್ಮಿಕರ ಗುಡಿಸಿಲುಗಳಿಗೆ ನುಗ್ಗಿದ್ದ ನೀರನ್ನು ಕಡೆಗೂ ಬಿಬಿಎಂಪಿ ಸಿಬ್ಬಂದಿ ಹೊರ ಹಾಕಿದರು.

ಒಂದು ವಾರದಿಂದ ಗುಡಿಸಿಲುಗಳಲ್ಲೇ ಇದ್ದ ನೀರನ್ನು ಮೋಟರ್‌ಗಳ ಮೂಲಕ ರಾಜಕಾಲುವೆಗೆ ಪಂಪ್ ಮಾಡಿದರು. ಜೋಪಡಿಗಳಲ್ಲಿ ಅಳಿದುಳಿದ ವಸ್ತುಗಳನ್ನು ಕಾರ್ಮಿಕರು ಜೋಡಿಸಿ ಒಣಗಿಸುವ ಪ್ರಯತ್ನ ಮಾಡಿದರು.

‘ಕೆಲವರು ಶೀತ–ಜ್ವರದಿಂದ ಬಳಲುತ್ತಿದ್ದು, ಸೋಮವಾರ ಆರೋಗ್ಯ ತಪಾಸಣಾ ಶಿಬಿರ ನಡೆಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕಾರ್ಮಿಕರ ಊಟದ ವ್ಯವಸ್ಥೆಯನ್ನು ಸೋಮವಾರದ ತನಕ ವಿಸ್ತರಣೆ ಮಾಡಲು ಒಪ್ಪಿದ್ದಾರೆ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಮುನಿರಾಜು ತಿಳಿಸಿದರು.


ಮಹದೇವಪುರ: 145 ಕಡೆ ಪ್ರವಾಹ, ಶೀಘ್ರ ಪರಿಹಾರ ಕಾರ್ಯ

ಕೆ.ಆರ್.ಪುರ: ‘ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಕೆರೆಗಳೂ ತುಂಬಿದ್ದು, ಸುಮಾರು 145 ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ವಾರ್ಡ್‌ವಾರು ತಂಡಗಳನ್ನು ರಚಿಸಿ, ಜನರಿಗೆ ಅನುಕೂಲವಾಗುವಂತೆ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದರು.

ಮಳೆಯ ನೀರು ನಿಲ್ಲದಂತೆ ಶಾಶ್ವತ ಪರಿಹಾರ ಕಾಮಗಾರಿ ಕೈಗೊಳ್ಳುವ ಸಂಬಂಧ ಮಹದೇವಪುರ ವಿಧಾನಸಭಾ ಕ್ಷೇತ್ರದ ಮಾರತಹಳ್ಳಿಯ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್‌ಬಿ, ಆರೋಗ್ಯ, ಕಂದಾಯ ಹಾಗೂ ಇತರೆ ಅಧಿಕಾರಿಗಳೊಂದಿಗೆ ತುರ್ತು ಕ್ರಮಗಳ ಕುರಿತು ಚರ್ಚೆ ನಡೆಸಿದರು.

‘ತುರ್ತು ಪರಿಹಾರಗಳ ಪೈಕಿ ಅಪಾರ್ಟ್‌ಮೆಂಟ್‌ ಮತ್ತು ಬಡಾವಣೆಗಳಲ್ಲಿ ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವುದು, ವಿದ್ಯುತ್‌ ಪರಿವರ್ತಕ ಸರಿಪಡಿಸುವುದು, ಹೂಳು ತೆಗೆಯುವುದು, ನೀರು ನಿಂತ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವುದು, ಸೊಳ್ಳೆಗಳು ಹೆಚ್ಚಾಗದಂತೆ ಔಷಧ ಸಿಂಪಡಿಸುವುದು, ಅಗತ್ಯವಿರುವ ಕಡೆ ಆರೋಗ್ಯ ಶಿಬಿರಗಳು ಮತ್ತು ಕಾಳಜಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ‘ ಎಂದರು.

ಇದೇ ವೇಳೆ ಒತ್ತುವರಿಯಾಗಿರುವ ಕಾಲುವೆಗಳನ್ನು ಕೂಡಲೇ ತೆರವುಗೊಳಿಸಲು ಮತ್ತು ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವಲಯ ಆಯುಕ್ತ ತ್ರಿಲೋಕಚಂದ್ರ, ತಹಶೀಲ್ದಾರ್ ಅಜಿತ್ ರೈ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್‌ ಬಸವರಾಜ್ ಕಬಾಡೆ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಬಿ.ಎನ್‌.ನಟರಾಜ್, ಮಹಾದೇವಪುರ ಕಾರ್ಯಪಡೆ ಅಧ್ಯಕ್ಷ ಕ್ಲೆಮೆಂಟ್ ಜಯಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT