ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತುಹೋದ ಟಾರು | ಗುಂಡಿಗಳ ಕಾರುಬಾರು: ಅಪಘಾತಗಳ ಸಂಖ್ಯೆ ಹೆಚ್ಚಳ

ಹದಗೆಟ್ಟ ಪರ್ಯಾಯ ರಸ್ತೆ * ಚಾಲಕರು, ಪ್ರಯಾಣಿಕರ ಹಿಡಿಶಾಪ
Last Updated 4 ಡಿಸೆಂಬರ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕಿತ್ತುಹೋದ ಟಾರು. ರಸ್ತೆಯ ಬಹುತೇಕ ಕಡೆ ತಗ್ಗು– ಗುಂಡಿಗಳದ್ದೇ ಕಾರುಬಾರು. ಕುಡಿಯುವ ನೀರಿನ ಪೂರೈಕೆ ಪೈಪ್ ಅಳವಡಿಕೆಗಾಗಿ ನಡೆಯುತ್ತಿರುವ ಕಾಮಗಾರಿಯಿಂದ ರಸ್ತೆಯಲ್ಲೆಲ್ಲ ಹರಡಿರುವ ಕಲ್ಲು– ಮಣ್ಣು. ಮಳೆ ಬಂದರೆ ತಗ್ಗುಗಳಲ್ಲಿ ನೀರು ನಿಂತು ಕೆಸರುಗದ್ದೆಯಾಗಿ ಮಾರ್ಪಡುತ್ತಿರುವ ರಸ್ತೆ.

ಇದು, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆಯ ದುಸ್ಥಿತಿ. ನಿಲ್ದಾಣಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ–7ಕ್ಕೆ (ಬಳ್ಳಾರಿ ರಸ್ತೆ) ಪರ್ಯಾಯವಾಗಿ ಜನ ಬಳಕೆ ಮಾಡುತ್ತಿರುವ ರಸ್ತೆ ಭಾಗಶಃ ಹದಗೆಟ್ಟಿದೆ. ರಸ್ತೆ ದುರಸ್ತಿಗೆ ಮುಂದಾಗದ ಆಡಳಿತ ವ್ಯವಸ್ಥೆಗೆ ಚಾಲಕರು ಹಾಗೂ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ನಾಗವಾರ ಜಂಕ್ಷನ್‌ನಿಂದ ಬಾಗಲೂರು ಮಾರ್ಗವಾಗಿ ಹಾಗೂ ಹೆಣ್ಣೂರು ಬಂಡೆಯಿಂದ ಬಾಗಲೂರು ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ಹೋಗಲು ಶುಲ್ಕರಹಿತ ರಸ್ತೆಗಳಿವೆ. ಆ ಪೈಕಿ, ನಾಗವಾರ ಜಂಕ್ಷನ್‌ನಿಂದ ಬಾಗಲೂರು ಮಾರ್ಗದ ರಸ್ತೆ ಬಹುತೇಕ ಹಾಳಾಗಿದೆ.

ಮಳೆ ಸುರಿದಾಗಲೆಲ್ಲ ಈ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಗುಂಡಿಯಲ್ಲಿ ಸಂಗ್ರಹವಾಗುತ್ತಿದೆ. ಕ್ರಮೇಣ ಟಾರು ಕಿತ್ತು ಹೋಗುತ್ತಿದ್ದು, ಮಣ್ಣು ಹಾಗೂ ಕೆಸರು ಹೆಚ್ಚಾಗುತ್ತಿದೆ. ದಟ್ಟಣೆ ಇಲ್ಲದಿ
ದ್ದರೂ ವಾಹನಗಳು ಈ ರಸ್ತೆಯಲ್ಲಿ ನಿಧಾನವಾಗಿ ಚಲಿಸಬೇಕಾದ ಸ್ಥಿತಿ ಇದೆ.

ನಾಗವಾರ ಜಂಕ್ಷನ್‌ನಿಂದ ಥಣಿಸಂದ್ರದ ಮುಖ್ಯರಸ್ತೆ ಮೂಲಕ ನಿಲ್ದಾಣಕ್ಕೆ ಹೊರಟರೆ ದೊಡ್ಡ ಗಾತ್ರದ ಗುಂಡಿಗಳೇ ನಮ್ಮನ್ನು ಸ್ವಾಗತಿಸುತ್ತವೆ. ಇಲ್ಲಿ, ಚಾಲಕರು ಪ್ರಾಣಭಯದಲ್ಲಿ ವಾಹನ ಓಡಿಸುತ್ತಿದ್ದಾರೆ. ಸ್ವಲ್ಪ ಆಯತಪ್ಪಿದರೂ ವಾಹನ ಉರುಳಿ ಬೀಳುವುದು ನಿಶ್ಚಿತ.

ದ್ವಿಚಕ್ರ ವಾಹನಗಳ ಸವಾರರು ಈ ರಸ್ತೆಯಲ್ಲಿ ಆಯತಪ್ಪಿ ಬೀಳುವುದು ಸಾಮಾನ್ಯವಾಗಿಬಿಟ್ಟಿದೆ. ಅಪಘಾತಗಳೂ ಹೆಚ್ಚುತ್ತಿದೆ. ರಸ್ತೆ ಸುಧಾರಣೆ ಮಾಡುವಂತೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಎಷ್ಟೇ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ.

ಪೈಪ್‌ ಅಳವಡಿಕೆ ಕಾಮಗಾರಿ: ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯ ಮಾರ್ಗದಲ್ಲಿ ನೆಲದಡಿಯಲ್ಲಿ ಕಾವೇರಿ ಕುಡಿಯುವ ನೀರು ಪೂರೈಕೆ ಪೈಪ್ ಅಳವಡಿಕೆ ಕಾಮಗಾರಿ ಆರಂಭವಾಗಿದೆ. ಅದಕ್ಕಾಗಿ ವರ್ಷದ ಹಿಂದೆಯೇ ರಸ್ತೆಯ ಒಂದು ಬದಿಯಲ್ಲಿ ಗುಂಡಿಗ
ಳನ್ನು ತೋಡಿ ಕೆಲಸ ಆರಂಭಿಸಲಾಗಿದ್ದು, ಇದುವರೆಗೂ ಕಾಮಗಾರಿ ಮುಗಿದಿಲ್ಲ.

‘ನೆಲದಡಿ ಬಂಡೆ ಬಂತೆಂಬ ಕಾರಣಕ್ಕೆ ಹಳೆಯ ಗುತ್ತಿಗೆಗಾರ ಅರ್ಧಕ್ಕೆ ಕೆಲಸ ನಿಲ್ಲಿಸಿದ್ದ. ಈಗ ಹೊಸ ಗುತ್ತಿಗೆದಾರರ ಕಡೆಯವರು ಬಂಡೆ ಕೊರೆಯುತ್ತಿದ್ದಾರೆ. ಈ ಕೆಲಸ ಯಾವಾಗ ಮುಗಿಯುತ್ತೋ ಗೊತ್ತಾಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಸೈಮನ್ ಹೇಳಿದರು.

‘ರಸ್ತೆಯ ಒಂದು ಬದಿಯಲ್ಲಿ ಅಗೆದ ಮಣ್ಣನ್ನು ಮತ್ತೊಂದು ಬದಿ ಹಾಕಲಾಗಿದೆ. ಮಳೆ ಬಂದಾಗ ಮಣ್ಣು ಕೆಸರಾಗುತ್ತಿದೆ. ಇದರಿಂದ ವಾಹನಗಳ ಓಡಾಟಕ್ಕೆ ತೊಂದರೆ ಆಗಿ ದಟ್ಟಣೆಯೂ ಉಂಟಾಗುತ್ತಿದೆ’ ಎಂದರು.

ಸಾರಾಯಿಪಾಳ್ಯದಿಂದ ನಿರಂತರ ಲೇಔಟ್‌ವರೆಗಿನ ರಸ್ತೆಯಲ್ಲೂ ತಗ್ಗುಗಳು ಇವೆ. ರೇವಾ ಕಾಲೇಜು ಹಾಗೂ ಹಲವು ಕಂಪನಿಗಳು ಈ ರಸ್ತೆಯಲ್ಲಿದ್ದು, ವಾಹನಗಳ ಓಡಾಟವೂ ಹೆಚ್ಚಿರುತ್ತದೆ. ರಸ್ತೆ ಹಾಳಾಗಿರುವುದರಿಂದ ಮೇಲಿಂದ ಮೇಲೆ ಅಪಘಾತಗಳೂ ನಡೆಯುತ್ತಿವೆ.

‘ರಸ್ತೆ ಹಾಳಾಗಿದ್ದರಿಂದ ಚಾಲಕರು ವಾಹನಗಳನ್ನು ನಿಧಾನವಾಗಿ ಓಡಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲೇ ದುಷ್ಕರ್ಮಿಗಳು ಅಡ್ಡಗಟ್ಟುವ ಸಂಭವ ಹೆಚ್ಚು. ರಾತ್ರಿಯಂತೂ ವಾಹನ ಚಲಾಯಿಸಲು ಬಹುತೇಕ ಚಾಲಕರು ಭಯಪಡುತ್ತಿದ್ದಾರೆ’ ಎಂದು ಚಾಲಕ ಕುಣಿಗಲ್ ವೆಂಕಟೇಶ್ ಹೇಳಿದರು.

‘ರಸ್ತೆ ದುರಸ್ತಿ ಮಾಡಿದರೆ ಅಪರಾಧಗಳು ಕಡಿಮೆ ಆಗುತ್ತವೆ. ಚಾಲಕರು ನಿರ್ಭಯವಾಗಿ ಕ್ಯಾಬ್‌ ಓಡಿಸಲು ಅನುಕೂಲವಾಗುತ್ತದೆ. ಬಳ್ಳಾರಿ ರಸ್ತೆಯಲ್ಲಿ ಕಟ್ಟುವ ಶುಲ್ಕವೂ ಉಳಿದು ಚಾಲಕರ ದುಡಿಮೆ ಜಾಸ್ತಿ ಆಗುತ್ತದೆ’ ಎಂದು ಅವರು ಹೇಳಿದರು.

ಕೊತ್ತನೂರು ಬಳಿಯೂ ಹದಗೆಟ್ಟ ರಸ್ತೆ

ಹೆಣ್ಣೂರು ಬಂಡೆ ಮಾರ್ಗವಾಗಿ ನಿಲ್ದಾಣಕ್ಕೆ ಹೋಗುವ ಪರ್ಯಾಯ ರಸ್ತೆಯೂ ಹದಗೆಟ್ಟಿದೆ. ಕೊತ್ತನೂರು ಬಳಿಯ ಮುನಿಸ್ವಾಮಪ್ಪ ಬಡಾವಣೆ ಎದುರು ದೊಡ್ಡ ಗಾತ್ರದ ಗುಂಡಿಗಳು ಬಿದ್ದಿದ್ದು, ಅಲ್ಲೆಲ್ಲ ನೀರು ನಿಂತುಕೊಂಡಿದೆ. ಇಲ್ಲಿಯೂ ಅಪಘಾತಗಳು ಸಂಭವಿಸುತ್ತಿವೆ.

‘ಬಳ್ಳಾರಿ ರಸ್ತೆಯಲ್ಲಿ ಹೋದರೆ ಶುಲ್ಕ ಪಾವತಿಸಬೇಕು. ಅದನ್ನು ಉಳಿಸುವ ಉದ್ದೇಶದಿಂದ ಸಾರ್ವಜನಿಕರು ಪರ್ಯಾಯ ರಸ್ತೆ ಬಳಕೆ ಮಾಡುತ್ತಿದ್ದಾರೆ. ಈಗ ರಸ್ತೆ ಹದಗೆಟ್ಟಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಎಂ. ಶ್ರೀನಿವಾಸ್ ಆಗ್ರಹಿಸಿದರು.

‘ಹಾಳಾದ ರಸ್ತೆಯಿಂದ ಕೆಟ್ಟ ಹೆಸರು’

‘ಹೊರರಾಜ್ಯ ಹಾಗೂ ದೇಶಗಳಿಂದ ಬರುವ ಕೆಲ ಪ್ರಯಾಣಿಕರು, ಬಳ್ಳಾರಿ ರಸ್ತೆಯ ಬದಲು ಪರ್ಯಾಯ ರಸ್ತೆಯಲ್ಲಿ ನಗರದೊಳಗೆ ಹೋಗುವಂತೆ ಒತ್ತಾಯಿಸುತ್ತಾರೆ. ಅವರ ಮಾತು ಕೇಳಿ ಪರ್ಯಾಯ ರಸ್ತೆಯಲ್ಲಿ ಹೋದರೆ, ಹದಗೆಟ್ಟ ರಸ್ತೆ ಕಂಡು ಪ್ರಯಾಣಿಕರೇ ಬೈಯುತ್ತಾರೆ’ ಎಂದು ಚಾಲಕ ಲಿಂಗರಾಜು ಹೇಳಿದರು.

‘ನಗರಕ್ಕೆ ಬರುವವರೆಲ್ಲರೂ ಮೊದಲಿಗೆ ರಸ್ತೆ ನೋಡುತ್ತಾರೆ. ರಸ್ತೆ ಹಾಳಾಗಿರುವುದರಿಂದ ನಗರಕ್ಕೆ ಕೆಟ್ಟು ಹೆಸರು ಬರುತ್ತಿದೆ. ಇಲ್ಲಿಯ ಸರ್ಕಾರ ಏನು ಮಾಡುತ್ತದೆ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

***

ಬಿಸಿಲು ಇದ್ದಾಗ ರಸ್ತೆಯಲ್ಲೆಲ್ಲ ಧೂಳು ಏಳುತ್ತದೆ. ಇಂಥ ರಸ್ತೆಯಲ್ಲಿ ಓಡಾಡುವ ಬಹುತೇಕ ಮಕ್ಕಳು ಹಾಗೂ ವೃದ್ಧರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ

- ಶೇಖರ್, ಔಷಧಿ ಅಂಗಡಿ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT