ಶುಕ್ರವಾರ, ಡಿಸೆಂಬರ್ 13, 2019
24 °C

ಮೂಲಸೌಕರ್ಯ ಕೊರತೆ: ಪ್ರಧಾನಿಗೆ ಬೆಂಗಳೂರು ವಿದ್ಯಾರ್ಥಿನಿ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯ ಮೋದಿಜಿ,

ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೇನೆ. ಜ್ಞಾನ ಸಂಪಾದಿಸಬೇಕು ಮತ್ತು ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಗುರಿ ಇಟ್ಟುಕೊಂಡು ನಿತ್ಯ ಶಾಲೆಗೆ ಹಾಜರಾಗುತ್ತಿದ್ದೇನೆ. ಆದರೆ, ನಾನು ಶಾಲೆಗೆ ಹೋಗುವಾಗ ಎದುರಾಗುವ ಪರಿಸ್ಥಿತಿ ಹಾಗೂ ಪರಿಸರ ನೋಡಿದರೆ, ನಾನು ಕನಸು ಕಂಡ ಭವಿಷ್ಯ ನನ್ನದಾಗುವುದೇ ಎಂಬ ಪ್ರಶ್ನೆಗಳು ಮೂಡಲಾರಂಭಿಸಿವೆ. 

ರಸ್ತೆಯ ತುಂಬೆಲ್ಲ ಗುಂಡಿಗಳಿರುವುದರಿಂದ ನನ್ನ ಸ್ಕೂಲ್‌ ಬಸ್‌ ಅಲ್ಲಲ್ಲಿ ನಿಲ್ಲುತ್ತದೆ. ದೂಳು ಮತ್ತು ಹೊಗೆಯಿಂದ ತುಂಬಿರುವ ಗಾಳಿ, ರಸ್ತೆಯ ಬದಿಯಲ್ಲಿ ಕಾಣುವ ಕಸದ ರಾಶಿ, ಕಿ.ಮೀ.ಗಟ್ಟಲೇ ನಿಲ್ಲುವ ವಾಹನಗಳನ್ನು ನೋಡಿದರೆ, ‘ಈ ನನ್ನ ನಗರವನ್ನೇ ಭಾರತದ ಗಾರ್ಡನ್‌ ಸಿಟಿ ಎಂದು ಕರೆಯುವುದು’ ಎಂದು ನನ್ನನ್ನೇ ಕೇಳಿಕೊಳ್ಳುತ್ತೇನೆ. ನನ್ನ ಕೆಲವು ಗೆಳೆಯ–ಗೆಳತಿಯರು ವಾಹನಗಳ ಕರ್ಕಶ ಶಬ್ದ ಕೇಳಿ ಕಿವಿ ಮುಚ್ಚಿಕೊಂಡರೆ, ಕಲುಷಿತ ಕೆರೆಗಳಿಂದ ಬರುವ ದುರ್ವಾಸನೆ ಸಹಿಸಲಾಗದೆ ಹಲವರು ಮೂಗು ಮುಚ್ಚಿಕೊಳ್ಳುತ್ತಾರೆ. ಇಂತಹ ಭಾರತದಲ್ಲಾ ನಾನು ಬೆಳೆಯಬೇಕಾಗಿರುವುದು? ಇದು ನನ್ನ ಭವಿಷ್ಯವೇ? 

ಕಳೆದ ಅಕ್ಟೋಬರ್‌ 18ರ ಶುಕ್ರವಾರದಂದು ನಾನು ಮತ್ತು ನನ್ನ ಹಲವು ಗೆಳೆಯರು ಮಹದೇವಪುರದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಹಾಜರಾಗಿದ್ದೆವು. ಅಂದು ನಮಗೆ ತರಗತಿಯೂ ಇತ್ತು. ಶುದ್ಧ ಪರಿಸರ ಮತ್ತು ಆರೋಗ್ಯಕರ ಜೀವನಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಆ ಪ್ರತಿಭಟನೆಯಲ್ಲಿ, ನಮ್ಮ ಸಮಯ ಮತ್ತು ತರಗತಿಯನ್ನು ತ್ಯಾಗ ಮಾಡಿ ನಾವು ಭಾಗವಹಿಸಿದ್ದೆವು. ಪ್ರಗತಿಪರ, ಅತಿ ವೇಗವಾಗಿ ಬೆಳೆಯುತ್ತಿರುವಂತಹ ನಮ್ಮಂತಹ ದೇಶಗಳಲ್ಲಿ ಯುವ ವಿದ್ಯಾರ್ಥಿಯೊಬ್ಬಳು ಅತಿ ಅಗತ್ಯವಾದ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಹೀಗೆ ಬೀದಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ದುರದೃಷ್ಟಕರ.

ಆದರೆ, ಈ ವಿಷಯದಲ್ಲಿ ನನ್ನ ಶಾಲೆ ಮತ್ತು ಶಿಕ್ಷಕರನ್ನು ನಾನು ಪ್ರಶಂಸಿಸುತ್ತೇನೆ. ಮಾಲಿನ್ಯದಿಂದ ವಿದ್ಯಾರ್ಥಿಗಳ ಮೇಲೆ ಮತ್ತು ನಮ್ಮ ಶಿಕ್ಷಣದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಅವರಿಗೆ ಸಾಕಷ್ಟು ಅರಿವು ಮತ್ತು ಕಾಳಜಿ ಇದೆ. ಸರ್ಕಾರಕ್ಕೂ ಇಂತಹ ಕಾಳಜಿ ಬರಬೇಕು ಎಂದು ನಾನು ಬಯಸುತ್ತೇನೆ. 

ಮಿತಿಮೀರಿದ ನಗರೀಕರಣ ಮತ್ತು ಕೈಗಾರಿಕೀಕರಣದಿಂದ ನಮ್ಮ ಪರಿಸರದ ಮೇಲೆ ಸಾಕಷ್ಟು ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕಾನೂನು ರೂಪಿಸುತ್ತದೆ ಎಂದು ನಾವು, ಅಂದರೆ ವಿದ್ಯಾರ್ಥಿಗಳು ನಂಬಿದ್ದೇವೆ. 

ವಿಧೇಯತೆಯಿಂದ, 

ಕಿಯಾರ ಜಾಕೋಬ್‌, ಇನ್ವೆಂಚರ್‌ ಅಕಾಡೆಮಿ ಶಾಲೆ, ಬೆಂಗಳೂರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು