ಬೆಂಗಳೂರು: ಬೆಂಗಳೂರು ಉಪ ನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಬೆಂಗಳೂರಿನ ಸುತ್ತಮುತ್ತಲಿನ ನಗರಗಳಿಗೂ ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಕೆ–ರೈಡ್ ಕೋರಿದ್ದ ಮೊದಲ ಪತ್ರವನ್ನು ವಾಪಸ್ ಕಳುಹಿಸಿದ್ದ ನೈರುತ್ಯ ರೈಲ್ವೆ, ಎರಡನೇ ಪತ್ರಕ್ಕೂ ಸ್ಪಂದಿಸಿಲ್ಲ.
ಸುತ್ತಲಿನ ಉಪ ನಗರಗಳಾದ ಕೋಲಾರ, ತುಮಕೂರು, ಮಾಗಡಿ, ಮೈಸೂರು, ಬಂಗಾರಪೇಟೆ, ಹೊಸೂರು, ಗೌರಿಬಿದನೂರಿಗೆ ಉಪ ನಗರ ರೈಲು ವಿಸ್ತರಿಸಿದರೆ ಬೆಂಗಳೂರು ಮತ್ತು ಆ ಉಪ ನಗರಗಳ ಸಂಪರ್ಕ ಇನ್ನಷ್ಟು ಸುಲಲಿತವಾಗಲಿದೆ. ಪ್ರಯಾಣಿಕರು ಸುಲಭವಾಗಿ ರಾಜ್ಯದ ರಾಜಧಾನಿಗೆ ಬಂದು, ಹಿಂತಿರುಗಬಹುದು. ಅದಕ್ಕಾಗಿ ಒಟ್ಟು 452 ಕಿ.ಮೀ. ವಿಸ್ತರಣೆಯ ಕಾರ್ಯಸಾಧ್ಯತಾ ಅಧ್ಯಯನವನ್ನು ನಡೆಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ರೈಲು ಮೂಲ ಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತವು (ಕೆ- ರೈಡ್) ರೈಲ್ವೆ ಮಂಡಳಿಗೆ 2023ರ ಜುಲೈನಲ್ಲಿ ಪತ್ರ ಬರೆದು ಮನವಿ ಮಾಡಿತ್ತು.
‘ನೈರುತ್ಯ ರೈಲ್ವೆಯಿಂದ ಈಗಾಗಲೇ ಈ ಮಾರ್ಗಗಳಲ್ಲಿ ರೈಲುಗಳು ಸಂಚರಿಸುತ್ತಿದ್ದು, ಮುಂದೆ ಮೂಲಸೌಕರ್ಯ ಮತ್ತು ರೈಲುಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲಾಗುವುದು. ಜೊತೆಗೆ ವೃತ್ತ ರೈಲು ನಿರ್ಮಾಣ ಯೋಜನೆ ಕೂಡ ಇದೆ. ಹಾಗಾಗಿ ಕೆ–ರೈಡ್ ಕಾರ್ಯಸಾಧ್ಯತಾ ಅಧ್ಯಯನ ನಡೆಸುವ ಅಗತ್ಯ ಕಾಣುತ್ತಿಲ್ಲ’ ಎಂದು ಸ್ಪಷ್ಟನೆ ನೀಡಿ ಕೆ–ರೈಡ್‌ನ ಪ್ರಸ್ತಾವವನ್ನು ನಿರಾಕರಿಸಿತ್ತು.
ನೈರುತ್ಯ ರೈಲ್ವೆ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೆ–ರೈಡ್ ಮತ್ತೆ ಪತ್ರ ಬರೆದಿತ್ತು. ಸುತ್ತಲಿನ ನಗರಗಳಿಗೆ ಉಪನಗರ ಯೋಜನೆ ವಿಸ್ತರಿಸಿದಾಗ ಪ್ರತಿ ಊರಿನಲ್ಲಿ ನಿಲ್ದಾಣಗಳಿರುತ್ತವೆ. ಪ್ರತಿ 2–3 ಕಿ.ಮೀ. ದೂರದಲ್ಲಿ ಒಂದು ನಿಲ್ದಾಣ ಇರಲಿರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತದೆ. ಈಗಿರುವ ರೈಲು ಯೋಜನೆಗಳಿಗಿಂತ ಇದು ಭಿನ್ನ ಯೋಜನೆಯಾಗಿದ್ದು, ಜನದಟ್ಟಣೆಯನ್ನು ಕಡಿಮೆ ಮಾಡಲಿದೆ. ರೈಲ್ವೆ ಮಂಡಳಿಯ ಪ್ರಸ್ತಾವಿತ ಯೋಜನೆಯಾದ ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ವೃತ್ತ ರೈಲು ಸಂಪರ್ಕ ಜಾಲದ ಮೂಲಕವೇ ಬಿಎಸ್‌ಆರ್‌ಪಿ ಪ್ರಸ್ತಾವಿತ ಯೋಜನೆ ಹಾದು ಹೋಗುವುದರಿಂದ ಇನ್ನಷ್ಟು ಅನುಕೂಲವಾಗಲಿದೆ ಎಂದು ಮರು ಪತ್ರದಲ್ಲಿ ವಿವರ ನೀಡಲಾಗಿತ್ತು.
‘ಮರು ಪತ್ರ ಬರೆದು ಐದು ತಿಂಗಳು ಕಳೆದರೂ ನೈರುತ್ಯ ರೈಲ್ವೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯ ಸರ್ಕಾರದ ಸೂಚನೆಯಂತೆ ನಾವು ಕೋರಿಕೆಯನ್ನು ಸಲ್ಲಿಸಿದ್ದೆವು. ನೈರುತ್ಯ ರೈಲ್ವೆ ಮೂಲಕ ರೈಲ್ವೆ ಮಂಡಳಿಗೆ ಈ ಪ್ರಸ್ತಾವವನ್ನು ಕಳುಹಿಸಬೇಕು. ಅವರು ಕಳುಹಿಸಿದ್ದರೆ ಸಾಕಿತ್ತು. ರೈಲ್ವೆ ಮಂಡಳಿಯಲ್ಲಿ ಚರ್ಚೆಯಾಗಿ ನಿರ್ಧಾರವಾಗುತ್ತಿತ್ತು. ಮೊದಲ ಪ್ರಸ್ತಾವವನ್ನು ತಿರಸ್ಕರಿಸಿರುವ ನೈರುತ್ಯ ರೈಲ್ವೆ ಅಧಿಕಾರಿಗಳು, ಮರು ಪರಿಶೀಲಿಸಲು ಕೋರಿದ್ದ ಪತ್ರಕ್ಕೆ ಉತ್ತರವನ್ನೇ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.