ಮಂಗಳವಾರ, ಜುಲೈ 5, 2022
21 °C

ರಾಜ್ಯಪಾಲರ ನಿರ್ದೇಶನಕ್ಕಾಗಿ ಕಾಯುತ್ತಿರುವೆ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ರಾಜ್ಯಪಾಲರ ನಿರ್ದೇಶನಕ್ಕಾಗಿ ಕಾಯುತ್ತಿದ್ದೇನೆ. ತಾಂತ್ರಿಕವಾಗಿ ಈಗ ನಾನು ಯಾವುದೇ ಅಧಿಕಾರ ಹೊಂದಿಲ್ಲ. ನಾನು ಏನೂ ತಪ್ಪು ಮಾಡಿಲ್ಲ. ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುತ್ತೇನೆ...’

ಹೈಕೋರ್ಟ್‌ ವಿಭಾಗೀಯ ಪೀಠ, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಕಗೊಂಡಿರುವುದನ್ನು ರದ್ದುಪಡಿಸಿರುವುದಕ್ಕೆ ಡಾ.ಕೆ.ಆರ್‌. ವೇಣುಗೋಪಾಲ್‌ ಅವರ ಪತ್ರಿಕ್ರಿಯೆ ಇದು.

‘ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇನೆ. ನ್ಯಾಯಾಲಯ ತಡೆಯಾಜ್ಞೆ ನೀಡಿದರೆ ಮುಂದುವರಿಯುತ್ತೇನೆ. ಇಲ್ಲದಿದ್ದರೆ ಇಲ್ಲ. ವಾಸ್ತವವಾಗಿ ರಾಜ್ಯಪಾಲರ ನೇಮಕಾತಿ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ, ರಾಜ್ಯಪಾಲರ ಆದೇಶಕ್ಕಾಗಿ ಕಾಯುತ್ತಿದ್ದೇನೆ. ರಾಜ್ಯಪಾಲರು ಸೂಚಿಸುವ ವ್ಯಕ್ತಿಗೆ ಅಧಿಕಾರ ಹಸ್ತಾಂತರ ಮಾಡುತ್ತೇನೆ. ರಾಜ್ಯಪಾಲರು ಸದ್ಯಕ್ಕೆ ಬೆಂಗಳೂರಿನಲ್ಲಿ ಇಲ್ಲ. ಅವರು ಬಂದ ತಕ್ಷಣ ಭೇಟಿ ಮಾಡುತ್ತೇನೆ’ ಎಂದು ತಿಳಿಸಿದರು.

‘ವಿದ್ಯಾರ್ಥಿ ದೆಸೆಯಿಂದಲೂ ಇಲ್ಲಿಯವರೆಗೆ ಸುಮಾರು 48 ವರ್ಷಗಳ ಕಾಲ ವಿಶ್ವವಿದ್ಯಾಲಯದ ಜತೆ ಸಂಬಂಧ ಹೊಂದಿದ್ದೇನೆ. ಅರ್ಹತೆ ಆಧಾರದ ಮೇಲೆ ಈ ಹುದ್ದೆಗೆ ಬಂದಿದ್ದೇನೆ. ಈ ರೀತಿಯ ಕಷ್ಟಗಳನ್ನು ಜೀವನದಲ್ಲಿ ಹಲವು ಬಾರಿ ಎದುರಿಸಿದ್ದೇನೆ. ಕಷ್ಟಗಳು ಬಂದಾಗ ಒಳ್ಳೆಯ ವ್ಯಕ್ತಿಗಳೇ ನನಗೆ ಬೆಂಬಲ ನೀಡಿದ್ದಾರೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ತೊಂದರೆ ಕೊಟ್ಟವರಿಗೂ ಒಳ್ಳೆಯದನ್ನೇ ಮಾಡಿದ್ದೇನೆ. ಪ್ರತಿಯೊಂದು ಹುದ್ದೆಯಲ್ಲಿದ್ದಾಗಲೂ ಸಂಕಷ್ಟಗಳು ಬಂದಿವೆ. ವಿವಿಧ ಹುದ್ದೆಗಳನ್ನು ನಿರ್ವಹಿಸಿದಾಗ ಹಲವು ಬಾರಿ ಅಮಾನತುಗೊಳಿಸಲಾಗಿದೆ. ಇಂತಹ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ’ ಎಂದರು.

‘ಹೈಕೋರ್ಟ್‌ ಆದೇಶದ ಬಳಿಕ ನಾನು ಯಾವುದೇ ಕಡತಕ್ಕೆ ಸಹಿ ಮಾಡಿಲ್ಲ.  40 ವರ್ಷಗಳಿಂದ ನಾನು ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಮುಂದೆಯೂ ಉಲ್ಲಂಘಿಸುವುದಿಲ್ಲ. ನಾನು ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ್ದೇನೆ’ ಎಂದು ತಿಳಿಸಿದರು.

ತಕ್ಷಣವೇ ಅಧಿಕಾರ ತ್ಯಜಿಸಲಿ: ಸಿಂಡಿಕೇಟ್‌ ಸದಸ್ಯರ ಆಗ್ರಹ
‘ಕುಲಪತಿ ಹುದ್ದೆಯಿಂದ ಡಾ.ಕೆ.ಆರ್‌. ವೇಣುಗೋಪಾಲ್‌ ತಕ್ಷಣವೇ ಅಧಿಕಾರ ತ್ಯಜಿಸಬೇಕು. ಇವರೇ ಅಧಿಕಾರದಲ್ಲಿ ಮುಂದುವರಿದರೆ ಸಂಪೂರ್ಣ ಆಡಳಿತ ಸ್ಥಗಿತವಾಗುತ್ತದೆ’ ಎಂದು ಸಿಂಡಿಕೇಟ್‌ ಸದಸ್ಯ ಡಾ.ಎಚ್. ಸುಧಾಕರ್‌ ಒತ್ತಾಯಿಸಿದ್ದಾರೆ.

‘ನೇಮಕಾತಿಯನ್ನೇ ನ್ಯಾಯಾಲಯ ರದ್ದುಪಡಿಸಿರುವಾಗ ರಾಜ್ಯಪಾಲರ ನಿರ್ದೇಶನಕ್ಕಾಗಿ ಕಾಯುವ ಅಗತ್ಯ ಇಲ್ಲ. ಇವರೇಕೆ ಅಲ್ಲಿ ಮುಂದುವರಿಯಬೇಕು. ನ್ಯಾಯಾಲಯದ ಆದೇಶವನ್ನೇ ಧಿಕ್ಕರಿಸಿದಂತೆ ಆಗುವುದಿಲ್ಲವೇ? ಎಲ್ಲರಿಗೂ ಮಾದರಿಯಾಗಬೇಕಾದವರು ಕಾನೂನು ಪಾಲಿಸದಿದ್ದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

‘ನೈತಿಕತೆ ಮತ್ತು ಕಾನೂನಾತ್ಮಕ ದೃಷ್ಟಿಯಿಂದಲೂ ವೇಣುಗೋಪಾಲ್‌ ಅವರು ಕುಲಪತಿ ಹುದ್ದೆಯಲ್ಲಿ ಮುಂದುವರಿಯಬಾರದು. ಹೈಕೋರ್ಟ್‌ ಆದೇಶ ಬಂದ ಮೇಲೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಬಾರದಿತ್ತು. ರಜೆ ಮೇಲೆ ಹೋಗಬೇಕಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಡೀನ್‌ಗೆ ಅಧಿಕಾರ
ರಾಜ್ಯಪಾಲರು ಒಂದು ವೇಳೆ ಕುಲಪತಿ ಹುದ್ದೆ ತ್ಯಜಿಸುವಂತೆ ನಿರ್ದೇಶನ ನೀಡಿದರೆ ವಿಶ್ವವಿದ್ಯಾಲಯದ ಹಿರಿಯ ಡೀನ್‌ಗೆ ಅಧಿಕಾರ ಹಸ್ತಾಂತರಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು