ಗುರುವಾರ , ಜೂನ್ 17, 2021
21 °C
ಬೆಂಗಳೂರು ವಿ.ವಿ ಘಟಿಕೋತ್ಸವ: ಬದುಕಿನ ಅನುಭವ ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಡಾ.ಕೆ. ಶಿವನ್

ಬೆಂಗಳೂರು ವಿ.ವಿ ಘಟಿಕೋತ್ಸವ| ಇರಲಿ ಛಲ–ಸೋತರೂ ಸಿಗಲಿದೆ ದೊಡ್ಡ ಫಲ: ಡಾ.ಕೆ. ಶಿವನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜೀವನದಲ್ಲಿ ನಿರಂತರ ಪ್ರಯತ್ನ ಮಾಡುವ ಛಲ ಇರಬೇಕು. ಯಾವುದೇ ಕ್ಷೇತ್ರದಲ್ಲಿ ನಾವು ಸೋತರೂ ಅಥವಾ ಬಯಸಿದ್ದು ಸಿಗದಿದ್ದರೂ ಪ್ರಯತ್ನ ಕೈ ಬಿಡಬಾರದು. ನಾವು ಬಯಸಿದ್ದಕ್ಕಿಂತ ದೊಡ್ಡದು ನಮಗೆ ಭವಿಷ್ಯದಲ್ಲಿ ಸಿಗಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ
ಡಾ.ಕೆ. ಶಿವನ್ ಹೇಳಿದರು.


ಎಂ.ಕಾಂ ವಾಣಿಜ್ಯ ವಿಭಾಗದಲ್ಲಿ ಸಿ.ಚೈತನ್ಯ, ಬಿಬಿಎ ವಿಭಾಗದಲ್ಲಿ ಐಶ್ವರ್ಯಾ ಶ್ರೀನಿವಾಸ್ ಮತ್ತು ಎಂ.ಎಸ್ಸಿ ಜೀವರಸಾಯನವಿಜ್ಞಾನ ವಿಭಾಗದಲ್ಲಿ ಶೀತಲ್ ವಿ.ರಾವ್ ತಲಾ ನಾಲ್ಕು ಚಿನ್ನದ ಪದಕ ಪಡೆದಿದ್ದು, ಪರಸ್ಪರ ಸಂತಸ ಹಂಚಿಕೊಂಡಿದ್ದು ಹೀಗೆ... ಪ್ರಜಾವಾಣಿ ಚಿತ್ರ/ ರಂಜು ಪಿ

ನಗರದಲ್ಲಿ ಶನಿವಾರ ಬೆಂಗಳೂರು ವಿಶ್ವವಿದ್ಯಾಲಯದ 55ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ‘ವಿಫಲವಾದರೂ ಪ್ರಯತ್ನ ಮುಂದು ವರಿಸಿದರೆ ಬಯಸಿದ್ದಕ್ಕಿಂತ ದೊಡ್ಡದು ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಪ್ರೌಢಶಿಕ್ಷಣದ ನಂತರ ಎಂಜಿನಿಯರಿಂಗ್ ಓದುವ ಆಸೆ ಇತ್ತು. ಆದರೆ, ಬಿ.ಎಸ್ಸಿ ಗಣಿತ ಅಭ್ಯಾಸ ಮಾಡಿದೆ. ನಂತರ, ಇಸ್ರೊ ಸೇರುವ ಹಂಬಲವಿತ್ತು. ಆದರೆ, ವಿಕ್ರಂ ಸಾರಾಭಾಯ್ ಬಾಹಾಕ್ಯಾಶ ಕೇಂದ್ರದಲ್ಲಿ ಕೆಲಸ ಮಾಡಬೇಕಾಯಿತು. ಜೀವನದ ಎಲ್ಲ ಹಂತದಲ್ಲಿ ಮೌಲ್ಯಯುತ ಪಾಠ ಕಲಿತಿದ್ದೇನೆ. ಈಗ ಇಸ್ರೊದಲ್ಲಿಯೇ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಪ್ರತಿಯೊಬ್ಬರಲ್ಲೂ ವಿಭಿನ್ನ ಆಲೋ ಚನೆಗಳು ಬರುತ್ತವೆ. ಇಂತಹ ಹುಚ್ಚು ಯೋಚನೆಗಳಿಂದಲೇ ಉನ್ನತ ಅನ್ವೇಷ ಣೆಗಳನ್ನು ಕಾಣಲು ಸಾಧ್ಯ. ಸತತ ಸೋಲು ಉನ್ನತ ಸಾಧನೆಗೆ ಅಡಿಪಾಯ ಆಗಬಹುದು. ನಮ್ಮ ಪ್ರಯತ್ನಗಳು ಯಾವಾಗಲೂ ಚಂದ್ರನಿಗೇ ಗುರಿಯಿಟ್ಟು ಹೊಡೆಯುವಂತಿರಬೇಕು. ಗುರಿ ತಪ್ಪಿ ದರೂ ಯಾವುದಾದರು ಒಂದು ನಕ್ಷತ್ರವನ್ನು ಮುಟ್ಟುತ್ತೇವೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

56,172 ವಿದ್ಯಾರ್ಥಿಗಳು ಪದವಿ ಪ್ರದಾನಕ್ಕೆ ಅರ್ಹರಾಗಿದ್ದರು. ಸಾಂಕೇತಿಕ ವಾಗಿ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಷಯ, ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್ ಪಡೆದ 196 ವಿದ್ಯಾರ್ಥಿಗಳಿಗೆ 319 ಚಿನ್ನದ ಪದಕಗಳು ಹಾಗೂ 90 ನಗದು ಬಹುಮಾನ ಹಾಗೂ ವಿವಿಧ ವಿಷಯಗಳಲ್ಲಿ 144 ಜನರಿಗೆ ಪಿ.ಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ಕುಲ ಸಚಿವರಾದ (ಆಡಳಿತ) ಕೆ.ಜ್ಯೋತಿ, ಕುಲಸಚಿವ (ಮೌಲ್ಯಮಾಪನ) ಜಿ.ಟಿ.ದೇವರಾಜ್, ವಿವಿಧ ವಿಭಾಗಗಳ ಮುಖ್ಯ ಸ್ಥರು ಸಿಂಡಿಕೇಟ್ ಸದಸ್ಯರು ಇದ್ದರು.

ಗೈರು: ಘಟಿಕೋತ್ಸವಕ್ಕೆ, ವಿಶ್ವ ವಿದ್ಯಾಲಯದ ಕುಲಾಧಿಪತಿ ರಾಜ್ಯ ಪಾಲ ವಜುಭಾಯಿ ವಾಲಾ, ಸಹ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗೈರು ಹಾಜರಾಗಿದ್ದರು.

ಖಾಸಗಿ ಸಹಭಾಗಿತ್ವದಲ್ಲಿ ಪಿಎಸ್‌ಎಲ್‌ವಿ ಉಡಾವಣೆ

‘ಬಾಹ್ಯಾಕಾಶ ವಲಯದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಕೇಂದ್ರ ಸರ್ಕಾರ ಅವಕಾಶ ಕಲ್ಪಿಸುತ್ತಿದೆ. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆಯ ಮೊದಲ ಹೆಜ್ಜೆಯಾಗಿ ನವೋದ್ಯಮ ಏಜೆನ್ಸಿಗಳೊಂದಿಗೆ ಅಭಿವೃದ್ಧಿ ಪಡಿಸಲಾಗಿರುವ ಧ್ರುವಗಾಮಿ ಉಪಗ್ರಹ ಉಡ್ಡಯನ ವಾಹನವು (ಪಿಎಸ್‌ಎಲ್‌ವಿ) ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ನಭಕ್ಕೆ ಹಾರಲಿದೆ’ ಎಂದು ಶಿವನ್‌ ಹೇಳಿದರು.

 ‘ಮಾನವಸಹಿತ ಅಂತರಿಕ್ಷಯಾನಕ್ಕೆ ಹಸಿರು ಇಂಧನ’

‘ಭಾರತ ಬಡರಾಷ್ಟ್ರವಲ್ಲ. ಇಲ್ಲಿ ಎಲ್ಲ ರೀತಿಯ ಸಂಪತ್ತು ಇದೆ. ಆಹಾರ, ಹಾಲು ಉತ್ಪನ್ನದಲ್ಲಿ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿಯೂ ವಿವಿಧ ಕ್ಷೇತ್ರಗಳಲ್ಲಿ ಭಾರತ ಇತರೆ ದೇಶಗಳಿಗಿಂತ ಮುಂಚೂಣಿಯಲ್ಲಿದೆ. ಎಲ್ಲ ರೀತಿಯಿಂದಲೂ ನಮ್ಮದು ಶ್ರೀಮಂತ ರಾಷ್ಟ್ರ’ ಎಂದು ಅವರು ಅಭಿಪ್ರಾಯಪಟ್ಟರು.

‘ಹಸಿರು ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಪ್ರವೃತ್ತರಾಗಬೇಕು. ಪರಿಸರಕ್ಕೆ ಆಗುವ ಹಾನಿಯನ್ನು ಇಂತಹ ತಂತ್ರಜ್ಞಾನವನ್ನು ಬಳಸುವ ಮೂಲಕ ಆದಷ್ಟು ಕಡಿಮೆ ಮಾಡಬೇಕು. ಕೈಗಾರಿಕೆಗಳಲ್ಲಿ ಲಿಥಿಯಂ– ಅಯಾನ್‌ ಬಳಕೆಗೆ ಇಸ್ರೊ ಹೆಚ್ಚು ಒತ್ತು ನೀಡುತ್ತಿದೆ. ಎಲೆಕ್ಟ್ರಿಕ್‌ ವಾಹನಗಳಲ್ಲಿ ಇವುಗಳನ್ನು ಹೆಚ್ಚು ಬಳಸುವುದರಿಂದ ಪರಿಸರ ಮಾಲಿನ್ಯ ಪ್ರಮಾಣ ಸಾಕಷ್ಟು ತಗ್ಗುತ್ತದೆ. ಇಸ್ರೊ ಕೂಡ ಭವಿಷ್ಯದಲ್ಲಿ ರಾಕೆಟ್ ಹಾಗೂ ಮಾನವಸಹಿತ ಅಂತರಿಕ್ಷಯಾನದ ಕಾರ್ಯಾಚರಣೆಯಲ್ಲಿ ಹಸಿರು ಇಂಧನ ಬಳಸಲು ಕ್ರಮವಹಿಸುತ್ತಿದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು