ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ: ವಿಚಾರ ಕಲರವ ‘ಕಲಹ’

ಎಲ್ಲರಿಗೂ ಅವಕಾಶ ನೀಡದ್ದಕ್ಕೆ ಆಕ್ಷೇಪ * ಕಾರ್ಯಕ್ರಮ ಸಂಯೋಜನಾಧಿಕಾರಿ ಹುದ್ದೆಯಿಂದ ಪ್ರಾಧ್ಯಾಪಕ ಬಿಡುಗಡೆ
Last Updated 3 ಜುಲೈ 2021, 20:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ವಿಚಾರ ಕಲರವ’ ಕಾರ್ಯಕ್ರಮ ಸರಣಿಗೆ ಸಂಬಂಧಿಸಿದಂತೆ ಸಿಂಡಿಕೇಟ್‌ ಸದಸ್ಯರು ಹಾಗೂ ಕಾರ್ಯಕ್ರಮ ನಿರ್ವಹಣೆಯ ಹೊಣೆ ಹೊತ್ತಿದ್ದ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್‌) ಸಂಯೋಜನಾಧಿಕಾರಿ ಡಾ.ಎನ್. ಸತೀಶ್‌ ಗೌಡ ಅವರ ನಡುವೆ ‘ಕಲಹ’ ಏರ್ಪಟ್ಟಿದೆ.

ಈ ಕಾರ್ಯಕ್ರಮ ಸರಣಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸಂಯೋಜನಾಧಿಕಾರಿಯನ್ನು ಹುದ್ದೆಯಿಂದಲೇ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಸಿಂಡಿಕೇಟ್‌ ಸದಸ್ಯರ ಆಕ್ಷೇಪ ಇದ್ದಿದ್ದು ಈ ಸರಣಿಯ ಎಲ್ಲ ಕಾರ್ಯಕ್ರಮಗಳಿಗೂ ಕುಲಪತಿಯವರೇ ಅಧ್ಯಕ್ಷತೆ ವಹಿಸುತ್ತಾರೆ ಎಂಬ ಕುರಿತು!

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ದೇಶದ ವಿಶ್ವವಿದ್ಯಾಲಯಗಳಲ್ಲಿ ಈ ‘ವಿಚಾರ ಕಲರವ’ ಕಾರ್ಯಕ್ರಮ ನಡೆಯಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದರು. ರಾಜ್ಯ ಸರ್ಕಾರದ ಸೂಚನೆಯಂತೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ಕಾರ್ಯಕ್ರಮ ಏರ್ಪಡಿಸಲಾಗುತ್ತಿದ್ದು, ಈವರೆಗೆ 34 ಸಂಚಿಕೆಗಳು ಪೂರ್ಣಗೊಂಡಿವೆ. ಆಗಸ್ಟ್‌ 15ರ ವೇಳೆಗೆ 75ನೇ ಸಂಚಿಕೆ ನಡೆಯಲಿದೆ.

ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ಗಣ್ಯರನ್ನು ಅತಿಥಿಯಾಗಿ ಕರೆಸಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ತುಂಬಾ ಉತ್ತಮವಾಗಿ ಕಾರ್ಯಕ್ರಮ ಮೂಡಿ ಬರುತ್ತಿದೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕುಲಪತಿಯವರ ಆದೇಶದಂತೆ ಕಾರ್ಯಕ್ರಮ ನಿರ್ವಹಿಸುತ್ತಿದ್ದೆ. ನ್ಯಾಯಮೂರ್ತಿಗಳು, ಹಿರಿಯ ವಕೀಲರು, ವಿಜ್ಞಾನಿಗಳು, ಪರಿಸರ ತಜ್ಞರು ಸೇರಿದಂತೆ ದಿನಕ್ಕೆ ಒಬ್ಬರಂತೆ ಹಲವು ಗಣ್ಯರನ್ನು ಕರೆಸಿ ಭಾಷಣ ಮಾಡಿಸಲಾಗಿತ್ತು. ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿರುವ ಕುಲಪತಿಯವರು ಎಲ್ಲ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಿದ್ದರು. ಈಗ ಕುಲಪತಿಯವರ ಆದೇಶದಂತೆಯೇ, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಹುದ್ದೆಯಿಂದ ಬಿಡುಗಡೆ ಹೊಂದಿದ್ದೇನೆ’ ಎಂದು ಡಾ.ಎನ್. ಸತೀಶ್‌ ಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯಾರು ಅಧ್ಯಕ್ಷತೆ ವಹಿಸುತ್ತಾರೆ, ಯಾರು ವೇದಿಕೆ ಮೇಲಿರುತ್ತಾರೆ ಎಂಬುದಕ್ಕಿಂತ ಅತಿಥಿಗಳು ಮಂಡಿಸುವ ವಿಚಾರ ಮುಖ್ಯ. ಎಲ್ಲ ಗಣ್ಯರು ತುಂಬಾ ಉತ್ತಮವಾಗಿ ಉಪನ್ಯಾಸ ನೀಡಿದ್ದರು. ವಿದ್ಯಾರ್ಥಿಗಳೂ ಕಾರ್ಯಕ್ರಮದಿಂದ ಖುಷಿಯಾಗಿದ್ದರು. ಆದರೆ, ಇಂತಹ ಕಾರ್ಯಕ್ರಮದ ವಿಷಯದಲ್ಲಿಯೂ ವಿಶ್ವವಿದ್ಯಾಲಯವು ವಿವಾದಕ್ಕೆ ಈಡಾಗುವ ರೀತಿಯ ಬೆಳವಣಿಗೆ ನಡೆದಿದ್ದು ಶ್ರೇಯಸ್ಕರವಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ತಮಗೆ ಪ್ರಚಾರ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಿಂಡಿಕೇಟ್‌ ಸದಸ್ಯರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲರನ್ನೂ ಒಳಗೊಳ್ಳಬೇಕು:‘ಕಾರ್ಯಕ್ರಮದ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಉತ್ತಮವಾಗಿಯೇ ಮೂಡಿ ಬರುತ್ತಿದೆ. ಆದರೆ, ಬೆಂಗಳೂರು ವಿಶ್ವವಿದ್ಯಾಲಯ ಎಂದರೆ ಕುಲಪತಿ ಮತ್ತು ಸತೀಶ್‌ ಗೌಡ ಅವರು ಮಾತ್ರವಲ್ಲ. ಹಲವು ವಿಭಾಗದ ಡೀನ್‌ಗಳು, ಮುಖ್ಯಸ್ಥರು ಕುಲಪತಿ ಹುದ್ದೆಗೆ ಸಮಾನವಾದ ಸ್ಥಾನದಲ್ಲಿದ್ದಾರೆ. ಎಲ್ಲರನ್ನೂ ಒಳಗೊಂಡು ಕಾರ್ಯಕ್ರಮ ನಡೆಸಬೇಕು ಎಂಬ ಸಲಹೆ ನಮ್ಮದು’ ಎಂದು ಸಿಂಡಿಕೇಟ್‌ ಸದಸ್ಯ ಗೋಪಿನಾಥ ಹೇಳಿದರು.

‘ಈ ಮಹತ್ವದ ಕಾರ್ಯಕ್ರಮ ನಿರ್ವಹಣೆಗೆ ಒಂದು ಸಮಿತಿ ರಚಿಸಬೇಕು ಎಂದು ಸಿಂಡಿಕೇಟ್‌ ಸಭೆಯಲ್ಲಿ ಶಿಫಾರಸು ಮಾಡಲಾಗಿತ್ತು. ಅದನ್ನು ಪಾಲಿಸಲಿಲ್ಲ. ಸಿಂಡಿಕೇಟ್‌ ಸದಸ್ಯರಲ್ಲಿ ಅನೇಕರಿಗೆ ಕಾರ್ಯಕ್ರಮದ ಮಾಹಿತಿಯೇ ಇಲ್ಲ’ ಎಂದರು.

‘ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸತೀಶ್‌ ಗೌಡ ಅವರು ಇದ್ದಕ್ಕಿದ್ದಂತೆ ಆಕ್ರೋಶ ವ್ಯಕ್ತಪಡಿಸಿದರು. ಸಿಂಡಿಕೇಟ್‌ ಸದಸ್ಯರ ಬಳಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದೂ ಅವರಿಗೆ ತಿಳಿದಿಲ್ಲ’ ಎಂದು ಮತ್ತೊಬ್ಬ ಸದಸ್ಯ ಡಾ. ಸುಧಾಕರ್‌ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗೆ ಕುಲಪತಿಯವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT