ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿನಲ್ಲಿ ಮಾರಕಾಸ್ತ್ರ ಎಸೆದಿದ್ದ ಗಲಭೆಕೋರರು

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣ; ಮಹಜರು ಪ್ರಕ್ರಿಯೆ ನಡೆಸಿದ ಸಿಸಿಬಿ ಪೊಲೀಸರು
Last Updated 21 ಆಗಸ್ಟ್ 2020, 21:05 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಸಿಸಿಬಿ ‍ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕೆಲ ಗಲಭೆಕೋರರು ತಾವು ಬಳಸಿದ್ದ ಮಾರಕಾಸ್ತ್ರಗಳನ್ನು ಕಾವಲ್‌ ಭೈರಸಂದ್ರದಲ್ಲಿರುವ ಗೋದಾಮಿನಲ್ಲಿ ಎಸೆದಿದ್ದ ಮಾಹಿತಿ ಹೊರಬಿದ್ದಿದೆ.

ರಾಜಕೀಯ ಉದ್ದೇಶದಿಂದ ಗಲಭೆ ನಡೆದಿರುವ ಅನುಮಾನದಡಿ ಪೊಲೀಸರು, ಸ್ಥಳೀಯ ರಾಜಕಾರಣಿಗಳು ಹಾಗೂ ಅವರ ಜೊತೆ ಒಡನಾಟವಿಟ್ಟುಕೊಂಡಿದ್ದವರ ವಿಚಾರಣೆ ನಡೆಸುತ್ತಿದ್ದಾರೆ. ಇದರ ನಡುವೆಯೇ ಸಿಸಿಬಿ ಪೊಲೀಸರು, ಶುಕ್ರವಾರ ಕಾವಲ್‌ಭೈರಸಂದ್ರದಲ್ಲಿರುವ ಗೋದಾಮಿನಲ್ಲಿ ಕೆಲ ಆರೋಪಿಗಳ ಮಹಜರು ಪ್ರಕ್ರಿಯೆ ನಡೆಸಿದರು.

ಗೋದಾಮಿನಲ್ಲಿದ್ದ ಮಾರಕಾಸ್ತ್ರಗಳನ್ನು ಆರೋಪಿಗಳೇ ಹುಡುಕಾಡಿ ಪೊಲೀಸರಿಗೆ ಒಪ್ಪಿಸಿದರು.

ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾದ ನವೀನ್‌ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಬಳಿ ಈ ಗೋದಾಮು ಇದೆ. ಗೋದಾಮಿನಲ್ಲಿ ಮಹಜರು ನಂತರ, ನವೀನ್ ಹಾಗೂ ಶಾಸಕರ ಮನೆಗೂ ಆರೋಪಿಗಳನ್ನು ಕರೆದೊಯ್ದು ಪರಿಶೀಲನೆ ನಡೆಸಲಾಯಿತು.

ಗೋದಾಮಿನಲ್ಲಿದ್ದ ಕೆಲ ಮಾರಕಾಸ್ತ್ರ ಹಾಗೂ ಬಡಿಗೆಗಳನ್ನೂ ಪೊಲೀಸರು ಜಪ್ತಿ ಮಾಡಿದರು.

‘ನವೀನ್ ವಿರುದ್ಧ ದೂರು ನೀಡಲು ತಂಡವೊಂದು ಡಿ.ಜೆ.ಹಳ್ಳಿ ಠಾಣೆಗೆ ಹೋಗಿತ್ತು. ಅದೇ ವೇಳೆ ಕೆಲ ಆರೋಪಿಗಳು ನವೀನ್ ಹಾಗೂ ಶಾಸಕರ ಮನೆಗೆ ಹೋಗಿ ಮಾರಕಾಸ್ತ್ರ ಹಿಡಿದು ಸ್ಥಳೀಯರನ್ನು ಬೆದರಿಸಿ ಮನೆಗೆ ಬೆಂಕಿ ಹಚ್ಚಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ಕಮಿಷನರ್ ಕಚೇರಿ ಮುತ್ತಿಗೆಗೆ ಯತ್ನ
‘ಗಲಭೆ ಪ್ರಕರಣದಲ್ಲಿ ಬಂಧಿಸಲಾಗಿರುವ ಅರುಣ್‌ಕುಮಾರ್ ಮೇಲೆ ಪೊಲೀಸರು ಹಲ್ಲೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಕುಟುಂಬಸ್ಥರು, ನಗರದ ಪೊಲೀಸ್ ಕಮಿಷನರ್ ಕಚೇರಿಗೆ ಶುಕ್ರವಾರ ರಾತ್ರಿ ಮುತ್ತಿಗೆ ಹಾಕಲು ಯತ್ನಿಸಿದರು.

‘ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ತಪ್ಪೊಪ್ಪಿಕೊಳ್ಳುವಂತೆ ಅರುಣ್‌ಕುಮಾರ್‌ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಲ್ಲೆಯನ್ನೂ ಮಾಡುತ್ತಿದ್ದಾರೆ. ತನ್ನನ್ನು ಭೇಟಿಯಾಗಲು ಹೋಗಿದ್ದ ವಕೀಲರ ಬಳಿ ಅರುಣ್ ಕುಮಾರ್ ಅಳಲು ತೋಡಿಕೊಂಡಿದ್ದಾನೆ. ನಮಗೂ ಆತನನ್ನು ನೋಡಲು ಪೊಲೀಸರು ಬಿಡುತ್ತಿಲ್ಲ’ ಎಂದು ಕುಟುಂಬಸ್ಥರು ಹೇಳಿದರು.

ಮುತ್ತಿಗೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ವಿಧಾನಸೌಧ ಪೊಲೀಸರು, ಕುಟುಂಬಸ್ಥರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಈ ವೇಳೆಯೂ ಕುಟುಂಬಸ್ಥರು, ‘ನ್ಯಾಯ ಬೇಕು. ಅರುಣ್‌ ಕುಮಾರ್‌ಗೆ ರಕ್ಷಣೆ ಬೇಕು’ ಎಂದು ಘೋಷಣೆ ಕೂಗಿದರು. ಮಾತಿನ ಚಕಮಕಿಯೂ ನಡೆಯಿತು.

ಆರ್‌ಎಸ್‌ಎಸ್‌ ಪಾತ್ರ ಸಾಬೀತು ಮಾಡಿ: ನಳಿನ್‌ ಸವಾಲು
ಕೋಮುಗಲಭೆಯಲ್ಲಿ ಆರ್‌ಎಸ್‌ಎಸ್‌ ಮತ್ತು ಅದರ ಸಹ ಸಂಘಟನೆಗಳ ಪಾತ್ರ ಇದೆ ಎಂಬುದಾಗಿ ಆರೋಪ ಮಾಡಿರುವ ಸಿದ್ದರಾಮಯ್ಯ ಅದನ್ನು ಸಾಬೀತು ಮಾಡಬೇಕು, ಇಲ್ಲವಾದರೆ ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್‌ ಮತ್ತು ಸಹಸಂಘಟನೆಗಳು ಕೋಮುಗಲಭೆಯ ಸಂದರ್ಭದಲ್ಲಿ ಆಗಿರುವ ಹಾನಿ ತುಂಬಿಕೊಡಬೇಕು ಎಂಬ ಅತಿರೇಕದ ಹೇಳಿಕೆಯನ್ನು ಅವರು ನೀಡಿದ್ದಾರೆ. ಇಲ್ಲಿಯವರೆಗೆ ಯಾವುದೇ ತನಿಖಾ ಸಂಸ್ಥೆ ಅಥವಾ ವಿಚಾರಣಾ ನ್ಯಾಯಾಲಯಗಳು ದೇಶದ ಯಾವುದೇ ಭಾಗದಲ್ಲಿ ನಡೆದ ಕೋಮುಗಲಭೆಗಳಿಗೆ ಆರ್‌ಎಸ್‌ಎಸ್‌ ಮತ್ತು ಸಹ ಸಂಘಟನೆಗಳು ಕಾರಣ ಎಂದು ಹೇಳಿಲ್ಲ. ಆದರೆ, ಸಿದ್ದರಾಮಯ್ಯ ಮಾತ್ರ ಆ ರೀತಿ ಹೇಳುತ್ತಾರೆ ಎಂದಿದ್ದಾರೆ.

ಸಂಘ ಪರಿವಾರದಿಂದ ಹಾನಿ ವಸೂಲಿ ಮಾಡಬೇಕು ಎಂದು ಹೇಳುವ ಮೂಲಕ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಯಲ್ಲಿ ಗಲಭೆ ಮಾಡಿದ್ದು ಅಲ್ಪಸಂಖ್ಯಾತರೇ ಎಂದು ಒಪ್ಪಿಕೊಂಡು, ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದೂ ದೂರಿದ್ದಾರೆ.

ಸಿದ್ದರಾಮಯ್ಯ ಅವರ ಮಾತುಗಳು ಅಲ್ಪಸಂಖ್ಯಾತರನ್ನು ಓಲೈಸುವ ಅವರ ಪಕ್ಷದ ನೀತಿಯ ಮತ್ತು ಮತಬ್ಯಾಂಕ್‌ ರಾಜಕಾರಣದ ಭಾಗವಾಗಿದೆ ಎಂದು ನಳಿನ್‌ ಹೇಳಿದ್ದಾರೆ.

ಮನೆಗೆ ಬೆಂಕಿ ಹಚ್ಚಿದ್ದ ಪ್ರಮುಖ ಆರೋಪಿ ಬಂಧನ
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹಾಗೂ ನವೀನ್ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದ ಪ್ರಮುಖ ಆರೋಪಿ ಡಿ.ಜೆ.ಹಳ್ಳಿಯ ಯೂಸುಫ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ‘ಫೇಸ್‌ಬುಕ್‌ ಪೋಸ್ಟ್ ವಿಚಾರಕ್ಕಾಗಿ ಯೂಸುಫ್, ಕೆಲ ಯುವಕರ ಗುಂಪು ಸೇರಿಸಿಕೊಂಡು ನವೀನ್ ಹಾಗೂ ಶಾಸಕರ ಮನೆ ಬಳಿ ಹೋಗಿದ್ದ. ಮನೆಗೆ ಹಚ್ಚಿ ಜಾತಿ ನಿಂದನೆ ಸಹ ಮಾಡಿದ್ದ. ಈ ಸಂಬಂಧ ನವೀನ್ ಸಂಬಂಧಿಕರು ದೂರು ನೀಡಿದ್ದರು. ತಲೆಮರೆಸಿ
ಕೊಂಡಿದ್ದ ಯೂಸುಫ್ ಶುಕ್ರವಾರ ಸಿಕ್ಕಿಬಿದ್ದಿದ್ದಾನೆ’ ಎಂದೂ ಹೇಳಿದರು.

ಶಾಸಕರ ಕಾರು ತಡೆದು ಸುತ್ತುವರಿದಮಹಿಳೆಯರು
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಡಿ.ಜೆ.ಹಳ್ಳಿ ಠಾಣೆಗೆ ಶುಕ್ರವಾರ ಭೇಟಿ ನೀಡಿದರು. ಇದೇ ವೇಳೆ ಠಾಣೆ ಎದುರು ಸೇರಿದ್ದ ಆರೋಪಿಗಳ ಸಂಬಂಧಿಕರೇ ಆದ ಮಹಿಳೆಯರು ಶಾಸಕರ ಕಾರು ತಡೆದು ಸುತ್ತುವರಿದಿದ್ದರು.

‘ಗಲಭೆಗೆ ಸಂಬಂಧವಿಲ್ಲದ ಅಮಾಯಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ. ಕಣ್ಣು ಕಾಣದವರನ್ನೂ ಪೊಲೀಸರು ಮನೆಯಿಂದ ಕರೆದುಕೊಂಡು ಹೋಗಿದ್ದಾರೆ. ನಿಜವಾದ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರು ಸಿಗದ ಕಾರಣಕ್ಕೆ ಮನೆಯಲ್ಲಿರುವ ಗಂಡಸರನ್ನೆಲ್ಲ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ’ ಎಂದು ಮಹಿಳೆಯರು ದೂರಿದರು.

‘ತಾವು ಕರೆದೊಯ್ದಿದ್ದ ಮಕ್ಕಳು ಎಲ್ಲಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡುತ್ತಿಲ್ಲ. ಠಾಣೆಗೆ ಬಂದು ಕೇಳಿದರೂ ಪ್ರತಿಕ್ರಿಯಿಸುತ್ತಿಲ್ಲ’ ಎಂದು ಮಹಿಳೆಯರು ಶಾಸಕರ ಎದುರು ಅಳಲು ತೋಡಿಕೊಡರು.

ಪ್ರತಿಕ್ರಿಯಿಸಿದ ಶ್ರೀನಿವಾಸಮೂರ್ತಿ, ‘ಅಮಾಯಕರನ್ನು ಪೊಲೀಸರು ಬಂಧಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಅಮಾಯಕರು ಯಾರೇ ಇದ್ದರೂ ಪೊಲೀಸರು ವಿಚಾರಣೆ ಮಾಡಿ ವಾಪಸು ಕಳುಹಿಸಲಿದ್ದಾರೆ. ಈ ಬಗ್ಗೆ ಇನ್‌ಸ್ಪೆಕ್ಟರ್ ಹಾಗೂ ಎಸಿಪಿ ಜೊತೆ ಚರ್ಚಿಸಿದ್ದೇನೆ’ ಎಂದರು.

ಕಾರ್ಪೋರೇಟರ್ ಜಾಕೀರ್ ಹೇಳಿಕೆಯಲ್ಲಿ ಗೊಂದಲ
ಗಲಭೆ ಪ್ರಕರಣ ಸಂಬಂಧ ಕಾರ್ಪೋರೇಟರ್ ಜಾಕಿರ್ ನೀಡಿರುವ ಹೇಳಿಕೆಯಲ್ಲಿ ಸಾಕಷ್ಟು ಗೊಂದಲಗಳಿದ್ದು, ವಿವಿಧ ಆಯಾಮದಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಜೆಡಿಎಸ್ ಮುಖಂಡ ವಾಜೀದ್ ಸೇರಿ ಹಲವರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಅವರು ನೀಡಿದ್ದ ಹೇಳಿಕೆ ಆಧರಿಸಿ ಪಾಲಿಕೆ ಸದಸ್ಯರಾದ ಸಂಪತ್ ರಾಜ್ ಹಾಗೂ ಜಾಕೀರ್‌ಗೆ ಇತ್ತೀಚೆಗೆ ನೋಟಿಸ್ ನೀಡಿದ್ದರು. ಅವರಿಬ್ಬರು ವಿಚಾರಣೆಗೆ ಬಂದು ಹೇಳಿಕೆ ನೀಡಿದ್ದರು. ಜಾಕೀರ್ ಅವರ ಮೊಬೈಲ್‌ ಜಪ್ತಿ ಮಾಡಿದ್ದ ಪೊಲೀಸರು, ತಾಂತ್ರಿಕ ವಿಭಾಗದ ಸಿಬ್ಬಂದಿ ಸಹಾಯದಿಂದ ಮೊಬೈಲ್ ಕರೆ, ಸಂದೇಶಗಳ ವಿವರ ಪರಿಶೀಲಿಸುತ್ತಿದ್ದಾರೆ.

‘ರಾಜಕೀಯ ಧ್ರುವೀಕರಣಕ್ಕೆ ಕಾಂಗ್ರೆಸ್‌, ಬಿಜೆಪಿ ಯತ್ನ’
‘ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ರಾಜಕೀಯ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ದೂರಿದ್ದಾರೆ.

ಈ ಗಲಭೆಯು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆ ಆಗಿದೆ. ಇದನ್ನು ಪರಾಮರ್ಶಿಸಿ, ದುಷ್ಟರನ್ನು ಶಿಕ್ಷಿಸುವ ಕಾರ್ಯ ಆಗಬೇಕಿತ್ತು ಎಂದು ಅವರು ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ ಅವರು, ಎರಡೂ ಪಕ್ಷಗಳಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ಕಾಂಗ್ರೆಸ್‌ಗೆ ಪ್ರಶ್ನೆಗಳು
*ಡಿ.ಜೆ.ಹಳ್ಳಿ ಗಲಭೆ ಮತ್ತು ಪಾದರಾಯನಪುರ ಗಲಭೆಗಳ ಪ್ರಕರಣದಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ರಕ್ಷಕನಂತೆ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಅನ್ಯ ಕೋಮಿನ ಜನರ ಅಪರಾಧ ಪ್ರಕರಣಗಳ ಸಂದರ್ಭದಲ್ಲಿ ಎದ್ದು ನಿಲ್ಲುವ ಕಾಂಗ್ರೆಸ್‌, ಪೌರತ್ವ ತಿದ್ದುಪಡಿ ಕಾಯ್ದೆಯಂತಹ ದುರಿತ ಕಾಲದಲ್ಲಿ ಅಲ್ಪಸಂಖ್ಯಾತರ ರಕ್ಷಣೆಗೆ ಏಕೆ ನಿಲ್ಲಲಿಲ್ಲ?

* ಗಲಭೆಯಲ್ಲಿ ಆದ ನಷ್ಟವನ್ನು ಗಲಭೆಕೋರರಿಂದ ಸಂಗ್ರಹಿಸಲು ಹೊರಟ ಸರ್ಕಾರಕ್ಕೆ ‘ಇನ್ನೊಂದು ಕಡೆ’ ಯವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಾಂಗ್ರೆಸ್‌ ಹೇಳಿದೆ. ಹಾಗಾದರೆ, ಆ ‘ಇನ್ನೊಂದು ಕಡೆಯವರು’ ಎಂದರೆ ಯಾರು ಎಂಬುದನ್ನು ಕಾಂಗ್ರೆಸ್‌ ಧೈರ್ಯದಿಂದ ಹೇಳಬಹುದೇ?

*ಎಸ್‌ಡಿಪಿಐ ಅನ್ನು ನಿಷೇಧಿಸುವ ವಿಚಾರ ಬಂದಾಗ ಕಾಂಗ್ರೆಸ್‌ ಸಿಡಿದೆದ್ದು ನಿಲ್ಲುತ್ತದೆ. ತಾಕತ್ತಿದ್ದರೆ ಅದನ್ನು ನಿಷೇಧಿಸಿ ಎಂದು ಆಡಳಿತದಲ್ಲಿರುವವರಿಗೆ ಸವಾಲೆಸೆಯುತ್ತದೆ. ಅದರ ನಿಷೇಧವಾಗುವುದು, ಆಗದೇ ಇರುವುದರಲ್ಲಿ ಕಾಂಗ್ರೆಸ್‌ಗೆ ಏನು ಲಾಭವಿದೆ? ಇದರ ವಿವರಣೆ ನೀಡಬಹುದೇ?

*ಆಂತರಿಕ ಸಮಸ್ಯೆಯನ್ನು ಗಲಭೆಯಾಗಿ ಪರಿವರ್ತಿಸಿ, ಎರಡು ಕೋಮುಗಳ ನಡುವೆ ಮನಸ್ತಾಪ ತಂದಿಟ್ಟು, ಸಾಮಾಜಿಕ ಸಾಮರಸ್ಯ ಹಾಳು ಮಾಡಿದ ಬಗ್ಗೆ ಕಾಂಗ್ರೆಸ್‌ಗೆ ಅಳುಕಿದೆಯೆ?

ಬಿಜೆಪಿಗೆ ಪ್ರಶ್ನೆಗಳು
* ಡಿ.ಜೆ.ಹಳ್ಳಿ ಪ್ರಕರಣ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗೃಹ ಇಲಾಖೆ, ಗುಪ್ತಚರ ಇಲಾಖೆ ಮತ್ತು ಸರ್ಕಾರದ ಅತಿ ದೊಡ್ಡ ವೈಫಲ್ಯ. ಘಟನೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ?

* ಕಾಂಗ್ರೆಸ್‌ನ ಕೈವಾಡವಿದೆ ಎಂದು ಬೀದಿಯಲ್ಲಿ ಹೇಳುತ್ತಿರುವ ಬಿಜೆಪಿಯ ವಾಚಾಳಿ, ಬಾಯಿಬಡುಕ ಮಂತ್ರಿ, ಶಾಸಕರು ತಮ್ಮ ಬಳಿ ಇರುವ ಕಾಂಗ್ರೆಸ್‌ ವಿರುದ್ಧದ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳಿಗೆ ಏಕೆ ಕೊಡಬಾರದು?

* ಗಲಭೆ ಸೃಷ್ಟಿಸಲೆಂದೇ ಅನ್ಯ ರಾಜ್ಯಗಳಿಂದ ಗೂಂಡಾಗಳನ್ನು ಕರೆತರಲಾಗಿತ್ತು ಎಂದು ಬಿಜೆಪಿ ಆರಂಭದಲ್ಲಿ ಹುಯಿಲೆಬ್ಬಿಸಿತು. ಹಾಗಾದರೆ, ಘಟನೆಗೆ ಸಂಬಂಧಿಸಿದಂತೆ ಈವರೆಗೆ ಬಂಧನಕ್ಕೊಳಗಾದ ಅನ್ಯರಾಜ್ಯದ ಗೂಂಡಾಗಳು ಎಷ್ಟು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT