ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಾರ ವಹಿವಾಟಿಗೆ ಮೂಲಸೌಕರ್ಯದ್ದೇ ತಕರಾರು

Last Updated 17 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಳೆಯುತ್ತಿರುವ ಬೆಂಗಳೂರಿನಲ್ಲಿ ನೆಲೆಸುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಇವರಿಗೆ ಆಹಾರ, ಬಟ್ಟೆ ಸೇರಿ ದಿನಬಳಕೆ ವಸ್ತುಗಳನ್ನು ಪೂರೈಸುವ ವ್ಯಾಪಾರ– ವಹಿವಾಟು ಕೂಡ ವಿಸ್ತರಿಸಿಕೊಳ್ಳುತ್ತಿದೆ. ಆದರೆ, ಅದಕ್ಕೆ ತಕ್ಕಂತೆ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಮಾತ್ರ ಅಭಿವೃದ್ಧಿಯಾಗಿಲ್ಲ.

ರೈತರಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುವಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಪಾತ್ರ ದೊಡ್ಡದಿದೆ. ರಾಜ್ಯದಲ್ಲಿ 12,000ಕ್ಕೂ ಹೆಚ್ಚು ನೋಂದಾಯಿತ ವರ್ತಕರಿದ್ದು, ಈ ಪೈಕಿ ರಾಜ್ಯದಲ್ಲೇ ಅತಿ ದೊಡ್ಡ ಎಪಿಎಂಸಿ ಎನಿಸಿಕೊಂಡಿರುವ ಯಶವಂತಪುರದಲ್ಲೇ 2,500 ವರ್ತಕರಿದ್ದಾರೆ. ಈ ಮಾರುಕಟ್ಟೆಯಲ್ಲಿ ದಿನಕ್ಕೆ ಸರಾಸರಿ ₹ 100 ಕೋಟಿಯಷ್ಟು ವಹಿವಾಟು ನಡೆಯುತ್ತದೆ.

ಈಗಿನ ಸ್ಥಿತಿ ಏನು?: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದ ಬಳಿಕ ತೆರಿಗೆ ವಿಷಯದಲ್ಲಿ ವರ್ತಕರಿಗೆ ಕೇಂದ್ರ ಸರ್ಕಾರದೊಂದಿಗೆ ನೇರಸಂಪರ್ಕ. ಆದರೂ, ಮೂಲಸೌಕರ್ಯ ಕಲ್ಪಿಸುತ್ತಿರುವ ಕಾರಣಕ್ಕೆ ವಹಿವಾಟಿನಲ್ಲಿ ಶೇ 1.5ರಷ್ಟು ಶುಲ್ಕವನ್ನು ಎಪಿಎಂಸಿಗೆ ಪಾವತಿಸಬೇಕು. ಇದು ಅತ್ಯಂತ ದುಬಾರಿ ಎನ್ನುತ್ತಾರೆ ವರ್ತಕರು.

‘ನೆರೆಯ ಮಹಾರಾಷ್ಟ್ರದಲ್ಲಿ ಶೇ 0.80ರಷ್ಟು ಶುಲ್ಕವಿದೆ. ಕರ್ನಾಟಕದಲ್ಲಿ ಕನಿಷ್ಠ ಶೇ 1ಕ್ಕೆ ಇಳಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದೇವೆ. ಆದರೆ, ಸರ್ಕಾರ ಆಸಕ್ತಿ ವಹಿಸಲಿಲ್ಲ’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ (ಎಫ್‌ಕೆಸಿಸಿಐ) ಎಪಿಎಂಸಿ ಸಮಿತಿ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ ಹೇಳಿದರು.

‘ಕುಡಿಯಲು ನೀರಿಲ್ಲ, ಶೌಚಾಲಯ ವ್ಯವಸ್ಥೆ ಇಲ್ಲ, ವಾಹನಗಳು ಬಂದು ಹೋಗಲು ಸಂಪರ್ಕ ರಸ್ತೆಗಳಿಲ್ಲ, ದೂಳಿನ ನಡುವೆಯೇ ರೈತರು, ವರ್ತಕರು, ಕಾರ್ಮಿಕರು ನರಳುವಂತಾಗಿದೆ. ಮುಂದೆ ಬರುವ ಸರ್ಕಾರವಾದರೂ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಆಸಕ್ತಿ ವಹಿಸಬೇಕೆಂಬುದು ನಮ್ಮ ನಿರೀಕ್ಷೆ’ ಎಂದರು.

ಬಾಡಿಗೆ ಹೆಚ್ಚಳ: ‘ಯಶವಂತಪುರ ಎಪಿಎಂಸಿ ಪ್ರಾಂಗಣದಲ್ಲಿರುವ ಮಳಿಗೆಗಳ ಬಾಡಿಗೆ ಹೆಚ್ಚಿಸಲು ಸಮಿತಿ ಮುಂದಾಗಿದೆ. ಮಳಿಗೆಯೊಂದಕ್ಕೆ ತಿಂಗಳಿಗೆ ₹ 400ರಿಂದ ₹ 2,000ದ ತನಕ ಬಾಡಿಗೆ ಪಾವತಿಸಲಾಗುತ್ತಿದೆ. ಪ್ರತಿ ವರ್ಷ ಎಪಿಎಂಸಿ ಶೇ 5ರಷ್ಟನ್ನು ಹೆಚ್ಚಳ ಮಾಡುತ್ತಿತ್ತು. ಆದರೆ, ಇದೀಗ ಶೇ 200ರಿಂದ 300ರಷ್ಟು ಹೆಚ್ಚಳಕ್ಕೆ ಮುಂದಾಗಿದೆ. ₹ 2,000 ಬಾಡಿಗೆ ಪಾವತಿಸುತ್ತಿರುವ ವರ್ತಕರು, ₹ 20,000ರಿಂದ ₹ 30,000 ಪಾವತಿಸಬೇಕಾಗುತ್ತದೆ. ಈ ನಿರ್ಧಾರ ವಾಪಸ್ ಪಡೆಯಬೇಕೆಂಬ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ’ ಎಂದು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ಉದಯಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದಾಸನಪುರಕ್ಕೆ ಸ್ಥಳಾಂತರ: ‘ಯಶವಂತಪುರ ಎಪಿಎಂಸಿ ಆವರಣದಲ್ಲಿರುವ ಈರುಳ್ಳಿ ಮತ್ತು ಆಲೂಗಡ್ಡೆ ವರ್ತಕರನ್ನು, ದಾಸನಪುರದ ಬಳಿ ಹೊಸದಾಗಿ ನಿರ್ಮಿಸಿರುವ ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಆ ಮಾರುಕಟ್ಟೆಗೆ ಲಾರಿಗಳ ಸಂಚಾರಕ್ಕೆ ರಸ್ತೆ ಇಲ್ಲ, ಕುಡಿಯುವ ನೀರು, ಶೌಚಾಲಯ ಸೌಕರ್ಯವಿಲ್ಲ, ದವಸ, ಧಾನ್ಯದೊಂದಿಗೆ ಬರುವ ರೈತರಿಗೆ ರಕ್ಷಣೆ ಇಲ್ಲ. ಆದರೂ, ಬಲವಂತವಾಗಿ ಸ್ಥಳಾಂತರ ಮಾಡಿಸಲಾಗುತ್ತಿದೆ. ಸರ್ಕಾರ ಈ ನಿರ್ಧಾರ ವಾಪಸ್ ಪಡೆಯಬೇಕು’ ಎಂದೂ ಅವರು ಮನವಿ ಮಾಡಿದರು.

ಚಿಕ್ಕಪೇಟೆಯಲ್ಲಿ ಸಮಸ್ಯೆಗಳು ದೊಡ್ಡವು

ಚಿಕ್ಕಪೇಟೆ ಎಂದ ಕೂಡಲೇ ಸಾಲು ಸಾಲು ಸೀರೆ ಅಂಗಡಿಗಳು ಕಣ್ಮುಂದೆ ಬರುತ್ತವೆ. ಮದುವೆ, ಮುಂಜಿಯಂತಹ ಸಮಾರಂಭಗಳಿಗೆ ಬಟ್ಟೆ ಖರೀದಿಸಲು ಹೊರ ರಾಜ್ಯದಿಂದಲೂ ಜನ ಬಂದು ಹೋಗುತ್ತಾರೆ.

‌ಕಿರಿದಾದ ರಸ್ತೆ, ಗಲ್ಲಿಗಳಲ್ಲಿ ಪುಟ್ಟಪುಟ್ಟ ಅಂಗಡಿಗಳಿವೆ; ಅಲ್ಲಿ ಕಾಲೂರಲು ಜಾಗವಿಲ್ಲದಷ್ಟು ಜನಜಂಗುಳಿ ಇರುತ್ತದೆ.

ಆದರೆ, ಇಲ್ಲಿಗೆ ವಾಹನಗಳು ಬಂದು ಹೋಗಲು ಅವಕಾಶವೇ ಇಲ್ಲ. ಗ್ರಾಹಕರು ನಡೆದುಕೊಂಡೇ ಓಡಾಡಬೇಕು. ಸಾಮಗ್ರಿ ಖರೀದಿಸಿದರೆ ತಲೆಮೇಲೆ ಹೊತ್ತುಕೊಂಡೇ ಹೋಗುವುದು ಇಲ್ಲಿ ಅನಿವಾರ್ಯ. ಶೌಚಾಲಯಗಳ ಸುಳಿವಿಲ್ಲ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಒಮ್ಮೊಮ್ಮೆ ಒಳಚರಂಡಿ ನೀರು ರಸ್ತೆಗಳಲ್ಲೇ ಹರಿಯುತ್ತದೆ. ಈ ಎಲ್ಲ ಕಾರಣಗಳಿಂದಾಗಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ವಹಿವಾಟು ಕುಸಿಯತೊಡಗಿದೆ ಎನ್ನು
ತ್ತಾರೆ ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂಭವ್‌ಕುಮಾರ್‌ ಜೆ. ಸಂಘವಿ.

‘ಸರ್ಕಾರದಿಂದ ಸಾಲ ಸೌಲಭ್ಯವನ್ನು ನಾವು ಕೇಳುವುದಿಲ್ಲ, ಮೂಲಸೌಕರ್ಯವನ್ನಷ್ಟೇ ಕೇಳುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಜಿಎಸ್‌ಟಿ ಜಾರಿಯಾದ ಬಳಿಕ ತೆರಿಗೆ ವಿಷಯದಲ್ಲಿ ರಾಜ್ಯ ಸರ್ಕಾರದ ಜೊತೆ ಸಂಪರ್ಕವಿಲ್ಲ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ವಾಣಿಜ್ಯ ಪರವಾನಗಿ ಪಡೆಯಬೇಕಾಗಿದೆ. ಜಿಎಸ್‌ಟಿಯಲ್ಲಿ ನೋಂದಣಿ ಮಾಡಿಕೊಳ್ಳುವ ಕಾರಣ ಪಾಲಿಕೆಯಿಂದ ಪರವಾನಗಿ ಅಗತ್ಯ ಇಲ್ಲ. ಈ ಪದ್ಧತಿಯನ್ನು ಕೈಬಿಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮುಂದೆ ಬರಲಿರುವ ಸರ್ಕಾರವಾದರೂ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು’ ಎಂದು ಅವರು ಹೇಳಿದರು.

ಚಿಕ್ಕಪೇಟೆಯಲ್ಲಿರುವ ಅಂಗಡಿಗಳ ಮಾಲೀಕರೆಲ್ಲರೂ ಬಹುತೇಕ ಹೊರ ರಾಜ್ಯದವರು. ಅಂಗಡಿಗಳಲ್ಲಿ ಕೆಲಸ ಮಾಡಲು ಹೊರ ರಾಜ್ಯದವರಿಗೆ ಮನ್ನಣೆ ಇದೆ. ಕಡಿಮೆ ಸಂಬಳಕ್ಕೆ ಕನ್ನಡಿಗರನ್ನು ದುಡಿಸಿಕೊಳ್ಳುತ್ತಾರೆ. ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುವ ಸರ್ಕಾರದಿಂದ ಚಿಕ್ಕಪೇಟೆ ಕನ್ನಡಿಗ ಕೆಲಸಗಾರರಿಗೆ ಯಾವ ಪ್ರಯೋಜನವೂ ಆಗಿಲ್ಲ ಎಂದು, ಅಂಗಡಿಯೊಂದರಲ್ಲಿ ಕೆಲಸ ಮಾಡುವ ಗಂಗರಾಜು ‘‍‍ಪ್ರಜಾವಾಣಿ’ ಬಳಿ ಅಸಮಾಧಾನ ತೋಡಿಕೊಂಡರು.

ಪಕ್ಷಗಳು ಹೇಳುವುದೇನು?

ಎಲ್ಲ ಸಮಸ್ಯೆಗೆ ಪರಿಹಾರ
ವ್ಯಾಪಾರಿಗಳಿಗೆ ಬೇಕಿರುವ ಮೂಲ ಸೌಕರ್ಯ ಒದಗಿಸಲು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ದೂರದೃಷ್ಟಿಯೇ ಇಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ ವ್ಯಾಪಾರಿಗಳ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಾನೇ ಮುಂದೆ ನಿಲ್ಲುತ್ತೇನೆ.

ಟಿ.ಎ.ಶರವಣ, ವಿಧಾನ ಪರಿಷತ್‌ ಸದಸ್ಯ– ಜೆಡಿಎಸ್

ಪೂರಕ ವಾತಾವರಣ ಇಲ್ಲ

ವಾಣಿಜ್ಯ ವಹಿವಾಟು ಸಮರ್ಪಕವಾಗಿ ನಡೆಯಬೇಕೆಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಇರಬೇಕು, ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಇರಬೇಕು. ಆದರೆ, ರಾಜ್ಯದಲ್ಲಿ ಈ ಮೂರು ವ್ಯವಸ್ಥೆಯೂ ಇಲ್ಲ.

ಲಹರ್ ಸಿಂಗ್, ವಿಧಾನ ಪರಿಷತ್‌ ಸದಸ್ಯ– ಬಿಜೆಪಿ

ಹೀಗಿರಲಿ ಮಾದರಿ ನಾಯಕ

‘ಪ್ರಜ್ಞಾವಂತನಾಗಿರಬೇಕು’
ನಮ್ಮ ನಾಯಕ ಒಬ್ಬ ಸಹೃದಯಿ ಪ್ರಜ್ಞಾವಂತ, ವಿಚಾರವಂತ ಮತ್ತು ಪ್ರಾಮಾಣಿಕನಾಗಿರಬೇಕು. ಬಡವರ ಪರ ನಿಂತು ಅವರ ಭಾವನೆಗಳಿಗೆ ಸ್ಪಂದಿಸಬೇಕು. ಅಂತರರಾಜ್ಯ ನದಿ ವಿವಾದಗಳಿಗೆ ಪಕ್ಷಬೇಧವಿಲ್ಲದೆ ಜನರಪರ ನಿಲ್ಲುವಂತಹ ನಿಷ್ಠಾವಂತನಾಗಿರಬೇಕು. ವಾರಕ್ಕೆ ಒಮ್ಮೆಯಾದರೂ ತನ್ನ ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಡುವಂತವನಾಗಿರಬೇಕು. ವಿಧಾನಸಭೆ ಚರ್ಚೆಯ ಅವಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಾಡಿನ ಮತ್ತು ಕ್ಷೇತ್ರದ ಸಮಸ್ಯೆಗಳನ್ನು ವಿವರಿಸಿ ಅದಕ್ಕೆ ಸೂಕ್ತ ಪರಿಹಾರ ನೀಡುವವನಾಗಿರಬೇಕು.

ವಿ.ಸುದರ್ಶನ್, ಕಾಲಿಕೆರೆ

‘ಉದ್ಯೋಗ ಸೃಷ್ಟಿಸುವತ್ತ ಗಮನಹರಿಸಲಿ’
ನಮ್ಮ ನಾಯಕ ಉದ್ಯೋಗ ಸೃಷ್ಟಿಯತ್ತ ಹೆಚ್ಚು ಗಮನ ಹರಿಸಬೇಕು. ಪ್ರತಿ ಜಿಲ್ಲೆಯಲ್ಲಿ ರೈತ ಮಿತ್ರ ಕೇಂದ್ರಗಳನ್ನು ಸ್ಥಾಪಿಸಿ, ಪ್ರತಿಯೊಬ್ಬ ರೈತನ ಕಷ್ಟಗಳಿಗೆ ಸ್ಪಂದಿಸಬೇಕು. ಸರ್ಕಾರದ ಹೊಸ ಯೋಜನೆಗಳು ಎಲ್ಲಾ‌ ವರ್ಗಕ್ಕೂ ಲಾಭದಾಯಕವಾಗಿರಬೇಕು. ಸರ್ಕಾರಿ ಶಾಲೆಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ, ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎನ್ನುವಂತೆ ಮಾಡಬೇಕು. ಈಗಿನ ಆಧುನಿಕ ತಂತ್ರಜ್ಞಾನವನ್ನು ಬಳಸಿ ಜನರ ಕುಂದುಕೊರತೆಗಳನ್ನು ಕೆಲವೇ ದಿನಗಳಲ್ಲಿ ಬಗೆಹರಿಸುವಂತೆ ಮಾಡಬೇಕು.

ವಿ.ಆರ್‌. ನರಸಿಂಹ ಮೂರ್ತಿ, ಸುಂಕದಕಟ್ಟೆ

‘ಸರಳ ರಾಜಕಾರಣಿಯಾಗಿರಬೇಕು’
ಈಗಿನ ರಾಜಕಾರಣಿಗಳಂತೆ ಕೇವಲ ಪ್ರಸಿದ್ಧ ವ್ಯಕ್ತಿಯಾಗಿರದೆ, ಸರಳ ಜೀವನ ಶೈಲಿ ಹೊಂದಿರಬೇಕು. ತನ್ನ ಕ್ಷೇತ್ರದ ಜನತೆಯ ಅವಶ್ಯಕತೆಗಳನ್ನು ಪೂರೈಸುವ ಉದ್ಯೋಗಿಯಾಗಿರಬೇಕು. ಪ್ರಯೋಜನವಿಲ್ಲದ ಭಾಷಣಗಳನ್ನಷ್ಟೇ ಮಾಡುವ ನಾಯಕನಿಗಿಂತ ಸಾರ್ವಜನಿಕ ಕುಂದುಕೊರತೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸುವ ಪ್ರಜೆಗಳ ಧ್ವನಿಯಾಗಿರಬೇಕು.

ಆರ್.ಗೋವಿಂದರಾಜು, ಶ್ರೀನಗರ

‘ಮಾನವೀಯ ಗುಣ ಇರಬೇಕು’
ಕ್ಷೇತ್ರದ ಒಟ್ಟಾರೆ ಅಭಿವೃದ್ಧಿಯ ಯೋಜನೆಗಳನ್ನು ಸಂವಿಧಾನದ ಆಶಯದಡಿ ಅನುಷ್ಠಾನಗೊಳಿಸುವ ಛಾತಿ ಇರುವ ಗುಣಶೀಲನಾಗಿರಬೇಕು. ಸಾರ್ವಜನಿಕರ ಎದುರು ಭಾಷಣ ಮಾಡುವಾಗ ಪ್ರತಿಪಕ್ಷದವರನ್ನು ಮೂದಲಿಸಿ, ಜಾತಿ ಧರ್ಮಗಳ ಅಫೀಮನ್ನು ಉಣಿಸಬಾರದು. ಅಮಾಯಕರನ್ನು ರಂಜಿಸಿ, ಕೇಕೆ ಹೊಡಿಸಿ, ಉದ್ರೇಕಿಸಿ ಕಾಲಹರಣ ಮಾಡಬಾರದು. ಸಂವಿಧಾನ ದತ್ತವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಹಕ್ಕುಗಳು ಮತ್ತು ಅವರ ಜವಾಬ್ದಾರಿಗಳ ಬಗ್ಗೆ ತಿಳಿಸಿಕೊಡಬೇಕು.

ತಿಮ್ಮ ನಾಯಕ್ ಸಿ೦ಗಟಗೆರೆ, ವಿಜಯನಗರ

‘ಜನಸೇವಕನಾಗಿರಬೇಕು’
ನಮ್ಮ ಮಾದರಿ ನಾಯಕ ಜನಸೇವಕನಾಗಬೇಕು. ಕೇವಲ ಬೊಬ್ಬೆ ಹೊಡೆಯುವವನಾಗದೆ ಜನರ ಸಮಸ್ಯೆಗಳ ಪರಿಹಾರಕನಾಗಿರಬೇಕು. ಭ್ರಷ್ಟಾಚಾರದ ಸೋಂಕಿನ ಗಾಳಿ ಕೂಡ ಅವನ ಕಡೆ ಸುಳಿಯಬಾರದು. ಈ ದೇಹ ದೇಶಕ್ಕೆ ಹೊರತು ಸ್ವಾರ್ಥಕ್ಕಲ್ಲ ಎಂದು ನಿಷ್ಠೆಯಿಂದ ದುಡಿಯಬೇಕು. ಪ್ರಾಮಾಣಿಕವಾಗಿ ಅಧಿಕಾರ ಚಲಾಯಿಸಬೇಕು. ಎಲ್ಲೋ ಕೂತು ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ನಮ್ಮ ಮಧ್ಯೆ ನಿಂತು ಒಬ್ಬ ಸಾಮಾನ್ಯನಾಗಿ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಅವನ ಮೊದಲ ಆದ್ಯತೆ ವಸತಿ, ವಿದ್ಯುತ್, ಶಿಕ್ಷಣ, ರಕ್ಷಣೆಯಾಗಿರಬೇಕು.

ಮನು, ಜ್ಯೋತಿ ನಿವಾಸ್ ಕಾಲೇಜು, ಕೋರಮಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT