ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ವಾಸ; ‘ಬಾಂಗ್ಲಾ’ ಮಹಿಳೆ ಬಂಧನ

ಮಂಗಳೂರು ಯುವಕನ ಮದುವೆಯಾಗಿ ಸುತ್ತಾಟ
Last Updated 28 ಜನವರಿ 2022, 2:01 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ 15 ವರ್ಷಗಳಿಂದ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ರೋನಿ ಬೇಗಂ ಎಂಬಾಕೆಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.

‘ದೇಶದೊಳಗೆ ನುಸುಳಿದ್ದ ರೋನಿ, ‘ಪಾಯಲ್ ಘೋಷ್’ ಎಂಬುದಾಗಿ ಹೆಸರು ಬದಲಾಯಿಸಿಕೊಂಡಿದ್ದಳು. ತಾನೊಬ್ಬ ಹಿಂದೂ ಮಹಿಳೆ ಎಂಬುದಾಗಿ ಹೇಳಿಕೊಂಡು ಮುಂಬೈ, ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಸುತ್ತಾಡಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ರೋನಿ, ಏಜೆಂಟರೊಬ್ಬರ ಮೂಲಕ ನಕಲಿ ಚುನಾವಣಾ ಗುರುತಿನ ಚೀಟಿ, ಆಧಾರ್ ಹಾಗೂ ಇತರೆ ದಾಖಲೆ ಮಾಡಿಸಿಕೊಂಡಿದ್ದಳು. ಆರಂಭದಲ್ಲಿ ಮುಂಬೈನಲ್ಲಿ ವಾಸವಿದ್ದ ಆಕೆ, ಅಲ್ಲಿಯ ಬಾರ್‌ನಲ್ಲಿ ನೃತ್ಯಗಾರ್ತಿ ಆಗಿ ಕೆಲಸ ಮಾಡಲಾರಂಭಿಸಿದ್ದಳು.‘

‘ಕೆಲಸದ ಸ್ಥಳದಲ್ಲಿ ಆಕೆಗೆ ಮಂಗಳೂರಿನ ಯುವಕನೊಬ್ಬನ ಪರಿಚಯವಾಗಿತ್ತು. ಸ್ನೇಹ ಏರ್ಪಟ್ಟು, ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದರು. ಮದುವೆ ಮಾಡಿಕೊಳ್ಳಲು ತೀರ್ಮಾನಿಸಿದ್ದ ಇಬ್ಬರೂ 2015ರಲ್ಲಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿನಲ್ಲೇ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು‘ ಎಂದೂ ಮೂಲಗಳು ತಿಳಿಸಿವೆ.

‘ಮದುವೆ ನಂತರ ರೋನಿ, ಗಾರ್ಮೇಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಹೋಗಲಾರಂಭಿಸಿದ್ದಳು. ಆಗಾಗ ಬಾಂಗ್ಲಾದೇಶಕ್ಕೂ ಹೋಗಿ ಬರುತ್ತಿದ್ದಳು. ಕಳೆದ ವರ್ಷ ಬಾಂಗ್ಲಾದೇಶಕ್ಕೆ ಹೋಗುವಾಗ ಕೊಲ್ಕತ್ತಾದ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ಆಕೆಯನ್ನು ಪರಿಶೀಲಿಸಿದ್ದರು. ತಾನೊಬ್ಬ ಹಿಂದೂ ಮಹಿಳೆ ಎಂಬುದಾಗಿ ವಾದಿಸಿ ರೋನಿ ಅವರಿಂದ ತಪ್ಪಿಸಿಕೊಂಡಿದ್ದಳು. ಆದರೆ, ಅಧಿಕಾರಿಗಳು ದಾಖಲೆಗಳ ಪ್ರತಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು.’

‘ರೋನಿ ಬಗ್ಗೆ ಅನುಮಾನಗೊಂಡಿದ್ದ ಅಧಿಕಾರಿಗಳು, ಬೆಂಗಳೂರಿನಲ್ಲಿರುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಹಾಗೂ ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದುಕೊಂಡಿದ್ದರು. ರೋನಿ, ಬಾಂಗ್ಲಾ ಪ್ರಜೆ ಎಂಬುದು ಗೊತ್ತಾಗಿತ್ತು. ಬಳಿಕ, ರೋನಿ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕಳೆದ ವರ್ಷ ಎಫ್‌ಐಆರ್ ದಾಖಲಾಗಿತ್ತು.‘

‘ಪ್ರಕರಣ ದಾಖಲಾದ ನಂತರ ರೋನಿ ತಲೆಮರೆಸಿಕೊಂಡಿದ್ದಳು. ಮಂಗಳೂರು, ಮುಂಬೈ ಹಾಗೂ ಇತರೆ ನಗರಗಳಲ್ಲಿ ಸುತ್ತಾಡುತ್ತಿದ್ದಳು. ಆಕೆಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ವಿಳಾಸ ಪತ್ತೆ ಮಾಡಿದ್ದ ತಂಡ, ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಮೂಲಗಳು ಹೇಳಿವೆ.

ನಕಲಿ ದಾಖಲೆ ಸೃಷ್ಟಿಸಿದವರಿಗಾಗಿ ಹುಡುಕಾಟ: ‘ಬಾಂಗ್ಲಾದೇಶದ ರೋನಿ, ಭಾರತದಲ್ಲೇ ಹಣ ಕೊಟ್ಟು ನಕಲಿ ದಾಖಲೆ ಮಾಡಿಸಿಕೊಂಡಿದ್ದಳು. ಆಕೆಗೆ ದಾಖಲೆ ಸೃಷ್ಟಿಸಿಕೊಟ್ಟವರಿಗಾಗಿ ಹುಡುಕಾಟ ನಡೆದಿದೆ‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT