ಬುಧವಾರ, ಮೇ 25, 2022
22 °C

ರಾಜ್ಯದಾದ್ಯಂತ ಯೋಗ ಅಭಿಯಾನ: ಮುಖ್ಯಮಂತ್ರಿ ಬೊಮ್ಮಾಯಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್‌, ಶ್ವಾಸ ಯೋಗ ಸಂಸ್ಥೆ ಮತ್ತು ಪತಂಜಲಿ ಯೋಗ ಪೀಠದ ಸಹಯೋಗದಲ್ಲಿ ರಾಜ್ಯದಾದ್ಯಂತ ‘ಕರ್ನಾಟಕ ಯೋಗ ಅಭಿಯಾನ’ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಶ್ವಾಸ ಯೋಗ ಸಂಸ್ಥೆಯ ಸಂಸ್ಥಾಪಕರು ಮತ್ತು ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್‌ ಮಹಾಪೋಷಕರಾಗಿರುವ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಸೋಮವಾರ ಭೇಟಿಮಾಡಿ, ರಾಜ್ಯದಲ್ಲಿ ಯೋಗ ಶಿಕ್ಷಣ ಪ್ರಚುರಪಡಿಸುವ ಕುರಿತು ಚರ್ಚಿಸಿತು. ಆಗ ಬೊಮ್ಮಾಯಿ ಈ ಸಲಹೆ ನೀಡಿತು.

‘ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯೋಗ ಅಭಿಯಾನ ನಡೆಸುವಂತೆ ವಚನಾನಂದ ಸ್ವಾಮೀಜಿ ನೇತೃತ್ವದ ತಂಡಕ್ಕೆ ಸಲಹೆ ನೀಡಿದ್ದೇನೆ. ಈ ಸಂಬಂಧ ಶ್ವಾಸ ಯೋಗ ಸಂಸ್ಥೆ ಹಾಗೂ ಪತಂಜಲಿ ಯೋಗ ಪೀಠ ಜಂಟಿಯಾಗಿ ಸಲ್ಲಿಸುವ ಪ್ರಸ್ತಾವಕ್ಕೆ ಸರ್ಕಾರದಿಂದ ಅಗತ್ಯ ಸಹಕಾರ ಒದಗಿಸುವ ಭರವಸೆಯನ್ನೂ ನೀಡಿದ್ದೇನೆ’ ಎಂದು ಬೊಮ್ಮಾಯಿ ತಿಳಿಸಿದರು.

‘ಯೋಗ ಶಿಕ್ಷಣವನ್ನು ಇನ್ನಷ್ಟು ಪ್ರಚುರಪಡಿಸುವ ಹಾಗೂ ಎಲ್ಲ ವಯೋಮಾನದವರೂ ಯೋಗಾಭ್ಯಾಸವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲು ರಾಜ್ಯದಾದ್ಯಂದ ಯೋಗ ಅಭಿಯಾನ ನಡೆಸಲು ಉದ್ದೇಶಿಸಲಾಗಿದೆ. ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ರಾಷ್ಟ್ರೀಯ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌  ಪ್ರಧಾನ ಕಾರ್ಯದರ್ಶಿ ಡಾ. ಜಯದೀಪ್‌ ಆರ್ಯ, ಕರ್ನಾಟಕ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್ ಅಧ್ಯಕ್ಷ ಭವರ್‌ಲಾಲ್‌ ಆರ್ಯ ನಿಯೋಗದಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು