ಹಣಕಾಸು ಅವ್ಯವಹಾರ: ಅಕ್ರಮ ತನಿಖೆ ಹೊಣೆ ಸಿಐಡಿಗೆ?

ಬೆಂಗಳೂರು: ಬಸವನಗುಡಿಯ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಭಾರಿ ಹಣಕಾಸು ಅವ್ಯವಹಾರದ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸುವ ಸಾಧ್ಯತೆ ಇದೆ.
‘ಪ್ರಕರಣದ ತನಿಖೆಯನ್ನು ಎಸಿಬಿ ಅಥವಾ ಸಿಐಡಿ ಇವೆರಡರಲ್ಲಿ ಯಾವುದಾದರೂ ಒಂದು ಸಂಸ್ಥೆ ಯಿಂದ ನಡೆಸಬೇಕು’ ಎಂದು ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿರುವುದರಿಂದ ಸಿಐಡಿಗೆ ವಹಿಸಲು ಸರ್ಕಾರ ಆಸಕ್ತಿ ಹೊಂದಿದೆ. ಒಂದೆರಡು ದಿನದಲ್ಲಿ ಅಧಿಕೃತ ಆದೇಶ ಬರಲಿದೆ ಎಂದು ಮೂಲಗಳು ತಿಳಿಸಿವೆ.
ವಜಾಗೊಂಡ ಬ್ಯಾಂಕಿನ ಆಡಳಿತ ಮಂಡಳಿ ವಿರುದ್ಧ ಬಸವನಗುಡಿ ಠಾಣೆಯಲ್ಲಿ ದಾಖಲಾಗಿದ್ದ ದೂರು ಗಳನ್ನು ಈಗಾಗಲೇ ಸಿಐಡಿಗೆ ವರ್ಗಾಯಿಸಲಾಗಿದೆ. ನಗರ ಪೊಲೀಸ್ ಕಮಿಷನರ್ ಪಿ. ಭಾಸ್ಕರರಾವ್ ಅವರ ಶಿಫಾರಸಿನ ಮೇಲೆ ಡಿಜಿ ಮತ್ತು ಐಜಿ ಪ್ರವೀಣ್ ಸೂದ್ ಆದೇಶ ಮಾಡಿದ್ದಾರೆ. ಈ ಸಂಬಂಧ ಹೈಕೋರ್ಟ್‌ಗೂ ಪ್ರಮಾಣ ಪತ್ರ ಸಲ್ಲಿಸಲಾಗಿದೆ.
‘ಶ್ರೀ ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರ ಒಂದು ಗಂಭೀರ ಪ್ರಕರಣ. ನಮ್ಮ ಸಿಬ್ಬಂದಿ ಕೋವಿಡ್ ನಿಯಂತ್ರಿಸುವ ಹೊಣೆ ನಿರ್ವಹಿಸುತ್ತಿರುವುದರಿಂದ ತನಿಖೆ ನಡೆಸಲು ಸಮಯವಿಲ್ಲ. ಹೀಗಾಗಿ, ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.
ಇನ್ನೊಂದೆಡೆ, ಬ್ಯಾಂಕ್ ವಿರುದ್ಧ ಬಂದಿರುವ ಕೆಲವು ದೂರನ್ನು ‘ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯ ಅಡಿ (ಪಿಎಂಎಲ್‌ಎ) ದಾಖಲಿಸಿಕೊಂಡಿರುವ ಎಸಿಬಿ ಬ್ಯಾಂಕ್ ಪ್ರಧಾನ ಶಾಖೆ, ಬಸವನಗುಡಿ ಶಾಖೆ, ಹಿಂದಿನ ಅಧ್ಯಕ್ಷ ರಾಮಕೃಷ್ಣ, ಸಿಇಒ ವಾಸುದೇವ ಮಯ್ಯ ಅವರ ಮನೆಗಳೂ ಸೇರಿದಂತೆ ಐದು ಕಡೆ ದಾಳಿ ಈಚೆಗೆ ನಡೆಸಿತ್ತು. ಈ ಪ್ರಕರಣಗಳೂ ಸಿಐಡಿಗೆ ವರ್ಗಾವಣೆ ಆಗುವ ಸಂಭವವಿದೆ.
ಆಡಳಿತ ಮಂಡಳಿ ಕೈವಾಡ?: ಅವ್ಯವಹಾರದಲ್ಲಿ ವಜಾಗೊಂಡಿರುವ ಆಡಳಿತ ಮಂಡಳಿ ಕೈವಾಡವಿದ್ದು, ಅಗತ್ಯ ಭದ್ರತೆ ಪಡೆಯದೆ 27 ಮಂದಿಗೆ ₹ 921 ಕೋಟಿ ಸಾಲ ನೀಡಿರುವ ಸಂಗತಿ ಆರ್‌ಬಿಐ ಮತ್ತು ಸಹಕಾರ ಸಂಘಗಳ ರಿಜಿಸ್ಟ್ರಾರ್ ವಿಚಾರಣೆ ಹಾಗೂ ಎಸಿಬಿ ತನಿಖೆಯಿಂದ ಬಯಲಾಗಿದೆ. ಆರ್‌ಬಿಐ ಅಧಿಕಾರಿಗಳು ಕಳೆದ ವಾರ ಬ್ಯಾಂಕ್ ಹಣಕಾಸು ಸ್ಥಿತಿಗತಿ ಕುರಿತು ಪರಿಶೀಲಿಸಿದ್ದಾರೆ.
‘ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ. ರಾಮ ಕೃಷ್ಣ (₹ 78.80 ಕೋಟಿ), ಉಪಾಧ್ಯಕ್ಷರಾಗಿದ್ದ ಟಿ.ಎಸ್. ಸತ್ಯನಾರಾಯಣ್
(₹ 24.04 ಕೋಟಿ) ಮತ್ತು ಸಿಇಒ ಆಗಿದ್ದ ಮಯ್ಯ (₹8.08 ಕೋಟಿ) ಅವರಿಗೆ ಸಂಬಂಧಿಸಿದ ಸಾಲದ ಮೊತ್ತವೇ ₹ 111 ಕೋಟಿ ಇದೆ. ಮೂವರ ಮನೆಗಳ ಮೇಲಿನ ದಾಳಿ ಸಮಯದಲ್ಲಿ ಆಸ್ತಿಪಾಸ್ತಿ ಸಂಬಂಧಿಸಿದ ದಾಖಲೆಗಳು ಸಿಕ್ಕಿದೆ’ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಬಹುಕೋಟಿ ಸಾಲಗಾರರು?
ರಘುನಾಥ್ ಜಿ. (₹ 139.85 ಕೋಟಿ), ಜಸ್ವಂತ್ ರೆಡ್ಡಿ (₹ 153.50 ಕೋಟಿ), ಕುಮಾರೇಶ್ ಬಾಬು ಟಿ. (₹ 39.03 ಕೋಟಿ), ಆರಾಧ್ಯ ಟಿ.ಎಚ್. (₹ 25.78 ಕೋಟಿ), ನವೀನ್ ಡಿ.ಪಿ. (₹ 91.23 ಕೋಟಿ), ರಜತ್ ಎಂ.ಆರ್ (₹ 26.10 ಕೋಟಿ), ಶ್ರೀಶ ಎಸ್.ಪಿ (₹ 10.05 ಕೋಟಿ), ರಾಮಕೃಷ್ಣ ಬಿ.ಜಿ (₹ 46.06 ಕೋಟಿ), ರಾಜೇಶ್ ವಿ.ಆರ್ (₹ 40.40 ಕೋಟಿ), ಜಗನ್ನಾಥ್ ಹೆಗಡೆ (₹ 55.30 ಕೋಟಿ), ಶ್ರೀನಿವಾಸನ್ ಜಿ (₹ 56.56 ಕೋಟಿ), ಅಶ್ವತ್ಥನಾರಾಯಣ (₹ 12. 12 ಕೋಟಿ), ರಾಜಸಿಂಹ (₹ 6.57 ಕೋಟಿ), ಸತ್ಯನಾರಾಯಣ ಎನ್. (₹ 24.24 ಕೋಟಿ), ಎಸ್.ವಿ ರೆಡ್ಡಿ (₹ 8.08 ಕೋಟಿ), ಆದಿನಾರಾಯಣ (₹ 6.06 ಕೋಟಿ), ಹರಿಕೃಷ್ಣ (₹ 22.12ಕೋಟಿ), ಪ್ರಸನ್ನಕುಮಾರ್ ಜಿ (₹ 6.06 ಕೋಟಿ), ಸಂತೋಷ್ ವೈ.ಪಿ (₹ 6.06 ಕೋಟಿ) ಲೋಕೇಶ್ ಎನ್ (₹ 7.07 ಕೋಟಿ), ವುಡ್‌ರಿಚ್ ಫರ್ನಿಚರ್ (₹8.02 ಕೋಟಿ), ವಿಜಯ ಸಿಂಹ ಎನ್. (₹ 5 ಕೋಟಿ), ವೆಂಕಟೇಶ್ ಬಿ.ಎನ್. (₹ 5 ಕೋಟಿ) ಹಾಗೂ ಸುಯಮೀಂದ್ರ ಎಸ್.ಎನ್ (₹ 10 ಕೋಟಿ)
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.