ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಗೆ ಕಾಣದ ವಿಚಿತ್ರ

Last Updated 19 ಜೂನ್ 2018, 13:11 IST
ಅಕ್ಷರ ಗಾತ್ರ

ಶ್ರೀವಿಷ್ಣು ವಿಶ್ವಾದಿ ಮೂಲ ಮಾಯಾಲೋಲ |

ದೇವ ಸರ್ವೇಶ ಪರಬೊಮ್ಮನೆಂದು ಜನಂ ||

ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|

ಆ ವಿಚಿತ್ರಕೆ ನಮಿಸೊ ಮಂಕುತಿಮ್ಮ ||

(ಪರಬೊಮ್ಮ - ಪರಬ್ರಹ್ಮ, ಅಳ್ತಿ - ಪ್ರೀತಿ)

ಜನರು ಯಾವುದನ್ನು ಶ್ರೀವಿಷ್ಣು, ವಿಶ್ವದ ಆಧಿಮೂಲ, ತನ್ನ ಮಾಯೆಯಿಂದ ಜಗತ್ತನ್ನು ಆಡಿಸುತ್ತ ಅದರಲ್ಲೇ ತನ್ಮಯನಾಗಿ ಮಾಯಾಲೋಲನಾದವನು, ದೇವರು, ಸರ್ವಕ್ಕೂ ಹಿರಿಯನಾದ ಸರ್ವೇಶ, ಪರಬ್ರಹ್ಮ ಎಂದು ಕಣ್ಣಿಂದ ಕಾಣದೆಯೆ ಪ್ರೀತಿಯಿಂದ ನಂಬಿದ್ದಾರೋ ಅಂಥ ವಿಚಿತ್ರಕ್ಕೆ ನಮಿಸು ಎನ್ನುತ್ತಾರೆ, ಡಿ.ವಿ.ಜಿ.

ಈ ನಂಬಿಕೆಯೂ ವಿಚಿತ್ರ, ನಂಬಿಕೆಗೆ ಕಾರಣವಾದ ಆ ವಸ್ತುವೂ ವಿಚಿತ್ರ. ಇಂದಿನ ದಿನಗಳಲ್ಲಿ ಕಣ್ಣಿಗೆ ಕಂಡದ್ದನ್ನೇ ನಂಬುವುದು ಕಷ್ಟವಾಗಿದ್ದಾಗ, ಎಂದಿಗೂ, ಯಾರಿಗೂ ಕಾಣದಿದ್ದ ಒಂದು ಶಕ್ತಿಯನ್ನು ಇಷ್ಟೊಂದು ಜನ, ಇಷ್ಟೊಂದು ಕಾಲ ನಂಬಿ ಬದುಕಿದ್ದು ಆಶ್ಚರ್ಯವಲ್ಲವೇ? ಬರೀ ನಂಬುವುದು ಮಾತ್ರವಲ್ಲ, ಪ್ರೀತಿಯಿಂದ, ಶ್ರದ್ಧೆಯಿಂದ ನಂಬಿದ್ದಾರೆ.

ಈ ಪರಿಸ್ಥಿತಿಯನ್ನು ಹುಟ್ಟಿನಿಂದ ಅಂಧನಾದ ವ್ಯಕ್ತಿಯೊಂದಿಗೆ ಹೋಲಿಸಿ ನೋಡೋಣ. ಅವನು ಜಗತ್ತಿನ ರೂಪವನ್ನು, ವೈಭವವನ್ನು ಕಣ್ಣಿನಿಂದ ಕಂಡವನೇ ಅಲ್ಲ. ಹಾಗಾದರೆ ಅವನಿಗೆ ಈ ಪ್ರಪಂಚದ ಅರಿವೇ ಇಲ್ಲವೆಂದು ಹೇಳುವುದು ಸರಿಯೇ? ಇಲ್ಲ. ಅವನಿಗೆ ಜಗತ್ತಿನ ಪರಿಚಯವಿದೆ. ಆತ ತನ್ನ ಇಂದ್ರಿಯಗಳಿಂದ, ಅವುಗಳು ನೀಡುವ ಪ್ರಚೋದನೆಗಳಿಂದ, ಬುದ್ಧಿಯನ್ನು ಬಳಸಿ ಆ ಮಾಹಿತಿಯನ್ನು ಸಮನ್ವಯಗೊಳಿಸಿ ಜಗತ್ತಿನ ಒಂದು ಬಗೆಯನ್ನು ಕಲ್ಪಿಸಿಕೊಳ್ಳುತ್ತಾನೆ, ತನ್ನ ಸುತ್ತಮುತ್ತಲಿನ ಜನರನ್ನು, ವಸ್ತುಗಳನ್ನು ಹಾಗೂ ಚಟುವಟಿಕೆಗಳನ್ನು ಅರಿತುಕೊಳ್ಳುತ್ತಾನೆ.

ದೃಷ್ಟಿ ಕಣ್ಣಿನೊಳಗಿಲ್ಲ, ಅದು ಇರುವುದು ಮನದಲ್ಲಿ, ಹೃದಯದಲ್ಲಿ ಎನ್ನುತ್ತಾನೆ. ಇದನ್ನೇ ಸೂಚ್ಯವಾಗಿ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ: 'ನೀನು ನಿನ್ನ ಚರ್ಮಚಕ್ಷುಗಳಿಂದ ನನ್ನ ವಿರಾಟ್ ರೂಪವನ್ನು ನೋಡಲಾರೆ; ಅದಕ್ಕೆ ನಿನಗೆ ಜ್ಞಾನದ ಕಣ್ಣನ್ನು ಕೊಡುತ್ತೇನೆ.'

ಅಸಾಮಾನ್ಯ ವಿಜ್ಞಾನಿ, ಗಣಿತಜ್ಞ ಹಾಗೂ ದೈವಭಕ್ತ, ಖಗೋಳಶಾಸ್ತ್ರಜ್ಞ ನ್ಯೂಟನ್ ಒಂದು ಮಾದರಿಯನ್ನು ನಿರ್ಮಿಸಿದ. ಅದು ಸೂರ್ಯನ ಸುತ್ತ ಗ್ರಹಗಳು ಸುತ್ತುವ ಮಾದರಿ. ಅಂದು ಅದೊಂದು ದೊಡ್ಡ ಸಾಧನೆ. ಅದನ್ನು ಪ್ರಪಂಚದ ವಿವಿಧ ಭಾಗಗಳಿಂದ ವಿಜ್ಞಾನಿಗಳು ಬಂದು ನೋಡಿ ಮೆಚ್ಚಿಕೊಂಡರು. ಅವರಲ್ಲೊಬ್ಬ ರಷ್ಯನ್ ವಿಜ್ಞಾನಿ. ಆತ ನಾಸ್ತಿಕ. ನ್ಯೂಟನ್‌ನ ಈ ಮಾದರಿಯನ್ನು ಕಂಡು ಆಶ್ಚರ್ಯಪಟ್ಟು ತನ್ನ ಮೆಚ್ಚುಗೆಯನ್ನು ಸೂಚಿಸಿದ. ಆಗ ನ್ಯೂಟನ್ ಹೇಳಿದ: ‘ನಾನು ಈ ಮಾದರಿಯನ್ನು ಮಾಡಿಲ್ಲ.’ ಆತನಿಗೆ ಮತ್ತೂ ಆಶ್ಚರ್ಯ.

‘ಅರೇ, ನೀನೇ ಮಾಡಿದ್ದೆಂದು ಎಲ್ಲರೂ ಹೇಳುತ್ತಾರೆ, ಅಲ್ಲಿ ಫಲಕವನ್ನೂ ಹಾಕಿದ್ದಾರೆ’ ಎಂದ. ಆಗ ನ್ಯೂಟನ್ ಹೇಳಿದ: ‘ಇಲ್ಲಪ್ಪ, ನಾನು ಅದನ್ನು ಮಾಡಲಿಲ್ಲ; ಅಷ್ಟೇ ಅಲ್ಲ, ಯಾರೂ ಅದನ್ನು ಮಾಡಿಲ್ಲ. ಅದು ತಾನೇತಾನಾಗಿ ಅಲ್ಲಿ ಕುಳಿತಿದೆ.’ ರಷ್ಯನ್ ವಿಜ್ಞಾನಿ ಕೇಳಿದ: ‘ಅಲ್ಲ ನ್ಯೂಟನ್, ಅಲ್ಲಿ ಮಾದರಿ ಇದೆ, ಸರಿಯಾಗಿ ಕೆಲಸಮಾಡುತ್ತಿದೆ. ಯಾರೂ ಮಾಡದೇ ಅದು ಇರುವುದು ಹೇಗೆ ಸಾಧ್ಯ?’ ನ್ಯೂಟನ್ ನಕ್ಕ.

‘ಸ್ನೇಹಿತ, ಇಲ್ಲಿರುವುದು ಕೇವಲ ಮಾದರಿ. ಇದರ ಮೂಲನಕ್ಷೆ ಆಕಾಶದಲ್ಲಿದೆ. ಮಾದರಿಯನ್ನು ಮಾಡಲು ಯಾರಾದರೂ ಇರಲೇಬೇಕು ಎನ್ನುವುದಾದರೆ ಈ ಮೂಲನಕ್ಷೆಯನ್ನು ರಚಿಸಿದ ಒಂದು ಶಕ್ತಿ ಇರಲೇಬೇಕಲ್ಲವೇ? ಪ್ರಪಂಚದ ವ್ಯವಸ್ಥೆಯನ್ನು ನಡೆಸಿಕೊಂಡು ಬರುವ ಶಕ್ತಿಯನ್ನು ನಾವು ದೇವರು ಎನ್ನುತ್ತೇವೆ’ ಎಂದ. ರಷ್ಯನ್ ವಿಜ್ಞಾನಿ ತಲೆ ಅಲ್ಲಾಡಿಸಿ ಒಪ್ಪಿದ.

ಯಾವ ಶಕ್ತಿ ಕಣ್ಣಿಗೆ ಕಾಣದೇ ಇದ್ದರೂ ಅದು ಇದೆ ಎಂಬ ನಂಬಿಕೆಯಲ್ಲಿ, ಭದ್ರತೆಯಲ್ಲಿ, ಶಾಂತಿಯಲ್ಲಿ, ಅರಿವಿನಲ್ಲಿ ಜನರು ಬದುಕು ನಡೆಸುತ್ತಿದ್ದಾರೋ ಆ ಶಕ್ತಿಯೇ ಒಂದು ವಿಚಿತ್ರ. ಅದಕ್ಕೆ ನಮಿಸಿ ಗೌರವಿಸು ಎನ್ನುತ್ತಾರೆ ಡಿ.ವಿ.ಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT