ಭಾನುವಾರ, ನವೆಂಬರ್ 28, 2021
20 °C
‘ಚಳವಳಿಯ ಹಾಡುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಕೆ. ಶರೀಫಾ

ಬೋಗಸ್‌ ಸಂಸ್ಕೃತಿ ಪೋಷಿಸುವುದು ಅಪಾಯಕಾರಿ: ಡಾ. ಕೆ. ಶರೀಫಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ‘ಬೋಗಸ್‌ ಸಂಸ್ಕೃತಿಗಳನ್ನು ಬೆಳೆಸುತ್ತಿರುವವರೇ ಇಂದು ಪ್ರಜಾಪ್ರಭುತ್ವದ ರಕ್ಷಕರಾಗುತ್ತಿರುವುದು ದುರಂತ’ ಎಂದು ಸಾಹಿತಿ ಡಾ. ಕೆ. ಶರೀಫಾ ಅಭಿಪ್ರಾಯಪಟ್ಟರು.

ಜನ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ’ಚಳವಳಿಯ ಹಾಡುಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಭುತ್ವದ ವಿರುದ್ಧ ಕವಿತೆ ಬರೆದರೆ ಎಫ್‌ಐಆರ್‌ ದಾಖಲಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈಗಾಗಲೇ ಅನೇಕ ಹೋರಾಟಗಾರರು ಜೈಲು ಶಿಕ್ಷೆ ಸಹ ಅನುಭವಿಸಿದ ಉದಾಹರಣೆಗಳಿವೆ. ಜತೆಗೆ, ಶಸ್ತ್ರಾಸ್ತ್ರಗಳನ್ನು ನಿಷೇಧಿಸಿರುವ ದೇಶದಲ್ಲೂ ತ್ರಿಶೂಲ ದೀಕ್ಷೆ ನಡೆಯುತ್ತಿರುವ ಕಾಲಘಟ್ಟ ಇದಾಗಿದೆ’ ಎಂದರು.

‘ಬರಗೂರು ರಾಮಚಂದ್ರಪ್ಪ ಅವರು ಕಟ್ಟಿದ ಚಳವಳಿಗಳು ಅದ್ಭುತ ಪರಿಣಾಮ ಬೀರಿವೆ. ಬಂಡಾಯ ಚಳವಳಿಯ ಸಂದರ್ಭದಲ್ಲಿ ಪಟ್ಟಭದ್ರರ ಭಯವೂ ಕಾಡಿತ್ತು. ವಿರೋಧಗಳು ಸಹ ವ್ಯಕ್ತವಾಗಿದ್ದವು. ಬಂಡಾಯ ಚಳವಳಿಯ ಬೆನ್ನಲುಬಾಗಿದ್ದ ಬರಗೂರು ಅವರು ನಮ್ಮೆಲ್ಲರನ್ನೂ ತಾಯ್ತನದಿಂದ ಪೋಷಿಸಿದ್ದರು. ನಿಷ್ಠುರವಾಗಿ ಸಿಡಿದೆಳುವ ಪ್ರವೃತ್ತಿ ಹಾಗೂ ವೈಚಾರಿಕತೆ ಆಳ ಮತ್ತು ಸ್ಪಷ್ಟತೆ ಅವರ ವ್ಯಕ್ತಿತ್ವದಲ್ಲಿದೆ’ ಎಂದು ವಿವರಿಸಿದರು.

‘ನಡೆ, ನುಡಿಯಲ್ಲಿ ಸೈದ್ಧಾಂತಿಕ ಬದ್ಧತೆಗಳು ಇಂದಿಗೂ ಬರಗೂರು ರಾಮಚಂದ್ರಪ್ಪ ಅವರಲ್ಲಿ ಉಳಿದುಕೊಂಡಿವೆ. ಬಂಡಾಯ ಸಾಹಿತಿಗೆ ಸಾಮಾಜಿಕ ಜವಾಬ್ದಾರಿ ಮತ್ತು ರಾಜಕೀಯ ಸ್ಪಷ್ಟತೆ ಇರಬೇಕು ಎನ್ನುವುದನ್ನು ಅವರು ಸದಾ ಹೇಳುತ್ತಾರೆ’ ಎಂದು ಹೇಳಿದರು. 

ಬರಗೂರು ರಾಮಚಂದ್ರಪ್ಪ ಅವರು ಮಾತನಾಡಿ, ‘ಚಳವಳಿ ಪ್ರಜ್ಞೆಯನ್ನು ಜೀವಂತವಾಗಿಡುವುದು ಇಂದು ಹೆಚ್ಚು ಅಗತ್ಯವಿದೆ. ಕನ್ನಡ ಸಾಹಿತ್ಯವೇ ನನಗೆ ಚಳವಳಿ ಪ್ರಜ್ಞೆ ಮೂಡಿಸಿದೆ. ಈ ಚಳವಳಿ ಪ್ರಜ್ಞೆಯನ್ನು ಉಳಿಸಿ ಬೆಳೆಸಬೇಕು’ ಎಂದು ಸಲಹೆ ನೀಡಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ವಿಮರ್ಶಕ ಡಾ.ಎಚ್‌. ದಂಡಪ್ಪ, ಬರಗೂರು ರಾಮಚಂದ್ರಪ್ಪ ಅವರ ವ್ಯಕ್ತಿತ್ವ, ಹೋರಾಟದ ದಿನಗಳು, ಶಿಷ್ಯರಿಗೆ ಮಾರ್ಗದರ್ಶನ ನೀಡಿದ ವೃತ್ತಿ ಜೀವನದ ದಿನಗಳನ್ನು ನೆನಪಿಸಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು