ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಬಸವನಗುಡಿ ಕಡಲೆಕಾಯಿ ಪರಿಷೆ

Last Updated 25 ನವೆಂಬರ್ 2019, 4:42 IST
ಅಕ್ಷರ ಗಾತ್ರ

ಬೆಂಗಳೂರು: ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ ಸಜ್ಜುಗೊಂಡಿದ್ದು, ಬಸವನ ಗುಡಿ ರಸ್ತೆಯ ಇಕ್ಕೆಲಗಳಲ್ಲಿ ಶೇಂಗಾ ರಾಶಿ ಗಮನ ಸೆಳೆಯುತ್ತಿದೆ.

ಮೂರು ದಿನಗಳ ಪರಿಷೆಗೆ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಬೆಳಿಗ್ಗೆ ಚಾಲನೆ ನೀಡಲಿದ್ದಾರೆ. ದೇವಾಲಯದಲ್ಲಿ ವಿಶೇಷ ಪೂಜೆ ನಡೆಸಿ, ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಲಾಗುತ್ತದೆ.

ಪರಿಷೆಯ ಮುನ್ನಾದಿನವಾದ ಭಾನುವಾರ ಬೆಳಿಗ್ಗೆಯಿಂದಲೇ ಬಸವನಗುಡಿ ರಸ್ತೆಯಲ್ಲಿ ಕಡಲೆಕಾಯಿ ವ್ಯಾಪಾರ ಕಳೆಗಟ್ಟಿತ್ತು. ಸಂಜೆ ವೇಳೆಗೆಸಾವಿರಾರು ಜನ ಭೇಟಿ ನೀಡಿದ ಪರಿಣಾಮ ಜನದಟ್ಟಣೆ ಉಂಟಾಗಿ, ಕೆಲವರು ವಾಪಸು ಹೋಗಲು ಪರದಾಟ ನಡೆಸಿದರು.

ಬಸವನಗುಡಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಿದ್ದ ಪರಿಣಾಮ ವಾಹನ ಸವಾರರು ಪಾರ್ಕಿಂಗ್ ಮಾಡಲು ಹರಸಾಹಸಪಟ್ಟರು. ಬಣ್ಣ ಬಣ್ಣದ ದೀ‍ಪಗಳಿಂದ ಅಲಂಕರಿಸಲ್ಪಟ್ಟ ರಸ್ತೆಯ ನಡುವೆ ಗುಂಪು ಗುಂಪಾಗಿ ಸಾಗುತ್ತಿದ್ದ ಜನತೆ, ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ಅದೇ ರೀತಿ,ಆಟಿಕೆಗಳು, ಕರಕುಶಲ ವಸ್ತುಗಳು, ತಿಂಡಿ ತಿನಿಸುಗಳ ಮಳಿಗೆಗಳಲ್ಲೂ ವ್ಯಾಪಾರ ಜೋರಾಗಿತ್ತು.

‘ಒಂದು ಸೇರು ಕಡಲೆಕಾಯಿಗೆ ₹30ನಿಂದ ₹45ವರೆಗೆ ಮಾರಾಟ ಮಾಡಲಾಗುತ್ತಿದೆ. ಬೇಯಿಸಿದ ಕಡಲೆಕಾಯಿಯ ಸೇರಿಗೆ ₹50 ನಿಗದಿ ಪಡಿಸಲಾಗಿದೆ. ವಾರಾಂತ್ಯದಲ್ಲಿ ಉತ್ತಮ ವ್ಯಾಪಾರವಾಗಿದೆ. ಪರಿಷೆ ಆರಂಭವಾದ ಬಳಿಕ ದರದಲ್ಲಿ ಸ್ವಲ್ಪ ಇಳಿಕೆಯಾಗಬಹುದು’ ಎನ್ನುತ್ತಾರೆ ಮಾರಾಟಗಾರರು.

ಇಂದಿನಿಂದ ವಾಹನಗಳಿಗೆ ಪರ್ಯಾಯ ವ್ಯವಸ್ಥೆ

ಕಡಲೆಕಾಯಿ ಪರಿಷೆ ಹಿನ್ನೆಲೆಯಲ್ಲಿಇದೇ 23ರಿಂದ ಪರಿಷೆ ಮುಕ್ತಾಯ ಆಗುವವರೆಗೆ ಬಸವನಗುಡಿ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ. ಇದೇ 23 ಮತ್ತು 24 ರಜಾದಿನ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆಯಿದೆ.

ಲಾಲ್‌ಬಾಗ್‌ ಪಶ್ಚಿಮ ದ್ವಾರದಿಂದ ವಾಣಿ ವಿಲಾಸ ರಸ್ತೆ ಮೂಲಕ ಮತ್ತು ಚಾಮರಾಜಪೇಟೆ 5ನೇ ಮುಖ್ಯರಸ್ತೆ ಹಾಗೂ ಗಾಂಧಿ ಬಜಾರ್‌ ಮುಖ್ಯರಸ್ತೆ ಕಡೆಯಿಂದ ಹನುಮಂತನಗರಕ್ಕೆ ಹೋಗುವ ವಾಹನಗಳು, ರಾಮಕೃಷ್ಣ ಆಶ್ರಮ ವೃತ್ತದಲ್ಲಿ ಬಲ ತಿರುವು ಪಡೆದು ಗವಿಪುರದ ಹಯವದನ ರಸ್ತೆ ಮೂರನೇ ಕ್ರಾಸ್‌ ಮೂಲಕ ಮೌಂಟ್‌ ಜಾಯ್‌ ರಸ್ತೆಯಾಗಿ ಹನುಮಂತ ನಗರಕ್ಕೆ ಹೋಗಬೇಕು.

ಬಸವನ ಗುಡಿ ರಸ್ತೆಯ ಶೇಖರ್‌ ಜಂಕ್ಷನ್‌ನಲ್ಲಿ ಅಯ್ಯಂಗಾರ್‌ ರಸ್ತೆ ಮೂಲಕ ಗವಿಪುರ ಎಕ್ಸ್‌ಟೆನ್ಷನ್‌ 3ನೇ ಕ್ರಾಸ್‌ ರಸ್ತೆಯಿಂದ ಮೌಂಟ್‌ ಜಾಯ್‌ ರಸ್ತೆ ಮೂಲಕ ಹನುಮಂತನಗರಕ್ಕೆ ಹೋಗಬೇಕು.

ನ್ಯಾಷನಲ್ ಕಾಲೇಜು ಆಟದ ಮೈದಾನ, ಎಪಿಎಸ್‌ ಕಾಲೇಜು ಮೈದಾನ, ಬಸವನಗುಡಿ ರಸ್ತೆ ಸಾಯಿರಂಗಾ (ಉದಯಭಾನು) ಆಟದ ಮೈದಾನಗಳಲ್ಲಿ ವಾಹನಗಳನ್ನು ನಿಲ್ಲಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT