ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣಗೆ ಅಗೌರವ: ಮ್ಯೂಸಿಯಂ ಸಮಿತಿಗೆ ರಾಜೀನಾಮೆ

Last Updated 2 ಜೂನ್ 2022, 2:53 IST
ಅಕ್ಷರ ಗಾತ್ರ

ಬೆಂಗಳೂರು: ‘ಈಗಿನ ಸರ್ಕಾರ ಬಸವಣ್ಣನವರ ಬಗ್ಗೆ ಗೌರವವಾಗಿ ನಡೆದುಕೊಳ್ಳುತ್ತಿಲ್ಲ. ಅವರ ವಿಚಾರಗಳಿಗೆ ಅವಮಾನವಾಗುವ ರೀತಿಯಲ್ಲಿ‍ಪಠ್ಯದಲ್ಲಿ ಸುಳ್ಳುಗಳನ್ನು ಬರೆಸಿರುವುದನ್ನು ಪ್ರತಿಭಟಿಸುತ್ತೇವೆ’ ಎಂದು ಹೇಳಿರುವ ಕೂಡಲ ಸಂಗಮದ ಬಸವ ಅಂತಾರಾಷ್ಟ್ರೀಯ ಮ್ಯೂಸಿಯಂನ ತಜ್ಞರ ಸಮಿತಿಯ ಏಳು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.

ತಜ್ಞರ ಸಮಿತಿ ಸದಸ್ಯರಾಗಿದ್ದ ನಿವೃತ್ತ ಪ್ರಾಧ್ಯಾಪಕ ಟಿ.ಆರ್. ಚಂದ್ರಶೇಖರ್, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ, ಲೇಖಕರಾದ ಗುರುಪಾದ ಮರಿಗುದ್ದಿ, ಹನುಮಾಕ್ಷಿ ಗೋಗಿ, ಬಸವರಾಜ ಸಬರದ, ರಂಜಾನ್ ದರ್ಗಾ,ಶಂಕರ ದೇವನೂರು ಅವರು ಕಂದಾಯ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದಾರೆ.

‘2022ರಲ್ಲಿ ಪರಿಷ್ಕರಿಸಲಾಗಿರುವ ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಪರಿಚಯ ಹಾಗೂ ಅವರ ವಿಚಾರಗಳಿಗೆ ಅವಮಾನವಾಗುವ ರೀತಿಯಲ್ಲಿ ಸುಳ್ಳುಗಳನ್ನು ತುಂಬಿ ಬರೆಯಲಾಗಿದೆ. ಇದನ್ನು ನಾವು ಪ್ರತಿಭಟಿಸುತ್ತೇವೆ. ಈ ಸರ್ಕಾರಕ್ಕೆ ಬಸವಣ್ಣನವರ ಬಗ್ಗೆ ಗೌರವ ಇಲ್ಲದಿರುವಾಗ ಸದರಿ ಸಮಿತಿಯಲ್ಲಿ ಮುಂದುವರಿಯುವುದಕ್ಕೆ ಅರ್ಥವಿಲ್ಲ’ ಎಂದೂ ಅವರೆಲ್ಲರೂ ಪ್ರತಿಪಾದಿಸಿದ್ದಾರೆ.

‘ಇದುವರೆಗೂ ಮ್ಯೂಸಿಯಂನ ಕೆಲಸ ಏನಾಗಿದೆ ಎಂಬುದರ ಬಗ್ಗೆ ತಜ್ಞರ ಸಮಿತಿಗೆ ವಿವರ ನೀಡಿಲ್ಲ. ಸಭೆ ನಡೆದಂತೆ ಕಾಣುವುದಿಲ್ಲ ಅಥವಾ ಸದಸ್ಯರನ್ನು ಕರೆದಂತಿಲ್ಲ. ಮ್ಯೂಸಿಯಂನ ಕೆಲಸ ಮುಗಿದಿದೆ ಎಂದು ಜೂನ್ 1ರ ಸಭೆಗೆ ಮೌಖಿಕವಾಗಿ ಆಹ್ವಾನ ನೀಡುವಾಗ ರಘು ಎಂಬುವರು ತಿಳಿಸಿದ್ದಾರೆ. ಯಾವ ಸಿದ್ಧತೆ ಮಾಡಿಕೊಂಡು ಸಭೆಗೆ ಬರಬೇಕು ಎಂಬುದರ ಮಾಹಿತಿಯೂ ಇಲ್ಲ. ಮ್ಯೂಸಿಯಂ ಕುರಿತಾದ ಯಾವ ತೀರ್ಮಾನದ ಬಗ್ಗೆಯೂ ಜವಾಬ್ದಾರಿ ಹೊತ್ತುಕೊಳ್ಳಲು ನಾವು ಸಿದ್ಧರಿಲ್ಲ. ಈ ಕಾರಣದಿಂದಲೂ ರಾಜೀನಾಮೆ ಕೊಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

ದೆಹಲಿಯಲ್ಲಿರುವ ಸ್ವಾಮಿ ನಾರಾಯಣ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮದಲ್ಲಿ ಬಸವ ಮ್ಯೂಸಿಯಂ, ಚಿತ್ರಕಲೆ, ಶಿಲ್ಪಕಲೆ, 3 ಡಿ ತಂತ್ರಜ್ಞಾನ, ಶರಣ ಗ್ರಾಮ ನಿರ್ಮಾಣದ ಸಲುವಾಗಿ ಸರ್ಕಾರ ತಜ್ಞರ ಸಮಿತಿಯನ್ನು 2020ರ ಡಿಸೆಂಬರ್‌ನಲ್ಲಿ ರಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT