ಶನಿವಾರ, ಜುಲೈ 2, 2022
26 °C
ಬಸವೇಶ್ವರನಗರ ಜಂಕ್ಷನ್: ಬೇರೆ ಕಂಪನಿಯ ಪಾಲಾದ ಗುತ್ತಿಗೆ: ಟೆಂಡರ್‌ಗೆ ಮುನ್ನವೇ ಅರ್ಧಕ್ಕೂ ಹೆಚ್ಚು ಕಾಮಗಾರಿ ಪೂರ್ಣ

ಗೊಂದಲದ ಗೂಡಾದ ಮೇಲ್ಸೇತುವೆ ಕಾಮಗಾರಿ

ವಿಜಯಕುಮಾರ್‌ ಎಸ್‌.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಶ್ಚಿಮ ಕಾರ್ಡ್‌ ರಸ್ತೆಯ ಬಸವೇಶ್ವನಗರ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಗೊಂದಲದ ಗೂಡಾಗಿದೆ. ಟೆಂಡರ್‌ ಪ್ರಕ್ರಿಯೆಗೆ ಮುನ್ನವೇ ಅರ್ಧಕ್ಕೂ ಹೆಚ್ಚು ಕಾಮಗಾರಿಯನ್ನು ಇಲ್ಲಿ ಈ ಮೊದಲು ಮೇಲ್ಸೇತುವೆ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರ ಪೂರ್ಣಗೊಳಿಸಿದ್ದರು. ಟೆಂಡರ್‌ ಕರೆದ ಬಳಿಕ ಗುತ್ತಿಗೆ ಬೇರೆ ಕಂಪನಿಯ ಪಾಲಾಗಿದೆ.

ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಅಲ್ಲಲ್ಲಿ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿಗಳು 6 ವರ್ಷಗಳಿಂದ ನಡೆಯುತ್ತಿವೆ. ಇಲ್ಲಿನ ಮೇಲ್ಸೇತುವೆಗಳ ವಿನ್ಯಾಸವನ್ನು ಪದೇ ಪದೇ ಬದಲಾಯಿಸಲಾಗಿತ್ತು. ಈಗ ಟೆಂಡರ್‌ ಪ್ರಕ್ರಿಯೆ ನಂತರದ ಬೆಳವಣಿಗೆಯಿಂದಾಗಿ ಬಸವೇಶ್ವನಗರ ಜಂಕ್ಷನ್ ಮೇಲ್ಸೇತುವೆ ನಿರ್ಮಾಣ ಯೋಜನೆ ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.

ಇಲ್ಲಿ ಮೇಲ್ಸೇತುವೆಗಳ ನಿರ್ಮಾಣಕ್ಕೆ ಒಟ್ಟು ₹ 89.86 ಕೋಟಿ ವೆಚ್ಚದ ಆರಂಭಿಕ ಯೋಜನೆಗೆ 2015ರ ಫೆ. 11ರಂದು ಅನುಮೋದನೆ ನೀಡಲಾಗಿತ್ತು. ಈ ಪೈಕಿ ಮಂಜುನಾಥನಗರದ ಮುಖ್ಯರಸ್ತೆ ಕೂಡುವಲ್ಲಿನ ಮೇಲ್ಸೇತುವೆ 2018ರ ಆ. 27ರಂದು ಲೋಕಾರ್ಪಣೆಗೊಂಡಿತು. ಈ ನಡುವೆ, ಶಿವನಗರ 8ನೇ ಮತ್ತು 1ನೇ ಮುಖ್ಯ ರಸ್ತೆ ಕೂಡುವಲ್ಲಿ ಇಂಟೆಗ್ರೇಟೆಡ್‌ ಅಂಡರ್‌ಪಾಸ್‌ಗೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಯಿತು. ಆಗ ಕೆಳಸೇತುವೆ ಬದಲಿಗೆ ಮೇಲ್ಸೇತುವೆ ನಿರ್ಮಿಸಲು ಯೋಜನೆ ಪರಿಷ್ಕರಿಸಲಾಯಿತು. ಪ್ಯಾಕೇಜ್‌ನ ಮೊತ್ತ ₹ 89.86 ಕೋಟಿಯಿಂದ ₹ 112.07 ಕೋಟಿಗೆ ಹೆಚ್ಚಿಸಲಾಯಿತು. ಈ ಕಾಮಗಾರಿ ಮುಕ್ತಾಯಗೊಂಡು 2021ರ ಅ. 4ರಂದು ವಾಹನ ಸಂಚಾರಕ್ಕೆ ಮುಕ್ತಗೊಂಡಿತು.

ಯಶವಂತಪುರ ಕಡೆಯಿಂದ ವಿಜಯನಗರ ತನಕ ಸಿಗ್ನಲ್ ರಹಿತ ರಸ್ತೆಯನ್ನಾಗಿ ಮಾಡಲು 72ನೇ ಅಡ್ಡರಸ್ತೆಗೆ ಮೇಲ್ಸೇತುವೆ ಅಗತ್ಯವಿದೆ ಎಂದು ಈಗಿನ ಸಚಿವ ವಿ.ಸೋಮಣ್ಣ ಅವರು 2018ರ ಆಗಸ್ಟ್ 6ರಂದು ಮುಖ್ಯಮಂತ್ರಿಯವರಿಗೆ ಮತ್ತು ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದರು. ಅಲ್ಲದೇ ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೇ ಕಾಮಗಾರಿ ವಹಿಸುವಂತೆ ಕೋರಿದ್ದರು. ₹33.71 ಕೋಟಿ ಮೊತ್ತದ ಯೋಜನೆ ರೂಪಿಸಿ ಅದನ್ನೂ ಮೂಲ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಲಾಯಿತು. ಆಗ ಯೋಜನೆ ಮೊತ್ತ ₹ 145.78 ಕೋಟಿಗೆ ಹೆಚ್ಚಿತು. ಟೆಂಡರ್ ನಡೆಸದೆ ಅದೇ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲು ನಿರ್ಧರಿಸಲಾಯಿತು.

ಮತ್ತೊಮ್ಮೆ ಪರಿಷ್ಕರಣೆ: ಶಿವನಗರ ಮೇಲ್ಸೇತುವೆ ಕಾಮಗಾರಿ ಉದ್ಘಾಟನೆಗೆ (2021ರ ಅ.4ರಂದು) ಬಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿ.ಸೋಮಣ್ಣ ಮತ್ತು ಶಾಸಕ ಎಸ್.ಸುರೇಶ್‌ಕುಮಾರ್ ಅವರು ಮನವಿ ಸಲ್ಲಿಸಿ, ಬಸವೇಶ್ವರನಗರದ ಮುಖ್ಯರಸ್ತೆ ಕೂಡುವಲ್ಲಿಯೂ ದ್ವಿಮುಖ ಸಂಚಾರದ ಮೇಲ್ಸೇತುವೆ ನಿರ್ಮಿಸುವಂತೆ ಕೋರಿದ್ದರು. ₹23.62 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಮೇಲ್ಸೇತುವೆ ನಿರ್ಮಿಸಲು ಅದಕ್ಕೂ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ(ಕೆಟಿಪಿಪಿ) ವಿನಾಯಿತಿ ಪಡೆಯುವ ಪ್ರಯತ್ನ ನಡೆಯಿತು. ಅನುಮೋದನೆಗೆ ಮುನ್ನವೇ ಕಾಮಗಾರಿ ಆರಂಭಿಸಲಾಗಿತ್ತು. ನಿಯಮ ಮೀರಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ‘ಪ‍್ರಜಾವಾಣಿ’ಯಲ್ಲಿ  ವಿಶೇಷ ವರದಿ ಪ್ರಕಟವಾದ ಬಳಿಕ ಟೆಂಡರ್ ನಡೆಸಿಯೇ ಕಾಮಗಾರಿ ನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿತು.

ಬಳಿಕ ಒಂದೆಡೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದರೆ, ಇನ್ನೊಂದೆಡೆ ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಕಂಪನಿ ಕಾಮಗಾರಿ ಮುಂದುವರಿಸುತ್ತಲೇ ಇತ್ತು. ಕೊನೆಗೂ ಗುತ್ತಿಗೆಯನ್ನು ಕಡಿಮೆ ಮೊತ್ತ ದಾಖಲಿಸಿದ್ದ ಆರ್‌ಪಿಪಿ ಕನ್‌ಸ್ಟ್ರಕ್ಷನ್‌ಗೆ ವಹಿಸುವ ಅನಿವಾರ್ಯ ಬಿಬಿಎಂಪಿಗೆ ಬಂದಿದೆ.

ಇದೆಲ್ಲದರ ನಡುವೆ ಮೇಲ್ಸೇತುವೆ ನಿರ್ಮಾಣಕ್ಕೆ ಐದು ಕಂಬಗಳನ್ನು ಎಂ.ವೆಂಕಟರಾವ್‌ ಇನ್‌ಫ್ರಾ ಪ್ರಾಜೆಕ್ಟ್ಸ್‌ ಕಂಪನಿ ನಿರ್ಮಿಸಿದೆ. ಕಾಮಗಾರಿ ಈಗಲೂ ಮುಂದುವರಿದಿದೆ.

ಹಲವು ಪಶ್ನೆ; ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರವಿಲ್ಲ
ಕಾರ್ಯಾದೇಶ ಪಡೆಯದೆ ನಿರ್ವಹಿಸಿರುವ ಕಾಮಗಾರಿಗೆ ಬಿಬಿಎಂಪಿ ಬಿಲ್ ಪಾವತಿಸುವುದೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಅನುಮತಿಯೇ ಇಲ್ಲದೆ ನಿರ್ವಹಿಸಿರುವ ಕಾಮಗಾರಿಗೆ ಗುಣಮಟ್ಟಕ್ಕೆ ಯಾರು ಹೊಣೆ, ಈ ಕಂಪನಿ ಬಿಲ್‌ ಸಲ್ಲಿಸಿದರೆ ಪಾವತಿಸಲು ಬಿಬಿಎಂಪಿಗೆ ಸಾಧ್ಯವಿದೆಯೇ? ಗುತ್ತಿಗೆ ಬೇರೆಯವರ ಪಾಲಾಗಿದ್ದರೂ ಕಾಮಗಾರಿ ನಿರ್ವಹಿಸಲು ಧೈರ್ಯ ನೀಡುತ್ತಿರುವ ಶಕ್ತಿಗಳು ಯಾವುವು ಎಂಬ ಹತ್ತು ಹಲವು ಪ್ರಶ್ನೆಗಳು ಎದ್ದಿವೆ.

ಅರ್ಧದಷ್ಟು ನಿರ್ವಹಿಸಿರುವ ಕಾಮಗಾರಿಯನ್ನು ಆರ್‌ಪಿಪಿ ಕನ್‌ಸ್ಟ್ರಕ್ಷನ್ ಕಂಪನಿ ಮುಂದುವರಿಸಲು ಒಪ್ಪದಿದ್ದರೆ ಕಾಮಗಾರಿ ನನೆಗುದಿಗೆ ಬೀಳುವ ಸಾಧ್ಯತೆ ಇದೆ. ವರ್ಷಗಟ್ಟಲೆ ಕಾಮಗಾರಿ ಸ್ಥಗಿತಗೊಂಡರೆ ಯಾರು ಹೊಣೆ ಎಂಬ ಪ್ರಶ್ನೆಗಳಿಗೆ ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಎಂ.ಲೋಕೇಶ್ ಅವರನ್ನು ‘ಪ‍್ರಜಾವಾಣಿ’ ಸಂಪರ್ಕಿಸಿತು. ‘ಕಾರ್ಯದ ಒತ್ತಡದಲ್ಲಿದ್ದೇನೆ, ಸ್ವಲ್ಪ ಸಮಯದ ಬಳಿಕ ವಿವರಿಸುತ್ತೇನೆ’ ಎಂದು ಹೇಳಿದರು. ಮತ್ತೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ.

‘ಜನ ಪರಿತಪಿಸಬೇಕಾಗುತ್ತದೆ’
ಕಾರ್ಯಾದೇಶ ಪಡೆಯದೆ ಕೆಲಸ ಮಾಡಿದರೆ ಮುಂದೆ ಗುತ್ತಿಗೆದಾರರ ಜತೆಗೆ ಈ ಭಾಗದಲ್ಲಿ ಸಂಚಾರ ಮಾಡುವ ಸಾಮಾನ್ಯ ಜನರೂ ಪರಿತಪಿಸಬೇಕಾಗುತ್ತದೆ. ಸಮಗ್ರ ಯೋಜನೆ ರೂಪಿಸದ ಪರಿಣಾಮ ಕಾಮಗಾರಿ 6 ವರ್ಷಗಳ ಬಳಿಕವೂ ಪೂರ್ಣಗೊಂಡಿಲ್ಲ. ಯೋಜನೆಯ ವಿವರ ಒಳಗೊಂಡ ಫಲಕವನ್ನು ಸ್ಥಳದಲ್ಲಿ ಎಲ್ಲಿಯೂ ಪ್ರದರ್ಶಿಸಿಲ್ಲ. ಜನ ಇದೆಲ್ಲವನ್ನೂ ಪ್ರಶ್ನೆ ಮಾಡದಿದ್ದರೆ ಅರಾಜಕತೆ  ಮುಂದುವರಿಯುತ್ತಲೇ ಇರುತ್ತದೆ. ಪ್ರಶ್ನೆ ಮಾಡುವುದನ್ನು ಜನ ರೂಢಿಸಿಕೊಳ್ಳಬೇಕು.
-ಆದರ್ಶ ಅಯ್ಯರ್, ಜನಾಧಿಕಾರ ಸಂಘರ್ಷ ಪರಿಷತ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು