ಕಸ ಇಟ್ಕೊಂಡು ಊಟ ಹೇಗೆ ಮಾಡೋದು?

7

ಕಸ ಇಟ್ಕೊಂಡು ಊಟ ಹೇಗೆ ಮಾಡೋದು?

Published:
Updated:

ನೂತನ ಮೇಯರ್‌ ಗಂಗಾಂಬಿಕೆ ಅವರಿಗೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ಕಲ್ಪಿಸಿರುವ ಅವಕಾಶಕ್ಕೆ ಸಾರ್ವಜನಿಕರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದಿರುವ ದೂರುಗಳಲ್ಲಿ ಕಸ ವಿಲೇವಾರಿ, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳೇ ಹೆಚ್ಚಾಗಿವೆ. ರಾಜಕಾಲುವೆಯ ಹೂಳು ಎತ್ತದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಬೀದಿನಾಯಿಗಳ ಹಾವಳಿ ತಪ್ಪಿಸುವಂತೆ ಮನವಿಗಳು ಬಂದಿವೆ. ಮೇಯರ್‌ಗೆ ಜನರು ಸಲ್ಲಿಸಿರುವ ಕೆಲವು ಅಹವಾಲುಗಳು ಇಲ್ಲಿವೆ.

ರಾಜಕಾಲುವೆ ಶುಚಿಗೊಳಿಸಿ

ರಾಮಚಂದ್ರಾಪುರ ಮುಖ್ಯ ರಸ್ತೆಯಲ್ಲಿ ಹಾದುಹೋಗಿರುವ ರಾಜಕಾಲುವೆ ಹೂಳಿನಿಂದ ತುಂಬಿದೆ. ಕಾಲುವೆಯ ತಡೆಗೋಡೆಯೂ ಕುಸಿದು ಬಿದ್ದಿದೆ. ಅದರ ಪಕ್ಕದಲ್ಲಿಯೇ ಕಸದ ರಾಶಿ ತುಂಬಿಕೊಂಡಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಿ.

ಕೆ.ಸುಬ್ರಹ್ಮಣ್ಯ, ರಾಮಚಂದ್ರಾಪುರ.

***

‌ಕಸ, ವಾಹನ ನಿಲುಗಡೆ ಸಮಸ್ಯೆ ಬಗೆಹರಿಸಿ

ನಗರದ ಹಲವೆಡೆ ರಸ್ತೆ ಬದಿಗಳಲ್ಲಿ ಸಂಗ್ರಹಗೊಂಡ ಕಸ ದುರ್ವಾಸನೆ ಬೀರುತ್ತಿದೆ. ಇಂದಿರಾ ಕ್ಯಾಂಟೀನ್‌ಗಳ ಪಕ್ಕದಲ್ಲಿ ಕಸದ ದುರ್ವಾಸನೆ ಹೆಚ್ಚಾಗಿದ್ದು, ಊಟ ಮಾಡುವವರಿಗೆ ಸಹಿಸಲು ಅಸಾಧ್ಯವಾಗಿದೆ. ರಸ್ತೆ ಬದಿಗಳಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ನಿಷೇಧ ಹೇರಿ, ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಅನುಕೂಲ ಮಾಡಿ ಕೊಡಿ.

ಪುರುಷೋತ್ತಮ ರೆಡ್ಡಿ. ಆರ್, ವಿಜಯನಗರ

***

ಶುಚಿತ್ವ ಕಾಪಾಡಿ

ಖಾಲಿ ನಿವೇಶನದ ಮಾಲೀಕರಿಗೆ ಸುತ್ತಮುತ್ತಲಿನ ಪರಿಸರವನ್ನು ಕಡ್ಡಾಯವಾಗಿ ಶುಚಿಯಾಗಿಟ್ಟುಕೊಳ್ಳುವಂತೆ ನೋಟಿಸ್ ಕೊಡಿ. ಇದರಿಂದ ಅಕ್ಕಪಕ್ಕದವರು ಖಾಲಿ ನಿವೇಶನದಲ್ಲಿ ಕಸ ಹಾಕುವುದನ್ನು ತಡೆಯಬಹುದು. ಸೊಳ್ಳೆಗಳ ಸಂಖ್ಯೆಯೂ ಕಡಿಮೆ ಆಗುತ್ತದೆ. 

ಕಿರಣ್, ಎನ್‌ಆರ್‌ಐ ಬಡಾವಣೆ, ಕಲ್ಕೆರೆ.

***

ಬೀದಿದೀಪ ದುರಸ್ತಿ ಮಾಡಿ

ಪಶ್ಚಿಮಕಾರ್ಡ್ ರಸ್ತೆಯಲ್ಲಿರುವ ಮಹಾಲಕ್ಷ್ಮಿಪುರ ಆರಕ್ಷಕ ಠಾಣೆಯ ಬಳಿಯ ಬೀದಿದೀಪ ಆಗಾಗ ಸ್ಥಗಿತಗೊಳ್ಳುತ್ತದೆ. ಮಳೆಗಾಲದಲ್ಲಿ ಹೀಗಾದರೆ, ವಯಸ್ಸಾದವರು ನಡೆದಾಡಲು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುವುದು. ಬೀದಿದೀಪದ ವ್ಯವಸ್ಥೆ ಸರಿಪಡಿಸಿದರೆ ಆಗುವ ಅನಾಹುತ, ಅಪಘಾತಗಳನ್ನು ತಪ್ಪಿಸಬಹುದು.

ಪೂರ್ಣಿಮಾ ಮೂರ್ತಿ, ಪಶ್ಚಿಮಕಾರ್ಡ್ ರಸ್ತೆ

***

ಹದಗೆಟ್ಟ ರಸ್ತೆ, ಬಾರದ ಕಾವೇರಿ

ಕಾವೇರಿ ನಗರದ 4ನೇ ‘ಬಿ’ ಅಡ್ಡರಸ್ತೆಯಲ್ಲಿ ಮುನೇಶ್ವರ ದೇವಸ್ಥಾನದ ಬಳಿಯ ರಸ್ತೆ ಹದಗೆಟ್ಟು ಹೋಗಿದೆ. ಬಹುದಿನಗಳಿಂದ ಕಾವೇರಿ ನೀರು ಸಹ ಸರಿಯಾಗಿ ಬರುತ್ತಿಲ್ಲ. ಈ ಬಗ್ಗೆ ಗಮನವಹಿಸಿ.

ಟಿ.ಎಸ್‌.ರಾಜು, ಆರ್‌.ಟಿ.ನಗರ‌

***

ವೈಜ್ಞಾನಿಕವಾಗಿ ಗುಂಡಿ ಮುಚ್ಚಿ

ನಗರದ ರಸ್ತೆಗಳು ಹದಗೆಟ್ಟಿವೆ. ಸ್ವಲ್ಪ ಮಳೆ ಬಂದರೂ ನೀರು ನಿಲ್ಲುತ್ತದೆ. ನೀರು ಸರಾಗವಾಗಿ ಹರಿದು ಹೋಗುವಂತೆ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಇದರಿಂದ ರಸ್ತೆಗಳು ಹಾಳಾಗುವುದನ್ನು ತಡೆಗಟ್ಟಬಹುದು. ವೈಜ್ಞಾನಿಕ ರೀತಿಯಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯವಾಗಬೇಕು.

ಮಹಾದೇವಪ್ಪ ಎಂ.ಸಿ, ಬಿಎಚ್‌ಇಎಲ್‌, ಮೈಸೂರು ರಸ್ತೆ

***

ಬೇಕಾಬಿಟ್ಟಿ ಕೇಬಲ್‌ ಅಳವಡಿಕೆ

ಸಂಪಂಗಿರಾಮನಗರ ವಾರ್ಡ್‌ ನಂ.110ರಲ್ಲಿ ಹಲವು ರಸ್ತೆಗಳು ಹದಗೆಟ್ಟಿವೆ. ಮರಗಳು ಬೀಳುವ ಸ್ಥಿತಿಯಲ್ಲಿವೆ. ಪೌರ ಕಾರ್ಮಿಕರು ಕೇವಲ ಮುಖ್ಯ ರಸ್ತೆಗಳಲ್ಲಿ ಮಾತ್ರ ಕಸ ಗುಡಿಸುತ್ತಾರೆ. ಏರ್‌ಟೆಲ್‌ ಮತ್ತು ಇತರ ಸಂಸ್ಥೆಗಳು ಯಾವುದೇ ಮಾನದಂಡಗಳಿಲ್ಲದೆ, ರಸ್ತೆಗಳಲ್ಲಿ ಕೇಬಲ್‌ಗಳನ್ನು ಅಳವಡಿಸಿವೆ. ಇದರಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ. ಬೇಕಾಬಿಟ್ಟಿ ಕೇಬಲ್‌ ಅಳವಡಿಕೆ ಮಾಡುವುದನ್ನು ನಿಷೇಧಿಸಿ.

ಶಾಂತಕುಮಾರ ಸಿ, ಸಂಪಂಗಿರಾಮನಗರ

***

ಕನ್ನಡಿಗರಿಗೆ ಪ್ರಾಮುಖ್ಯತೆ ನೀಡಿ

ನಗರದ ಎಲ್ಲ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಕನ್ನಡಿಗರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಹಾಗೂ ಕನಿಷ್ಠ ವೇತನ ನಿಗದಿಪಡಿಸಬೇಕು. ಈ ಮೂಲಕ ಕನ್ನಡಿಗರ ಸ್ವಾಭಿಮಾನ ಉಳಿಸಿ. ಬೀದಿನಾಯಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಿ.

ಎಬಿಡಿ ರಾಝಿಕ್, ಯಲಹಂಕ

***

ಬೇಗ ಗುಂಡಿ ಮುಚ್ಚಿಸಿ

ವಾರ್ಡ್ ನಂಬರ್ 196ರಲ್ಲಿ ಗುರುಕುಲ ಶಾಲೆಯಿಂದ ಮಸೀದಿವರೆಗೆ ಬೃಹದಾಕಾರದ ರಸ್ತೆ ಗುಂಡಿಗಳು ಬಿದ್ದಿವೆ. ಇದರಿಂದ ನಿತ್ಯ ಗೋಳಾಡುವಂತಾಗಿದೆ. ಆದಷ್ಟು ಬೇಗ ಕ್ರಮವಹಿಸಿ.

ಬಿ.ಜೆ.ಶ್ರೀಪತಿ, ರಾಯಲ್ ಪಾರ್ಕ ರೆಸಿಡೆನ್ಸಿ

***

ರಸ್ತೆಗಳಿಗೆ ಡಾಂಬರ್‌ ಹಾಕಿಸಿ

ಕೃಷ್ಣಾ ರೆಸಿಡೆನ್ಸಿಯ 1ನೇ ಬ್ಲಾಕ್‌ನ ಚನ್ನಸಂದ್ರ ಬಡಾವಣೆಯ ರಸ್ತೆಗಳು ಇದುವರೆಗೂ ಡಾಂಬರ್‌ ಕಂಡಿಲ್ಲ. ರಸ್ತೆಗಳು ಮಣ್ಣು, ಕಲ್ಲುಗಳಿಂದ ತುಂಬಿಕೊಂಡಿದ್ದು, ನಡೆದಾಡಲು ಕಷ್ಟವಾಗಿದೆ. ಕೂಡಲೇ ರಸ್ತೆಗಳಿಗೆ ಡಾಂಬರ್‌ ಹಾಕಿಸಿ.

ಬಸವರಾಜು ಎಂ.ಎನ್, ಚನ್ನಸಂದ್ರ.

***

ರಸ್ತೆಗುಂಡಿ ಮುಚ್ಚಲು ಕ್ರಮವಹಿಸಿ

ವೆಲಂಕಣಿ ಟೆಕ್ ಪಾರ್ಕ್‌ನಿಂದ ಪಟಾಲಮ್ಮ ದೇವಸ್ಥಾನದವರೆಗಿನ ದೊಡ್ಡ ತೋಗುರು ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇಲ್ಲಿ ಓಡಾಡುವುದೇ ಒಂದು ಸವಾಲಾಗಿದೆ. ವೃದ್ಧರು, ಮಕ್ಕಳು ನಡೆದಾಡಲು ತೀವ್ರ ತೊಂದರೆಯಾಗುತ್ತಿದೆ.

ಹನುಮಗೌಡ ದೊಡ್ಡ ತೋಗುರು, ಎಲೆಕ್ಟ್ರಾನಿಕ್ ಸಿಟಿ

***

ಕಸ, ಹೂಳೆತ್ತಲು ಕ್ರಮವಹಿಸಿ

‌ಮಳೆಗಾಲ ಅಬ್ಬರಿಸುವ ಮುನ್ನ ನಗರದ ಒಳಚರಂಡಿ, ರಾಜಕಾಲುವೆಗಳಲ್ಲಿರುವ ಕಸ, ಹೂಳನ್ನು ತೆಗೆದು, ನೀರು ಸರಾಗವಾಗಿ ಹರಿಯುವಂತೆ ಕೂಡಲೇ ಕ್ರಮಕೈಗೊಳ್ಳಿ.

–ಅಜಿತ್‌, ಜ್ಞಾನಭಾರತಿ ಕ್ಯಾಂಪಸ್‌

***

ಕಸದ ತೊಟ್ಟಿಗಳನ್ನಿಡಿ

ನಗರದ ವಿವಿಧ ಬಡಾವಣೆಗಳಲ್ಲಿ ಕಸ ಸಂಗ್ರಹದ ವಾಹನಗಳು ಬಂದರೂ, ಜನ ರಸ್ತೆಯ ಬಳಿಯಲ್ಲೆ ಕಸ ಹಾಕುತ್ತಿರುವುದರಿಂದ ಕಸದ ಸಮಸ್ಯೆ ಇನ್ನೂ ಹೆಚ್ಚಾಗುತ್ತಿದೆ. ಹಾಗಾಗಿ, ರಸ್ತೆಯ ಬದಿಯಲ್ಲಿ ಪ್ರತ್ಯೇಕ ಕಸದ ತೊಟ್ಟಿಗಳನ್ನಿಡಿ. ಕಸ ವಿಲೇವಾರಿ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಮಸ್ಯೆಗೆ ಪರಿಹಾರ ಸಿಗಬಹುದು.

–ಸುನೀಲ್ ಟಿ. ಆರ್, ಹೆಗ್ಗನಹಳ್ಳಿ ಕ್ರಾಸ್

***

ಬೀದಿ ವ್ಯಾಪಾರಿಗಳ ವಿರುದ್ಧ ಕ್ರಮಕೈಗೊಳ್ಳಿ

ದೊಡ್ಡನೆಕ್ಕುಂದಿ ಫ್ಲೈಓವರ್ ಮತ್ತು ಮಹಾದೇವಪುರ ಮರಾಠಹಳ್ಳಿ ಪ್ರದೇಶ ಮತ್ತು ಸುತ್ತಮುತ್ತಲಿನ
ರಸ್ತೆಗಳು, ಪಾದಚಾರಿ ಮಾರ್ಗಗಳ ತುಂಬ ಬೀದಿ ವ್ಯಾಪಾರಸ್ಥರು ಆಕ್ರಮಿಸಿಕೊಂಡಿದ್ದಾರೆ. ರಸ್ತೆ ದಾಟಲು ನಿತ್ಯ ಹರಸಾಹಸ ಪಡುವಂತಾಗಿದೆ. ಆದಷ್ಟು ಬೇಗ ಈ ಬಗ್ಗೆ ಕ್ರಮವಹಿಸಿ.

–ವೆಂಕಟೇಶ್, ದೊಡ್ಡನೆಕ್ಕುಂದಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !