ಲಂಚ ಪಡೆದ ಪ್ರಕರಣ: ಬಿಬಿಎಂಪಿ ಕಂದಾಯ ನಿರೀಕ್ಷನಿಗೆ 4 ವರ್ಷ ಜೈಲು

7

ಲಂಚ ಪಡೆದ ಪ್ರಕರಣ: ಬಿಬಿಎಂಪಿ ಕಂದಾಯ ನಿರೀಕ್ಷನಿಗೆ 4 ವರ್ಷ ಜೈಲು

Published:
Updated:

ಬೆಂಗಳೂರು: ಕೈಗಾರಿಕೆ ಶೆಡ್‌ ಖಾತೆ ವರ್ಗಾವಣೆ ಸಂಬಂಧ ವರದಿ ಕೊಡಲು ಲಂಚ ಪಡೆದ ಬಿಬಿಎಂಪಿ ಆರ್‌.ಆರ್‌ ನಗರದ ಕಂದಾಯ ನಿರೀಕ್ಷಕ ಬಿ.ಎಸ್‌. ಶ್ರೀರಾಂಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಹಾಗೂ ಮೂರು ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

‍ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಲಕ್ಷ್ಮೀನಾರಾಯಣ, ಭಾಲ್ಕಿ ಡಿ. ಕುನ್ಹ ಎಂಬುವರು ಶೆಡ್‌ ಖರೀದಿಸಿದ್ದರು. ಇದರ ಖಾತೆ ವರ್ಗಾವಣೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ವರದಿ ಕೊಡುವಂತೆ ಶ್ರೀರಾಂ ಅವರನ್ನು ಸಹಾಯಕ ಕಂದಾಯ ಅಧಿಕಾರಿ ಕಚೇರಿ ಕೇಳಿತ್ತು. ಈ ಕೆಲಸ ಮಾಡಿಕೊಡಲು ಅವರು ₹ 2 ಲಕ್ಷ ಲಂಚ ಕೇಳಿದ್ದರು. 
ಮುಂಗಡವಾಗಿ ₹ 20,000 ಕೊಡುವಂತೆ ಹೇಳಿದ್ದರು. 

ಈ ಬಗ್ಗೆ ಶೆಡ್ ಮಾಲೀಕರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಹೆಗಡೆ, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್‌ 7ರ ಅಡಿ ನಾಲ್ಕು ವರ್ಷ ಜೈಲು ಮತ್ತು ₹ 1 ಲಕ್ಷ ದಂಡ ಹಾಗೂ ಸೆಕ್ಷನ್‌ 13 (1)(ಡಿ) ಹಾಗೂ 13 (2)ರ ಅಡಿ ನಾಲ್ಕು ವರ್ಷ ಜೈಲು ಮತ್ತು 2 ಲಕ್ಷ ದಂಡ ವಿಧಿಸಿದ್ದಾರೆ.

ಎರಡೂ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಲ್ಲಿರುತ್ತವೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಪ್ರಾಸಿಕ್ಯೂಷನ್ ಪರ ಆರ್‌.ಆರ್ ಹೊಸಹಳ್ಳಿ ಮಠ ವಾದಿಸಿದ್ದರು.

2013ರ ಅಕ್ಟೋಬರ್‌ 7ರಂದು ₹ 20,000 ಪಡೆಯುವಾಗ ಕಂದಾಯ ನಿರೀಕ್ಷಕ ಬಿ.ಎಸ್‌. ಶ್ರೀರಾಂಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !